ಸಂಹಿತೆ ರಾಷ್ಟ್ರೀಯ ವಿಷಯ, ಇದರ ಜಾರಿಗೆ ಬದ್ಧ ಎಂದು ಬಿಜೆಪಿ ಅಧ್ಯಕ್ಷ ನಡ್ಡಾ ಘೋಷಣೆ ಮಾಡಿದ್ದಾರೆ. ಕರ್ನಾಟಕದಲ್ಲೂ ಸಂಹಿತೆ ಸದ್ದು ಎದ್ದಿರುವ ನಡುವೆ ಈ ಹೇಳಿಕೆ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಅಹಮದಾಬಾದ್: ‘ಸಾಧ್ಯವಾದಷ್ಟು ಎಲ್ಲ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (Unifrom Civil Code) ಜಾರಿಗೊಳಿಸಲು ಬಿಜೆಪಿ ಇಚ್ಛಿಸುತ್ತದೆ’ ಎಂದು ಹೇಳಿರುವ ಬಿಜೆಪಿ (BJP) ಅಧ್ಯಕ್ಷ ಜೆ.ಪಿ. ನಡ್ಡಾ (J.P. Nadda), ‘ಸಂಹಿತೆ ಎಂಬುದು ರಾಷ್ಟ್ರೀಯ ವಿಷಯ. ಇದರ ಜಾರಿಗೆ ಪಕ್ಷ ಬದ್ಧ’ ಎಂದಿದ್ದಾರೆ. ಈಗಾಗಲೇ ಗುಜರಾತ್ (Gujarat), ಹಿಮಾಚಲ ಪ್ರದೇಶ (Himachal Pradesh) ಹಾಗೂ ಉತ್ತರಾಖಂಡದಲ್ಲಿ (Uttarakhand) ಏಕರೂಪ ಸಂಹಿತೆ ಅಧ್ಯಯನಕ್ಕೆ ಸಮಿತಿ ರಚನೆ ಘೋಷಿಸಲಾಗಿದೆ. ಕರ್ನಾಟಕ (Karnataka) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕೂಡ ಸಂಹಿತೆ ಜಾರಿ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಡ್ಡಾ ಮಾತಿಗೆ ಮಹತ್ವ ಬಂದಿದೆ.
ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ‘ಪಿಟಿಐ ಸುದ್ದಿಸಂಸ್ಥೆ’ ಜತೆ ಮಾತನಾಡಿದ ನಡ್ಡಾ ಅವರು, ‘ದೇಶದ ಸಂಪನ್ಮೂಲಗಳು ಎಲ್ಲರಿಗೂ ಹೇಗೆ ಸಮಾನ ಹಂಚಿಕೆ ಆಗಬೇಕೋ ಹಾಗೆಯೇ ಹೊಣೆಗಾರಿಕೆ ಕೂಡ ಸಮಾನವಾಗಿ ಹಂಚಿಕೆ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರಿಗೂ ಸಮಾನ ಕಾನೂನು ನೀಡುವ ಏಕರೂಪ ನಾಗರಿಕ ಸಂಹಿತೆ ಸ್ವಾಗತಾರ್ಹ ಹೆಜ್ಜೆ. ಸಂಹಿತೆಯು ಬಿಜೆಪಿ ಪಾಲಿಗೆ ರಾಷ್ಟ್ರೀಯ ವಿಷಯ ಹಾಗೂ ಇದರ ಜಾರಿಗೆ ಪಕ್ಷ ಬದ್ಧ. ನಾವು ಸಾಧ್ಯವಾದಷ್ಟು ಎಲ್ಲ ರಾಜ್ಯಗಳಲ್ಲಿ ಇದರ ಜಾರಿಗೆ ಇಚ್ಛಿಸುತ್ತೇವೆ’ ಎಂದರು.
ಇದನ್ನು ಓದಿ: ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಶೀಘ್ರ ನಿರ್ಧಾರ: ಸಿಎಂ ಬೊಮ್ಮಾಯಿ
ಉಗ್ರ ನಿಗ್ರಹ ಘಟಕಕ್ಕೆ ಸಮರ್ಥನೆ
ಭಾರತ ವಿರೋಧಿ ಶಕ್ತಿಗಳ ಸ್ಲೀಪರ್ ಸೆಲ್‌ಗಳನ್ನು ಗುರುತಿಸಿ, ಮಟ್ಟಹಾಕಲು ಪ್ರತ್ಯೇಕ ಮೂಲಭೂತವಾದ ನಿಗ್ರಹ ಘಟಕಕ್ಕೆ ಗುಜರಾತ್ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ ಆಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ ನಡ್ಡಾ, ‘ಮಾನವನ ದೇಹದಲ್ಲಿ ಪ್ರತಿಕಾಯ ಶಕ್ತಿಗಳು ರೋಗ ತಡೆಯುತ್ತವೆ. ಅದೇ ರೀತಿ ರಾಷ್ಟ್ರ ವಿರೋಧಿ ಶಕ್ತಿಗಳನ್ನು ತಡೆಯುವುದು ಎಲ್ಲ ರಾಜ್ಯಗಳ ಹೊಣೆಗಾರಿಕೆ’ ಎಂದು ಸಮರ್ಥಿಸಿಕೊಂಡರು.
ಮುಸ್ಲಿಮರಿಗೆ ಟಿಕೆಟ್ ಏಕಿಲ್ಲ?:
‘ಗುಜರಾತ್ನಲ್ಲಿ ಮುಸ್ಲಿಮರಿಗೆ ಟಿಕೆಟ್ ಏಕೆ ನೀಡಿಲ್ಲ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಗೆಲುವಿನ ಮಾನದಂಡ ಆಧರಿಸಿ ಟಿಕೆಟ್ ನೀಡಿದ್ದೇವೆ. ಜಾತಿ ಧರ್ಮ ಆಧರಿಸಿ ಅಲ್ಲ. ಆದರೆ ಬಿಜೆಪಿ ಮುಸ್ಲಿಮರನ್ನೂ ರಾಷ್ಟ್ರಪತಿ, ರಾಜ್ಯಪಾಲರನ್ನಾಗಿ ಮಾಡಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಧ್ಯೇಯ’ ಎಂದರು.
ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಿಜೆಪಿ ಬದ್ಧ: ಅಮಿತ್ ಶಾ
ನಮ್ಮದು ಪುಕ್ಕಟೆ ಕೊಡುಗೆ ಅಲ್ಲ:
‘ಒಂದು ಕಡೆ ವಿಪಕ್ಷಗಳ ಪುಕ್ಕಟೆ ಕೊಡುಗೆ ಟೀಕಿಸಿ ಗುಜರಾತ್ನ ನಿಮ್ಮ ಪ್ರಣಾಳಿಕೆಯಲ್ಲೂ ಪುಕ್ಕಟೆ ಕೊಡುಗೆ ಘೋಷಣೆ ಮಾಡಿದ್ದೀರಲ್ಲ?’ ಎಂಬ ಪ್ರಶ್ನೆಗೆ ಉತ್ತರಿಸಿದ ನಡ್ಡಾ, ‘ನಮ್ಮದು ಪುಕ್ಕಟೆ ಕೊಡುಗೆ ಎನ್ನಲಾಗದು. ಯಾರು ದುರ್ಬಲರಿದ್ದಾರೋ ಅವರ ಉದ್ಧಾರಕ್ಕೆ ಮಾತ್ರ ಉಚಿತ ಕೊಡುಗೆ ನೀಡಲಾಗುತ್ತಿದೆ. ಕಾಂಗ್ರೆಸ್, ಆಪ್ನಂತೆ ಎಲ್ಲರಿಗೂ ಉಚಿತ ಕೊಡುಗೆ ನೀಡುತ್ತೇವೆ ಎಂದು ನಾವು ಘೋಷಿಸಿಲ್ಲ. ಆಪ್ ಹಾಗೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಅದಕ್ಕೆ ಅವರು ರಾಜ್ಯದ ಆರ್ಥಿಕ ಸ್ಥಿತಿ ಮನಗಾಣದೆ ಬಾಯಿಗೆ ಬಂದಂತೆ ಪುಕ್ಕಟೆ ಕೊಡುಗೆ ಘೋಷಿಸುತ್ತಿವೆ. ಆದರೆ ನಾವು ರಾಜ್ಯದ ಆರ್ಥಿಕತೆ ಗಮನದಲ್ಲಿ ಇರಿಸಿಕೊಂಡು ದುರ್ಬಲರಿಗೆ ಮಾತ್ರ ಉಚಿತ ಕೊಡುಗೆ ನೀಡುತ್ತೇವೆ’ ಎಂದರು.
ಇದನ್ನೂ ಓದಿ: ಗೆದ್ದರೆ ಏಕರೂಪ ನಾಗರಿಕ ಸಂಹಿತೆ: ಹಿಮಾಚಲದಲ್ಲಿ ಬಿಜೆಪಿ ಪ್ರಣಾಳಿಕೆ