ಕಾರ್ಮಿಕರ ಕೊರತೆ: ಘಟಕ ಆರಂಭಕ್ಕೆ ಕಂಪನಿಗಳಿಗೆ ತೊಡಕು| ದೇಶಾದ್ಯಂತ ಅಲ್ಲಲ್ಲಿ ಮಾತ್ರವೇ ವಾಣಿಜ್ಯೋದ್ಯಮ ಚಟುವಟಿಕೆ| ಮೇ 3ರವರೆಗೂ ಕಾದು ನೋಡಲು ಹಲವು ಕಂಪನಿಗಳ ನಿರ್ಧಾರ
ನವದೆಹಲಿ(ಏ.21): ಕೊರೋನಾ ನಿಗ್ರಹಕ್ಕಾಗಿ ಮಾ.25ರಿಂದ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್ ಸೋಮವಾರದಿಂದ ಜಾರಿಗೆ ಬರುವಂತೆ ‘ಹಾಟ್‌ಸ್ಪಾಟ್’ ಅಲ್ಲದ ಪ್ರದೇಶಗಳಲ್ಲಿ ಕೊಂಚ ಸಡಿಲಗೊಂಡಿದೆ. ಆದರೆ ಮೊದಲ ದಿನವೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲೊಂದು ಇಲ್ಲೊಂದು ಎಂಬಂತೆ ಕಂಪನಿಗಳು ಹಾಗೂ ವಿವಿಧ ವಾಣಿಜ್ಯ ಚಟುವಟಿಕೆಗಳು ಕಾರ್ಯನಿರ್ವಹಣೆ ಆರಂಭಿಸಿವೆ. ಇದಕ್ಕೆ ಬಹುಮುಖ್ಯ ಕಾರಣ- ಕಾರ್ಮಿಕರ ಕೊರತೆ ಹಾಗೂ ಪೂರೈಕೆ ವ್ಯವಸ್ಥೆಯಲ್ಲಿನ ವ್ಯತ್ಯಯ.
ವಿಶ್ವದಲ್ಲೇ ಅತ್ಯಂತ ಬೃಹತ್ ಪ್ರಮಾಣದ ಲಾಕ್‌ಡೌನ್ ಅನ್ನು ಸಡಿಲಗೊಳಿಸಿ, ಆರ್ಥಿಕ ಚಟುವಟಿಕೆಗಳಿಗೆ ಹಂತಹಂತವಾಗಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಬಂಧಗಳನ್ನು ಲಘು ಪ್ರಮಾಣದಲ್ಲಿ ಸಡಿಲಗೊಳಿಸಿತ್ತು. ಕೃಷಿ ಚಟುವಟಿಕೆ, ಗ್ರಾಮೀಣ ಪ್ರದೇಶದ ಕೈಗಾರಿಕೆಗಳು, ನಿರ್ಮಾಣ ಕಾಮಗಾರಿ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಾರ್ಯನಿರ್ವಹಣೆಗೆ ವಿನಾಯಿತಿಗಳನ್ನು ಪ್ರಕಟಿಸಿತ್ತು.
ಪಾದರಾಯನಪುರ ಗಲಭೆಯ ಗುಟ್ಟು ಬಿಚ್ಚಿಟ್ಟ ಕೊರೋನ ವಾರಿಯರ್ಸ್!
ಆದರೆ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಅಸಂಖ್ಯಾತ ಪ್ರಮಾಣದಲ್ಲಿ ಕಾರ್ಮಿಕರು ವಲಸೆ ಹೋಗಿರುವುದರಿಂದ ಎಲ್ಲ ಕ್ಷೇತ್ರಗಳಿಗೂ ಮಾನವ ಸಂಪನ್ಮೂಲ ಕೊರತೆ ಕಾಡುತ್ತಿದೆ. ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಕಾರ್ಖಾನೆಗಳಿಗೆ ಉದ್ಯೋಗಿಗಳು ಬರುತ್ತಿಲ್ಲ. ಮುಖ್ಯವಾಗಿ ಕಾರ್ಖಾನೆಗಳಿಗೆ ಬೇಕಾದ ಕಚ್ಚಾ ವಸ್ತುಗಳ ಸಾಗಣೆಯಾಗುತ್ತಿಲ್ಲ. ಮತ್ತೊಂದೆಡೆ ಅತಿ ಹೆಚ್ಚು ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳನ್ನು ಹೊಂದಿರುವ ಕರ್ನಾಟಕ, ಉತ್ತರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಲಾಕ್‌ಡೌನ್ ಸಡಿಲಗೊಳಿಸದೆ ಇರಲು ನಿರ್ಧರಿಸಿರುವುದರಿಂದ ನಿರ್ಬಂಧಗಳು ಮುಂದುವರಿದಿವೆ. ಹೀಗಾಗಿ ಐಟಿ ಉದ್ಯೋಗಿಗಳು ಮನೆಯಿಂದಲೇ ಉದ್ಯೋಗ ಮಾಡುವಂತಾಗಿದೆ.
ವೈದ್ಯರು, ನರ್ಸ್‌ಗಳ ಸೇವೆಗೆ ಚೇತರಿಸಿದ ತಬ್ಲೀಘಿ ಸಲಾಂ!
ಮತ್ತೊಂದೆಡೆ, ಹಲವು ಕಂಪನಿಗಳು ಸರಕು ಸಾಗಣೆ ಹಾಗೂ ಜನರ ಓಡಾಡಕ್ಕೆ ಇರುವ ನಿರ್ಬಂಧ ಸಂಪೂರ್ಣ ತೆರವಾಗುವವರೆಗೂ ಕಾದು ನೋಡಲು ನಿರ್ಧರಿಸಿವೆ. ಹೀಗಾಗಿ ಮೇ 3ರ ನಂತರವೇ ವಾಣಿಜ್ಯೋದ್ಯಮ ಸಹಜ ಸ್ಥಿತಿಗೆ ಬರಬಹುದು ಎನ್ನಲಾಗುತ್ತಿದೆ.