
ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಬಳಿಕ ದೇಶದಲ್ಲಿ ಮಕ್ಕಳ ಕಳ್ಳ ಸಾಗಣೆ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದ್ದು, ಈ ಪೈಕಿ ಅತಿ ಹೆಚ್ಚಿನ ಏರಿಕೆ ಕರ್ನಾಟಕದಲ್ಲಿ ದಾಖಲಾಗಿದೆ. ಕೋವಿಡ್ ಪೂರ್ವದಲ್ಲಿ 6 ಇದ್ದ ಮಕ್ಕಳ ಕಳ್ಳ ಸಾಗಣೆ ಪ್ರಕರಣ ಇದೀಗ 110ಕ್ಕೆ ಏರಿಕೆಯಾಗಿದೆ. ಅಂದರೆ ಕರ್ನಾಟಕದಲ್ಲಿ ಮಕ್ಕಳ ಕಳ್ಳಸಾಗಣೆ ಪ್ರಮಾಣ 18 ಪಟ್ಟು ಹೆಚ್ಚಾಗಿದೆ. ಇನ್ನು ಮಕ್ಕಳ ಕಳ್ಳಸಾಗಣೆ ಸಂಖ್ಯೆಯನ್ನು ಆಧರಿಸಿ ಹೇಳುವುದಾದರೆ ಉತ್ತರ ಪ್ರದೇಶ (1214), ಬಿಹಾರ (703), ಆಂಧ್ರಪ್ರದೇಶ (210), ಕರ್ನಾಟಕ (110), ದೆಹಲಿ (106) ಕ್ರಮವಾಗಿ ಮೊದಲ 5 ಸ್ಥಾನಗಳಿಸಿವೆ ಎಂದು ವರದಿಯೊಂದು ಹೇಳಿದೆ.
2016ರಿಂದ 2022ರ ಅವಧಿ ಆಧಾರವಾಗಿಟ್ಟುಕೊಂಡು, ಗೇಮ್ಸ್ 24/7 ಮತು ಕೈಲಾಶ್ ಸತ್ಯಾರ್ಥಿ ಮಕ್ಕಳ ಸಂಸ್ಥೆ ಜಂಟಿಯಾಗಿ ವರದಿ ಸಿದ್ಧಪಡಿಸಿ ಬಿಡುಗಡೆ ಮಾಡಿವೆ. ಇದರಲ್ಲಿ 2016-19 ಸಮಯವನ್ನು ಕೋವಿಡ್ ಪೂರ್ವವೆಂದು, 2021-22 ಅನ್ನು ಕೋವಿಡ್ ಸಾಂಕ್ರಾಮಿಕದ ನಂತರದ ಕಾಲ ಎಂದು ಗುರುತಿಸಲಾಗಿದೆ.
3 ತಿಂಗಳ ಹೆಣ್ಣು ಮಗುವನ್ನು 7 ಬಾರಿ ಮಾರಾಟ: ಆರೋಪಿಗಳ ಬಂಧನ
ಎಲ್ಲಿ ಎಷ್ಟು ಹೆಚ್ಚಳ?:
2016-19ರ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ 267 ಇದ್ದ ಮಕ್ಕಳ ಕಳ್ಳಸಾಗಣೆ 2021-22ರಲ್ಲಿ 1214ಕ್ಕೆ ಏರಿಕೆಯಾಗಿದೆ. ಅದೇ ರೀತಿ ಬಿಹಾರದಲ್ಲಿ 2016-19ರಲ್ಲಿ 543 ಇದ್ದಿದ್ದು 2021-22ರಲ್ಲಿ 703ಕ್ಕೆ ಏರಿದೆ. ಇನ್ನು ಆಂಧ್ರಪ್ರದೇಶದಲ್ಲಿ 2021-19ರಲ್ಲಿ 50 ಇದ್ದಿದ್ದು, 2021-22ರಲ್ಲಿ 210ಕ್ಕೆ ಏರಿದೆ, ಕರ್ನಾಟಕದಲ್ಲಿ 6 ಇದ್ದಿದ್ದು, 110ಕ್ಕೆ ಮತ್ತು ದೆಹಲಿಯಲ್ಲಿ 63 ಇದ್ದಿದ್ದು 106ಕ್ಕೆ ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.
ವಯೋಮಿತಿ:
ಜೈಪುರ ಮಕ್ಕಳ ಕಳ್ಳಸಾಗಣೆಯ ಮೂಲ ತಾಣ ಎನಿಸಿಕೊಂಡಿದೆ. 13ರಿಂದ 18 ವರ್ಷದ ಮಕ್ಕಳನ್ನು ಹೆಚ್ಚಾಗಿ ಕಳ್ಳಸಾಗಣೆ ಮಾಡಲಾಗಿದೆ. ಸೌಂದರ್ಯವರ್ಧಕ ಉದ್ಯಮವು 5ರಿಂದ 8 ವರ್ಷದ ಮಕ್ಕಳನ್ನು ಹೆಚ್ಚಾಗಿ ನಾನಾ ರೀತಿಯ ಕೆಲಸಕ್ಕೆ ಬಳಸಿಕೊಳ್ಳುತ್ತಿದೆ ಎಂದು ವರದಿ ಹೇಳಿದೆ.
ಡ್ರಗ್ಸ್ ಸಾಗಾಟ, ಕಳೆದ 20 ವರ್ಷದಲ್ಲಿ ಮೊದಲ ಬಾರಿಗೆ ಮಹಿಳೆಯನ್ನು ಗಲ್ಲಿಗೇರಿಸಲಿರುವ ಸಿಂಗಾಪುರ
ಹೆಚ್ಚಳ ಏಕೆ?:
ಇತ್ತೀಚೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ರೈಲ್ವೆ ರಕ್ಷಣಾ ಪಡೆ, ಗಡಿ ಭದ್ರತಾ ಪಡೆಗಳು ಕಳ್ಳಸಾಗಣೆದಾರರನ್ನು ತಡೆಯಲು ಹಲವು ಕ್ರಮ ಕೈಗೊಳ್ಳುತ್ತಿರುವುದರಿಂದ ಮಕ್ಕಳ ಕಳ್ಳಸಾಗಣೆ ಪ್ರಮಾಣ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ರಕ್ಷಣೆ ಮಾಡಲಾದ ಮಕ್ಕಳದಲ್ಲಿ ಶೇ.80ರಷ್ಟು ಮಕ್ಕಳು 13ರಿಂದ 18 ವರ್ಷದವರಾಗಿದ್ದು, ಶೇ.13ರಷ್ಟು ಮಕ್ಕಳು 9ರಿಂದ 12 ವಯಸ್ಸಿನವರು ಹಾಗೂ ಶೇ.2ರಷ್ಟು ಮಕ್ಕಳು 9 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ