4 ಹುಡುಗಿಯರ ಮದುವೆ ಆಗುವುದು ಅಸ್ವಾಭಾವಿಕ ಎಂದು ಆಜ್‌ತಕ್ ವಾಹಿನಿಯ ಸಂದರ್ಶನದಲ್ಲಿ ನಿತಿನ್ ಗಡ್ಕರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿದ್ಯಾವಂತ ಮುಸ್ಲಿಮರು ಈ ರೀತಿ ಮದುವೆಯಾಗಲ್ಲ ಎಂದೂ ಅವರು ಹೇಳಿದ್ದಾರೆ.
ನವದೆಹಲಿ: ನಾಲ್ವರು ಹುಡುಗಿಯರನ್ನು ಮದುವೆ (Marriage) ಆಗುವುದು ಅಸ್ವಾಭಾವಿಕವಾಗಿದೆ (Unnatural) ಎಂದು ಕೇಂದ್ರ ಸಚಿವ (Union Minister) ನಿತಿನ್ ಗಡ್ಕರಿ (Nitin Gadkari) ಅಭಿಪ್ರಾಯಪಟ್ಟಿದ್ದಾರೆ. ಆಜ್‌ತಕ್ ವಾಹಿನಿಯ ಸಂವಾದದಲ್ಲಿ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ (Uniform Civil Code) ಬಗ್ಗೆ ಮಾತನಾಡುವಾಗ ಈ ಅನಿಸಿಕೆ ವ್ಯಕ್ತಪಡಿಸಿದರು.
‘ಎರಡು ನಾಗರಿಕ ಸಂಹಿತೆ ಹೊಂದಿರುವ ಯಾವುದೇ ಮುಸ್ಲಿಂ ದೇಶ (Muslim Nation) ನಿಮಗೆ ತಿಳಿದಿದೆಯೆ? ಒಬ್ಬ ಪುರುಷ ಒಂದು ಮಹಿಳೆಯನ್ನು ಮದುವೆಯಾಗುವುದು ಸಾಮಾನ್ಯ, ಆದರೆ ಅದೇ ಪುರುಷ ನಾಲ್ಕೈದು ಮಹಿಳೆಯರನ್ನು ಮದುವೆ ಆಗುವುದು ಅಸಹಜವಾಗಿದೆ. ಇನ್ನು ಪ್ರಗತಿಪರ ಹಾಗೂ ವಿದ್ಯಾವಂತ ಮುಸ್ಲಿಮರು 4 ಮದುವೆ ಆಗುವುದಿಲ್ಲ. ಏಕರೂಪ ನಾಗರಿಕ ಸಂಹಿತೆಯು ಯಾವುದೇ ಧರ್ಮದ ವಿರುದ್ಧವಲ್ಲ. ಅದು ದೇಶದ ಅಭಿವೃದ್ಧಿಗಾಗಿ’ ಎಂದರು.
ಇದನ್ನು ಓದಿ: ಸಂಸತ್ತಲ್ಲೂ ಈಗ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಚರ್ಚೆ: ಖಾಸಗಿ ಮಸೂದೆ ಮಂಡಿಸಿದ ಬಿಜೆಪಿಗ
‘ಸಮಾಜದಲ್ಲಿ ಗುಣಾತ್ಮಕ ಬದಲಾವಣೆ’ ಆಗಬೇಕು ಎಂದು ಹೇಳಿದ ಕೇಂದ್ರ ಸಚಿವರು, ಏಕರೂಪ ನಾಗರಿಕ ಸಂಹಿತೆ ಯಾವುದೇ ಧರ್ಮ ಅಥವಾ ಪಂಥಕ್ಕೆ ವಿರುದ್ಧವಾಗಿಲ್ಲ ಎಂದು ಹೇಳಿದರು. “ಹಿಂದೂ, ಮುಸ್ಲಿಂ ಅಥವಾ ಸಿಖ್ ಧರ್ಮದ ಹೊರತಾಗಿ ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಬೇಕಲ್ಲವೇ..? ನಾವು ಒಟ್ಟಾಗಿ ನಮ್ಮ ದೇಶವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ನಿತಿನ್ ಗಡ್ಕರಿ ಹೇಳಿದರು.
ರಾಜ್ಯಗಳಿಗೆ ಮನವಿ ಮಾಡಿದ ನಿತಿನ್ ಗಡ್ಕರಿ, ರಾಜ್ಯಾದ್ಯಂತ ಎಲ್ಲಾ ಪಕ್ಷಗಳು ಏಕರೂಪ ನಾಗರಿಕ ಸಂಹಿತೆ ಕುರಿತು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಅದು ಮಾನವೀಯತೆ ಹಾಗೂ ರಾಷ್ಟ್ರಕ್ಕೆ ಒಳ್ಳೆಯದು ಎಂದು ಹೇಳಿದರು. ಕೇಂದ್ರ ಸರ್ಕಾರವು ಯಾವುದೇ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಂಡರೆ ಮತ್ತು ರಾಜ್ಯಗಳು ಆಕ್ಷೇಪಿಸಿದರೆ, ಕನ್‌ಕರೆಂಟ್ ಪಟ್ಟಿ ಇರುವುದರಿಂದ ಹೊರಬರುವ ಸಂದೇಶವು ಉತ್ತಮವಾಗುವುದಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ಸಾಧ್ಯವಾದಷ್ಟು ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ: ಬಿಜೆಪಿ ಅಧ್ಯಕ್ಷ ನಡ್ಡಾ ಘೋಷಣೆ
ಏಕರೂಪ ನಾಗರಿಕ ಸಂಹಿತೆಯನ್ನು ತರುವುದು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಒಂದಾಗಿದೆ. ಅಕ್ಟೋಬರ್ 29 ರಂದು ಗುಜರಾತ್ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಅನುಷ್ಠಾನಕ್ಕೆ ಸಮಿತಿಯನ್ನು ರಚಿಸುವುದಾಗಿ ಘೋಷಿಸಿತ್ತು. ಅಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಏಕರೂಪ ನಾಗರಿಕ ಸಂಹಿತೆಯನ್ನು ದೇಶಾದ್ಯಂತ ತರಲು ಬಿಜೆಪಿ ಬದ್ಧವಾಗಿದೆ, ಆದರೆ ಎಲ್ಲಾ ಪ್ರಜಾಪ್ರಭುತ್ವ ಪ್ರಕ್ರಿಯೆಗಳು ಮತ್ತು ಚರ್ಚೆಗಳನ್ನು ಅನುಸರಿಸಿದ ನಂತರವೇ ಎಂದು ಹೇಳಿದ್ದರು. "ಬಿಜೆಪಿ ಮಾತ್ರವಲ್ಲದೆ, ಸಂವಿಧಾನ ರಚನಾ ಸಭೆಯು ಸಂಸತ್ತಿಗೆ ಸಲಹೆ ನೀಡಿತ್ತು ಮತ್ತು ಏಕರೂಪ ನಾಗರಿಕ ಸಂಹಿತೆಯು ಸೂಕ್ತ ಸಮಯದಲ್ಲಿ ದೇಶಕ್ಕೆ ಬರಬೇಕು" ಎಂದೂ ಅವರು ಹೇಳಿದ್ದರು.
ಇದನ್ನೂ ಓದಿ: ಮಹಿಳೆಗೂ ಒಂದಕ್ಕಿಂತ ಹೆಚ್ಚು ಮದುವೆಯಾಗೋ ಹಕ್ಕು ಕೊಡಿ: ಮುಸಲ್ಮಾನ ವೈಯಕ್ತಿಕ ಕಾನೂನು ವಿರುದ್ಧ ಜಾವೇದ್ ಅಖ್ತರ್ ಕಿಡಿ
ನಾನು ಆಹಾರ ಪ್ರಿಯ, ನಿತ್ಯ ತಿಂಡಿ ಬಗ್ಗೆ ಯೋಚಿಸುವೆ
ನಾನೊಬ್ಬ ಆಹಾರ ಪ್ರಿಯ. ಪ್ರತಿದಿನ ಸಂಜೆಯಾದರೆ ಎಲ್ಲಿ ತಿಂಡಿ ತಿನ್ನಬೇಕು, ಏನು ತಿನ್ನಬೇಕು ಎನ್ನುವುದೇ ಆಲೋಚಿಸುತ್ತೇನೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅಜೆಂಡಾ ಆಜ್ ತಕ್‌ನಲ್ಲಿ ಮಾತನಾಡಿದ ಅವರು, ‘ಇಳಿ ವಯಸ್ಸಿನಲ್ಲೂ ಆಹಾರದ ಸೇವನೆಯಲ್ಲಿ ಯಾವುದೇ ಕಡಿಮೆಯಿಲ್ಲ. ಆದರೆ ಆಹಾರದ ಪ್ರಮಾಣದಲ್ಲಿ ಮಾತ್ರ ನಿಯಂತ್ರಣವಿದೆ’ ಎಂದು ಹೇಳಿದರು. ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಸಂದೇಶ ನೀಡಿದರು.
ಈ ಮಧ್ಯೆ ‘ಟೆಸ್ಲಾ ಕಂಪನಿ ಭಾರತದಲ್ಲಿ ಕಾರುಗಳನ್ನು ಉತ್ಪಾದನೆಗೆ ಮಾಡಲು ಬಯಸುತ್ತಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಅದರಂತೆ ಭಾರತ ಸಹ ಟೆಸ್ಲಾಗೆ ಅವಕಾಶ ನೀಡಲಿದೆ’ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಶೀಘ್ರ ನಿರ್ಧಾರ: ಸಿಎಂ ಬೊಮ್ಮಾಯಿ