ಮಲ್ಯ ಗಡೀಪಾರಿಗೆ ಇನ್ನೊಂದೇ ಮೆಟ್ಟಿಲು| ಹಸ್ತಾಂತರ ಪ್ರಶ್ನಿಸಿದ್ದ ‘ಮದ್ಯದ ದೊರೆ’ ಅರ್ಜಿ ಬ್ರಿಟನ್ ಹೈಕೋರ್ಟಲ್ಲಿ ವಜಾ| 14 ದಿನದಲ್ಲಿ ಮೇಲ್ಮನವಿಗೆ ಅವಕಾಶ ಕೇಳದಿದ್ದರೆ ಭಾರತಕ್ಕೆ ಗಡೀಪಾರು ಸಲೀಸು| ಮೇಲ್ಮನವಿ ಹಾಕಿದರೆ ವಿಳಂಬ| ಸಿಬಿಐ, ಇ.ಡಿ. ಹೋರಾಟಕ್ಕೆ ಮಹತ್ವದ ಜಯ
ಲಂಡನ್(ಏ.21): ಬ್ಯಾಂಕುಗಳಿಗೆ 9 ಸಾವಿರ ಕೋಟಿ ರು. ಸಾಲ ಮರುಪಾವತಿಸದೆ ಬ್ರಿಟನ್‌ಗೆ ಪರಾರಿಯಾಗಿದ್ದ ‘ಮದ್ಯದ ದೊರೆ’ ವಿಜಯ್ ಮಲ್ಯ ಗಡೀಪಾರಿಗೆ ಹೋರಾಟ ನಡೆಸುತ್ತಿರುವ ಕೇಂದ್ರ ಸರ್ಕಾರಕ್ಕೆ ಮಹತ್ವದ ಜಯ ಲಭಿಸಿದೆ. ಗಡೀಪಾರು ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್ ಹೈಕೋರ್ಟ್‌ವೊಂದು ಸೋಮವಾರ ವಜಾಗೊಳಿಸಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ಅನುಮತಿ ಕೇಳಲು ಮಲ್ಯಗೆ 14 ದಿನಗಳ ಸಮಯಾವಕಾಶವಿದೆ. ಆತ ಅರ್ಜಿ ಸಲ್ಲಿಸದೇ ಹೋದಲ್ಲಿ, ಭಾರತ- ಬ್ರಿಟನ್ ಗಡೀಪಾರು ಒಪ್ಪಂದದ ಅನ್ವಯ ನ್ಯಾಯಾಲಯ ಆದೇಶವನ್ನು ಪ್ರಮಾಣೀಕರಿಸಲಾಗುತ್ತದೆ. ಅದಾದ 28 ದಿನಗಳಲ್ಲಿ ಮಲ್ಯ ಭಾರತಕ್ಕೆ ಗಡೀಪಾರಾಗಲಿದ್ದಾನೆ.
ಒಂದು ವೇಳೆ, ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿ ಮಲ್ಯ ಅರ್ಜಿ ಸಲ್ಲಿಸಿದ್ದೇ ಆದಲ್ಲಿ, ಅದರ ನಿರ್ಧಾರ ಆಗುವವರೆಗೂ ಬ್ರಿಟನ್ ಗೃಹ ಇಲಾಖೆ ಕಾಯಲಿದೆ. ಒಟ್ಟಾರೆ ಸೋಮವಾರದ ಬೆಳವಣಿಗೆಯಿಂದಾಗಿ 64 ವರ್ಷದ ಮಲ್ಯ ಗಡೀಪಾರಿಗೆ ಕೇವಲ ಇನ್ನೊಂದು ಮೆಟ್ಟಿಲು ಉಳಿದಂತಾಗಿದೆ. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಪ್ರಯತ್ನಕ್ಕೆ ಭರ್ಜರಿ ಯಶಸ್ಸು ಸಿಕ್ಕಂತಾಗಿದೆ.
undefined
ನನಗೆ ಕೊಟ್ಟ ಸಾಲ ತೆಗೆದುಕೊಳ್ಳಿ, ಕೊರೋನಾ ಸಮರಕ್ಕೆ ಬಳಸಿ: ಮತ್ತೆ ಮಲ್ಯ ಮನವಿ!
ಏನಿದು ಪ್ರಕರಣ?:
ನಷ್ಟದಲ್ಲಿದ್ದ ಕಿಂಗ್‌ಫಿಷರ್ ನಡೆಸಲು ಬ್ಯಾಂಕುಗಳಿಂದ ಸಾಲ ಪಡೆದಿದ್ದ ಮಲ್ಯ, ಅದನ್ನು ತೀರಿಸಲಾಗದೆ 2016 ಮಾ.2ರಂದು ಬ್ರಿಟನ್‌ಗೆ ಪರಾರಿಯಾಗಿದ್ದ. ಆತನನ್ನು ಗಡೀಪಾರು ಮಾಡಿಸಿಕೊಂಡು ಬರಲು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ.) ಕಾನೂನು ಹೋರಾಟ ಆರಂಭಿಸಿ, ಅಪಾರ ದಾಖಲೆಗಳನ್ನು ಬ್ರಿಟನ್‌ಗೆ ಒದಗಿಸಿದ್ದವು. 2018ರ ಡಿಸೆಂಬರ್‌ನಲ್ಲಿ ಲಂಡನ್‌ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಪ್ರೇಟ್ ನ್ಯಾಯಾಲಯವು ಮಲ್ಯ ಗಡೀಪಾರಿಗೆ ಆದೇಶಿಸಿತ್ತು. ಅದರ ವಿರುದ್ಧ ಮಲ್ಯ ಹೈಕೋರ್ಟ್ ಮೊರೆ ಹೋಗಿದ್ದ.
ಇದೀಗ ತೀರ್ಪು ಪ್ರಕಟಿಸಿರುವ ನ್ಯಾಯಾಲಯ, ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ತಪ್ಪು ಮಾಹಿತಿ ಒದಗಿಸಿರುವುದು, ಸಂಚು ನಡೆಸಿರುವುದು ಗೊತ್ತಾಗುತ್ತಿದೆ. ಅಕ್ರಮ ಹಣ ವರ್ಗಾವಣೆಯೂ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕಿಂಗ್‌ಫಿಷರ್ ಏರ್‌ಲೈನ್ಸ್ ಆರ್ಥಿಕವಾಗಿ ದುರ್ಬಲವಾಗಿದ್ದರೂ, ಋುಣಾತ್ಮಕ ನಿವ್ವಳ ಮೌಲ್ಯ ಹಾಗೂ ಕಡಿಮೆ ಕ್ರೆಡಿಟ್ ರೇಟಿಂಗ್ ಹೊಂದಿದ್ದರೂ ಸಾಲ ವಿತರಿಸಲಾಗಿದೆ. ಇದರ ಹಿಂದೆ ಸಂಚು ಅಡಗಿದೆ ಎಂದು ತಿಳಿಸಿದೆ.
RCB ಲೋಗೋ ಅನಾವರಣ ಬೆನ್ನಲ್ಲೇ ಮಾಜಿ ಬಾಸ್ ಮಲ್ಯ ನೀಡಿದ್ರು ಸಲಹೆ!
ಬ್ರಿಟನ್‌ನಿಂಗ ಗಡೀಪಾರಾಗುವ 2ನೇ ವ್ಯಕ್ತಿ:
ಒಂದು ವೇಳೆ ಮಲ್ಯ ಏನಾದರೂ ಭಾರತಕ್ಕೆ ಗಡೀಪಾರಾಗಿ ಬಂದರೆ, 28 ವರ್ಷಗಳ ಹಿಂದೆ ಭಾರತ- ಬ್ರಿಟನ್ ಮಾಡಿಕೊಂಡಿರುವ ಗಡೀಪಾರು ಒಪ್ಪಂದದಡಿ ದೇಶಕ್ಕೆ ಹಸ್ತಾಂತರವಾಗುವ 2ನೇ ವ್ಯಕ್ತಿ ಎನಿಸಿಕೊಳ್ಳಲಿದ್ದಾನೆ. 2016ರಲ್ಲಿ ಗೋಧ್ರೋತ್ತರ ಗಲಭೆ ಸಂಬಂಧ ಸಮೀರ್‌ಭಾಯ್ ವಿನೂಭಾಯ್ ಪಟೇಲ್ ಎಂಬಾತನನ್ನು ಭಾರತಕ್ಕೆ ಬ್ರಿಟನ್ ಗಡೀಪಾರು ಮಾಡಿತ್ತು.