Latest Videos

ಹೆಣ್ಣೆಂಬ ಮೋಹಪಾಶ: ದೇಶದ್ರೋಹಿ ಪಟ್ಟದ ಜೊತೆ ಜೈಲುವಾಸ: ಯುವ ವಿಜ್ಞಾನಿಯ ದುರಂತ ಕತೆ

By Anusha KbFirst Published Jun 17, 2024, 4:22 PM IST
Highlights

ತಾನು ಮಾಡಿದ ಅದೊಂದು ಚಾಟ್ ತನ್ನನ್ನು ದೇಶದ್ರೋಹಿಯಾಗಿಸಬಹುದು. ಜೈಲಿನಲ್ಲಿ ಕೊಳೆಯುವಂತೆ ಮಾಡಬಹುದು ಎಂಬ ಊಹೆ ಆತನಿಗೆ ಇತ್ತೋ ಇಲ್ಲವೋ ಆದರೆ ಆತ ಅಂದು ಮೈ ಮರೆತು ಮಾಡಿದ ಒಂದು ಚಾಟ್‌ಗೆ ಇಂದು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಇದು ಬ್ರಹ್ಮೋಸ್‌ನ ಮಾಜಿ ಇಂಜಿನಿಯರ್ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ನಿಶಾಂತ್ ಅಗರ್ವಾಲ್ ದುರಂತ ಕತೆ...

ನವದೆಹಲಿ: ತಾನು ಮಾಡಿದ ಅದೊಂದು ಚಾಟ್ ತನ್ನನ್ನು ದೇಶದ್ರೋಹಿಯಾಗಿಸಬಹುದು. ಜೈಲಿನಲ್ಲಿ ಕೊಳೆಯುವಂತೆ ಮಾಡಬಹುದು ಎಂಬ ಊಹೆ ಆತನಿಗೆ ಇತ್ತೋ ಇಲ್ಲವೋ ಆದರೆ ಆತ ಅಂದು ಮೈ ಮರೆತು ಮಾಡಿದ ಒಂದು ಚಾಟ್‌ಗೆ ಇಂದು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಮುಂದೆ ಇಸ್ರೋದಲ್ಲೋ ಅಥವಾ ಭಾರತದ ಇನ್ಯಾವುದೋ ಐತಿಹಾಸಿಕ ಸಾಧನೆಗಳಲ್ಲಿ ಕೇಳಿ ಬರಬೇಕಾದಷ್ಟು ಪ್ರತಿಭೆ ಇದ್ದ ಆತನ ಹೆಸರೀಗ ದೇಶದ್ರೋಹವೆಸಗಿದ ಪ್ರಕರಣದಲ್ಲಿ ಕೇಳಿ ಬಂದಿದೆ. ಇದು ಬ್ರಹ್ಮೋಸ್‌ನ ಮಾಜಿ ಇಂಜಿನಿಯರ್ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ನಿಶಾಂತ್ ಅಗರ್ವಾಲ್ ದುರಂತ ಕತೆ...

ಭಾರತದ ವಿರುದ್ಧ ಗೂಢಚಾರಿಕೆ ನಡೆಸುತ್ತಿರುವ ಪಾಕಿಸ್ತಾನ ಇದಕ್ಕಾಗಿ ಭಾರತೀಯ ತರುಣಿಯರಂತೆ  ನಟನೆ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಭಾರತ ರಕ್ಷಣಾ ಇಲಾಖೆಗೆ ಸೇರಿದ ಸಿಬ್ಬಂದಿಗಳು, ಅಧಿಕಾರಿಗಳನ್ನು ಬಲೆಗೆ ಕೆಡವಿ ಅವರಿಂದ ದೇಶದ ರಕ್ಷಣೆಗೆ ಸಂಬಂಧಿಸಿದ ಅತ್ಯಂತ ಗೌಪ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಭಾರತದ ಅಮೂಲ್ಯ ವಿಚಾರಗಳನ್ನು ಪಾಕಿಸ್ತಾನಕ್ಕೆ ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬ್ರಹ್ಮೋಸ್‌ ಏರೋಸ್ಪೇಸ್‌ನ ಮಾಜಿ ಇಂಜಿನಿಯರ್ ಹಾಗೂ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ನಿಶಾಂತ್ ಅಗರ್ವಾಲ್ ಅವರಿಗೆ ಸಂಬಂಧಿಸಿದ ಕೋರ್ಟ್ ಡಾಕ್ಯುಮೆಂಟ್‌ಗಳಿಂದ ಈ ವಿಚಾರ ಬೆಳಕಿಗೆ ಬಂದಿದೆ.

ಪಾಕಿಸ್ತಾನ ಪರ ಬೇಹುಗಾರಿಕೆ: DRDO ಯುವ ವಿಜ್ಞಾನಿ ಅವರ್ಡಿ, ಬ್ರಹ್ಮೋಸ್‌ ಮಾಜಿ ಎಂಜಿನಿಯರ್‌ಗೆ ಜೈಲು

ಈ ಪಾಕಿಸ್ತಾನ್ ಸ್ಪೈಗಳು ತಮ್ಮನ್ನು ತಾವು ಭಾರತೀಯ ಹೆಣ್ಣು ಮಕ್ಕಳ ಹೆಸರಿನಲ್ಲಿ ಪರಿಚಯ ಮಾಡಿಕೊಳ್ಳುತ್ತಾರೆ, ಸೇಜಲ್ ಕಪೂರ್, ಆರೋಹಿ ಅಲೊಕ್, ಅದಿತಿ ಆರೋನ್, ಅದಿತಿ ಅಗರ್ವಾಲ್, ಅನಾಮಿಕಾ ಶರ್ಮಾ, ದಿವ್ಯಾ ಚಂದನ್ ರಾಯ್, ನೇಹಾ ಶರ್ಮಾ ಪೂಜಾ ರಂಜನ್ ಹೀಗೆ ವಿಭಿನ್ನವಾದ ಭಾರತೀಯ ಹೆಸರುಗಳಿಂದ ಕರೆಸಿಕೊಳ್ಳುವ ಇವರು, ನಂತರ ನಿಧಾನವಾಗಿ  ಭಾರತೀಯ ಸೇನೆ ಹಾಗೂ ರಕ್ಷಣಾ ಕ್ಷೇತ್ರದ ಆಯಕಟ್ಟಿನ ಸ್ಥಳಗಳಲ್ಲಿ ಕೆಲಸ ಮಾಡುವ ರಕ್ಷಣಾ ಸಿಬ್ಬಂದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಿ ಅವರನ್ನು ಸೆಳೆಯಲು ಪ್ರಯತ್ನಿಸುತ್ತಾರೆ ಎಂದು ಕೋರ್ಟ್‌ಗೆ ಸಲ್ಲಿಕೆಯಾದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. 

ಇದೇ ರೀತಿ ಪಾಕಿಸ್ತಾನದ ಸ್ಪೈಗಳ ಬಲೆಗೆ ಬಿದ್ದು, ರಹಸ್ಯ ದಾಖಲೆಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪ ಎದುರಿಸುತ್ತಿರುವ ನಿಶಾಂತ್ ಅಗರ್ವಾಲ್ ಅವರಿಗೆ ನಾಗಪುರದ ನ್ಯಾಯಾಲಯ ಈಗಾಗಲೇ ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಘೋಷಣೆ ಮಾಡಿದೆ. ನಿಶಾಂತ್ ಅಗರ್ವಾಲ್‌ನನ್ನು ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಭಯೋತ್ಪಾದನ ನಿಗ್ರಹದಳವೂ 2018ರಲ್ಲಿ ಬಂಧಿಸಿತ್ತು. 

ಚೀನಾದ ಮೇಲೆ ಹದ್ದಿನ ಕಣ್ಣು, ಫಿಲಿಪ್ಪಿನ್ಸ್‌ಗೆ ಮೊದಲ ಬ್ಯಾಚ್‌ನ ಬ್ರಹ್ಮೋಸ್‌ ಕ್ಷಿಪಣಿ ರವಾನಿಸಿದ ಭಾರತ!

ಈತನ ವಿಚಾರಣೆ ವೇಳೆ ಹೇಗೆ ನಿಶಾಂತ್ ಅಗರ್ವಾಲ್, ಸೇಜಲ್ ಹೆಸರಿನ ನಕಲಿ ಫೇಸ್‌ಬುಕ್ ಖಾತೆಯ ಜೊತೆ ಚಾಟ್ ಮಾಡಿ ತಾನೂ ಊಹಿಸಿಯೂ ಇರದ ಸಂಕಷ್ಟಕ್ಕೆ ಸಿಲುಕಿದ ಎಂಬುದರ ವಿವರವಿದೆ. ಉತ್ತರ ಪ್ರದೇಶದ ಎಟಿಎಸ್‌ ಅಧಿಕಾರಿ ಪಂಕಜ್ ಅವಸ್ಥಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಅಗರ್ವಾಲ್ ವಿಚಾರಣೆ ವೇಳೆ ಆತ ಚಾಟ್ ಮಾಡಿದ್ದು ಪಾಕಿಸ್ತಾನದಿಂದ ಅಪರೇಟ್ ಆಗುತ್ತಿರುವ ಖಾತೆಯೊಂದರ ಜೊತೆಗೆ ಹಾಗೂ ಆಕೆ ಈ ಖಾತೆಯ ಮೂಲಕ ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. 

ಚಾಟ್‌ಗಳ ಪ್ರಕಾರ ಆಕೆ ಭಾರತೀಯ ರಕ್ಷಣಾ ಸಿಬ್ಬಂದಿಯನ್ನು ವಂಚಿಸುವ ಬಗ್ಗೆ ಸಲಹೆ ಹಾಗೂ ಮಾಹಿತಿಯನ್ನು ಹಂಚಿಕೊಂಡ ಉಂಪಿನ ಭಾಗವಾಗಿದ್ದಳು. ಅದರಲ್ಲೂ ಒಂದು ಚಾಟ್‌ನಲ್ಲಿ ಗುಂಪು ಸೈಬರ್ ಅಟ್ಯಾಕ್ ಬಗ್ಗೆಯೂ ಮಾತನಾಡಲು ಯತ್ನಿಸುವುದನ್ನು ಕಾಣುತ್ತದೆ. ಎಫ್‌ಬಿ ಫೇಕ್ ಖಾತೆಯಲ್ಲಿ ಸೇಜಲ್ ಹೆಸರಿನಲ್ಲಿ ಅಗರ್ವಾಲ್ ಜೊತೆ ಚಾಟ್ ಮಾಡುತ್ತಿದ್ದ ಈಕೆ ಮೊದಲಿಗೆ ತಾನು ಯುಕೆ ಮೂಲದ ಸಂಸ್ಥೆಗೆ ನೇಮಕಾತಿ ಮಾಡುವ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಳು. ಜೊತೆಗೆ ಮ್ಯಾಂಚೆಸ್ಟರ್‌ನ ವಿದ್ಯಾರ್ಥಿ ಎಂದು ಹೇಳಿಕೊಂಡಿದ್ದಳು. ಇತ್ತ ನಿಶಾಂತ್ ಅಗರ್ವಾಲ್ ಅವರು ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ತಾನು ಬ್ರಹ್ಮೋಸ್ ಏರ್‌ಸ್ಪೇಸ್‌ನಲ್ಲಿ ಸಿಸ್ಟಂ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವುದಾಗಿ ಉಲ್ಲೇಖಿಸಿಕೊಂಡಿದ್ದರು. ಇದರ ಜೊತೆಗೆ ನಿಶಾಂತ್ ಪೂಜಾ ರಂಜನ್ ಹಾಗೂ ನೇಹಾ ಶರ್ಮಾ ಎಂಬ ಎಫ್‌ಬಿ ಖಾತೆಯ ಜೊತೆಗೂ ನಿಶಾಂತ್ ಸ್ನೇಹಿತರಾಗಿದ್ದರು. ಆದರೆ ಆಘಾತಕಾರಿ ವಿಚಾರ ಎಂದರೆ ಈ ಎರಡು ಖಾತೆಗಳು ಕೂಡ ಪಾಕಿಸ್ತಾನದಿಂದಲೇ ನಿರ್ವಹಿಸಲ್ಪಡುತ್ತಿತ್ತು. 

ಬರೀ ಎಫ್‌ಬಿ ಮಾತ್ರವಲ್ಲ, ಇವರ ಚಾಟ್ ನಂತರ ಲಿಂಕ್ಡಿನ್‌ಗೂ ಮುಂದುವರೆದಿತ್ತು. ಅಲ್ಲದೇ ನಿಶಾಂತ್‌ನನ್ನು ಕೆಲಸಕ್ಕೆ ನೇಮಕಾತಿ ಮಾಡುವುದಕ್ಕೆ ಆಕೆ ಆಸಕ್ತಿ ತೋರುವಂತೆ ಚಾಟ್ ಮಾಡಿದ್ದಳು.  ಆದರೆ ಈ ಆಪ್‌ಗಳು ಮಾಲ್ವೇರ್( ವೈರಸ್) ಆಗಿದ್ದು, ಈ ಮೂಲಕ ಅಗರ್ವಾಲ್‌ನ ಲ್ಯಾಪ್‌ಟಾಪ್‌ನಿಂದ ಮಾಹಿತಿಯನ್ನು ಕದಿಯಲಾಗಿತ್ತು. ಅದರಲ್ಲಿ ವರ್ಗಿಕೃತವಾದ ಮಾಹಿತಿಗಳಿದ್ದವು. ಜೊತೆಗೆ ಆಕೆಯ ಟಾರ್ಗೆಟ್ ಕೇವಲ ನಿಶಾಂತ್ ಅಗರ್ವಾಲ್ ಮಾತ್ರ ಆಗಿರಲಿಲ್ಲ, ಆಕೆ ಇತರ ರಕ್ಷಣಾ ಅಧಿಕಾರಿಗಳನ್ನು ಕೂಡ ಸಂಪರ್ಕಿಸಲು ಪ್ರಯತ್ನಿಸಿದ್ದಳು. ಅವರಲ್ಲಿ ಒಬ್ಬರು ಲಕ್ನೋ ಮೂಲದ ಮಾಜಿ ಐಎಎಫ್ ಅಧಿಕಾರಿ, ಅವರು ಸೇಜಲ್ ಜೊತೆ ರೋಮ್ಯಾಂಟಿಕ್ ಚಾಟ್ ಕೂಡ ನಡೆಸಿದ್ದರು. ಇವರಿಗೂ ಈಕೆ ಮಾಹಿತಿ ಕದಿಯುವ ಮಾಲ್ವೇರ್ ವೈರಸ್‌ನ್ನು ಕಳುಹಿಸಿದ್ದಳು. ಆದರೆ ಅವರ ಲ್ಯಾಪ್‌ಟಾಪ್‌ನಲ್ಲಿ ಅಂತಹ ಗೌಪ್ಯವಾದ ದಾಖಲೆಗಳಾಗಲಿ ಸಾಕ್ಷ್ಯಗಳಾಗಲಿ ಇರಲಿಲ್ಲ, ಹೀಗಾಗಿ ಅವರನ್ನು ಆರೋಪಿ ಪಟ್ಟದಿಂದ ಕೈಬಿಡಲಾಗಿದೆ ಎಂದು ಎಟಿಎಸ್ ಅಧಿಕಾರಿ ಅವಸ್ಥಿ ಹೇಳಿದ್ದಾರೆ.

ಆದರೆ  ಆತುರಕ್ಕೆ ಬಿದ್ದೊ ಅಥವಾ ಹೆಣ್ಣೆಂಬ ಮೋಹಕ್ಕೆ ಬಲಿಯಾಗಿಯೋ ಏನೋ ಅಗಾಧ ಪ್ರತಿಭೆ ಹೊಂದಿದ್ದ ತರಗತಿಗಳಲ್ಲಿ ಟಾಪರ್ ಆಗಿದ್ದ, ಓದುತ್ತಿರುವಾಗಲೇ ಭಾರತದ ರಕ್ಷಣಾ ಸಂಸ್ಥೆ ಡಿಆರ್‌ಡಿಒದಿಂದ ಯುವ ವಿಜ್ಞಾನಿ ಪ್ರಶಸ್ತಿ ಪಡೆದಿದ್ದ ನಿಶಾಂತ್ ಅಗರ್ವಾಲ್ ಬದುಕು ದೇಶದ್ರೋಹಿ ಎಂಬ ಪಟ್ಟದೊಂದಿಗೆ ಜೈಲಿನೊಳಗೆ ಕಳೆಯುವಂತಾಗಿದ್ದು ಮಾತ್ರ ಬದುಕಿನ ವಿಪರ್ಯಾಸವೇ ಸರಿ.

click me!