
ನವದೆಹಲಿ: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ 275ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಭೀಕರ ರೈಲ್ವೆ ದುರಂತದ ತನಿಖೆಗೆ ಒಡಿಶಾ ಪೊಲೀಸರು, ‘ನಿರ್ಲಕ್ಷ್ಯದಿಂದ ಸಂಭವಿಸಿದ ದುರಂತ ಇದು’ ಎಂದು ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿದ್ದಾರೆ. ಇದೇ ಎಫ್‌ಐಆರ್ ಆಧಾರದ ಮೇಲೆ ಘಟನೆಯನ್ನು ಸಿಬಿಐ (ಕೇಂದ್ರೀಯ ತನಿಖಾ ಸಂಸ್ಥೆ) ತನಿಖೆ ನಡೆಸಲಿದೆ. ಈ ಮಧ್ಯೆ, ರೈಲ್ವೆ ಸುರಕ್ಷತಾ ಆಯುಕ್ತರು ಕೂಡ ಘಟನೆಯ ತನಿಖೆ ಆರಂಭಿಸಿದ್ದಾರೆ.
ಒಡಿಶಾ ಪೊಲೀಸರು ಘಟನೆಯ ಬಗ್ಗೆ ‘ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾದ ಬಗ್ಗೆ ಹಾಗೂ ಜನರ ಜೀವವನ್ನು ಅಪಾಯಕ್ಕೆ ಸಿಲುಕಿಸಿದ ಬಗ್ಗೆ’ ಕೇಸು ದಾಖಲಿಸಿದ್ದಾರೆ. ಸದ್ಯಕ್ಕೆ ರೈಲ್ವೆ ಇಲಾಖೆಯ ಯಾವುದೇ ನೌಕರನನ್ನು ಆರೋಪಿ ಎಂದು ಗುರುತಿಸಿಲ್ಲ. ತನಿಖೆಯ ವೇಳೆ ಆರೋಪಿಗಳನ್ನು ಪತ್ತೆಹಚ್ಚಲಾಗುತ್ತದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಸಿಬಿಐ ತಂಡ ಮಂಗಳವಾರ ಸ್ಥಳಕ್ಕೆ ತೆರಳಿ ಕಟಕ್ ರೈಲ್ವೆ ಪೊಲೀಸರಿಂದ ತನಿಖೆಯನ್ನು ತನ್ನ ಸುಪರ್ದಿಗೆ ಪಡೆಯಲಿದೆ. ರೈಲ್ವೆ ಸುರಕ್ಷತಾ ಆಯೋಗದ (Railway Safety Commission) ನೆರವನ್ನೂ ಸಿಬಿಐ ಕೇಳಲಿದೆ ಎಂದು ಮೂಲಗಳು ತಿಳಿಸಿವೆ.
ರೈಲ್ವೆ ದುರಂತ ತನಿಖೆ ಸಿಬಿಐಗೆ ವಹಿಸಿದ್ದಕ್ಕೆ ಮಲ್ಲಿಕಾರ್ಜುನ್ ಖರ್ಗೆ ಆಕ್ಷೇಪ
ಸ್ಥಳಕ್ಕೆ ಸುರಕ್ಷತಾ ಆಯುಕ್ತರ ಭೇಟಿ:
ಈಗಾಗಲೇ ರೈಲ್ವೆ ಇಲಾಖೆಯು ಘಟನೆಯ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ್ದು, ವಿಸ್ತೃತ ತನಿಖೆಯನ್ನು ಇದೀಗ ರೈಲ್ವೆ ಸುರಕ್ಷತಾ ಆಯುಕ್ತರು ಆರಂಭಿಸಿದ್ದಾರೆ. ಸುರಕ್ಷತಾ ಆಯುಕ್ತ ಶೈಲೇಶ್ ಕುಮಾರ್ ಪಾಠಕ್ ಬಾಹಾನಗ ರೈಲ್ವೆ ನಿಲ್ದಾಣಕ್ಕೆ ತೆರಳಿ ದುರಂತದ ಸ್ಥಳವನ್ನು ಪರೀಕ್ಷಿಸಿದ್ದಾರೆ. ಅಲ್ಲದೆ ಕಂಟ್ರೋಲ್ ರೂಮ್, ಸಿಗ್ನಲ್ ರೂಮ್, ಇಂಟರ್‌ಲಿಂಕಿಂಗ್ ವ್ಯವಸ್ಥೆಯನ್ನು ಕೂಡ ವೀಕ್ಷಿಸಿದ್ದಾರೆ. ರೈಲ್ವೆಯ ಆಂತರಿಕ ತನಿಖೆ ಹಾಗೂ ಸಿಬಿಐ ತನಿಖೆಗಳು ಪ್ರತ್ಯೇಕವಾಗಿ ನಡೆಯಲಿವೆ.
ಮುಖ್ಯ ಲೈನ್‌ಗೆ ಗ್ರೀನ್ ಸಿಗ್ನಲ್ (Green signal) ನೀಡಿದ್ದರೂ ಇಂಟರ್‌ಲಾಕಿಂಗ್ ((nter locking Point) ಪಾಯಿಂಟ್ ಬದಲಿಸಿ, ಪಕ್ಕದ ಲೂಪ್ ಲೈನ್‌ಗೆ ಸಂಪರ್ಕ ಕಲ್ಪಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು. ಇದರ ಹಿಂದೆ ಯಾರದ್ದಾದರೂ ಕೈವಾಡ ಇರಬಹುದು ಎಂಬ ಶಂಕೆಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwin Vaishnav) ವ್ಯಕ್ತಪಡಿಸಿದ್ದರು. ಹೀಗಾಗಿ ಸಿಬಿಐ ತನಿಖೆ ಮಹತ್ವ ಪಡೆದಿದೆ.
ಒಡಿಶಾ ತ್ರಿವಳಿ ರೈಲು ದುರಂತ: ಕೋರಮಂಡಲ್ ರೈಲಿನ ಚಾಲಕರ ಆರೋಗ್ಯ ಸ್ಥಿರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ