ಬೇಕಾ ಇಂಥಾ ಮಕ್ಕಳು? ಹೆತ್ತಮ್ಮನ ಮರಕ್ಕೆ ಕಟ್ಟಿ ಜೀವಂತವಾಗಿ ಸುಟ್ಟ ಇಬ್ಬರು ಗಂಡು ಮಕ್ಕಳು

By Anusha Kb  |  First Published Sep 30, 2024, 6:40 PM IST

ತ್ರಿಪುರಾದಲ್ಲಿ ಮಾನವೀಯತೆ ಮರೆತ ಗಂಡು ಮಕ್ಕಳಿಬ್ಬರು ತಮ್ಮ ವೃದ್ಧ ತಾಯಿಯನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಿ ಕೊಂದಿರುವ ಘಟನೆ ನಡೆದಿದೆ. 


ತ್ರಿಪುರಾ: ತಂದೆ ತಾಯಿಯನ್ನು ದೇವರಿಗೆ ಹೋಲಿಸಲಾಗುತ್ತದೆ. ಏನೇ ಮಾಡಿದರೂ ತಾಯಿಯ ಋಣ ಮಾತ್ರ ತೀರಿಸಲಾಗದು ಎಂಬ ನಂಬಿಕೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿದೆ. ಆದರೆ ತಮ್ಮನ್ನು ಹೆತ್ತು ಹೊತ್ತು ದೊಡ್ಡವರನ್ನಾಗಿಸಿದ ವೃದ್ಧ ತಾಯಿಯನ್ನೇ  ಗಂಡು ಮಕ್ಕಳಿಬ್ಬರು ಮರಕ್ಕೆ ಕಟ್ಟಿ  ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟ ಅಮಾನವೀಯ ಹಾಗೂ ಆಘಾತಕಾರಿ ಘಟನೆ ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ನಡೆದಿದೆ. 

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಕ್ಕಳು ವೃದ್ಧ ತಾಯಿಯನ್ನು  ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದಾರೆ. ತ್ರಿಪುರಾದ ಖಮರ್ಬರಿ ಪ್ರದೇಶ ಚಂಪಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಮಾಜ ತಲೆತಗ್ಗಿಸುವ ಈ ಘಟನೆ ನಡೆದಿದೆ. ಒಂದೂವರೆ ವರ್ಷಗಳ ಹಿಂದೆ ತನ್ನ ಪತಿ ತೀರಿಹೋದ ನಂತರ, ತನ್ನ ಇಳಿಸಂಜೆಯಲ್ಲಿದ್ದ ಈ ನತದೃಷ್ಟ ತಾಯಿ ತನ್ನಿಬ್ಬರು ಗಂಡು ಮಕ್ಕಳ ಜೊತೆ ವಾಸ ಮಾಡುತ್ತಿದ್ದಳು. 

Tap to resize

Latest Videos

ಆದರೆ ಮಕ್ಕಳಿಗೆ ಈ 62 ವರ್ಷ ಪ್ರಾಯದ ತಾಯಿ ಮೇಲೆ ಅದೇನು ಕೋಪವಿತ್ತೋ ಏನೋ? ಆಕೆ ತಮ್ಮ ಹೆತ್ತಬ್ಬೆ ಎಂಬುದನ್ನು ಕೂಡ ಯೋಚನೆ ಮಾಡದ ಮಕ್ಕಳು ವೃದ್ಧ ತಾಯಿಯನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಇಬ್ಬರು ಗಂಡು ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಮಹಿಳಗೆ ಒಟ್ಟು ಮೂವರು ಗಂಡು ಮಕ್ಕಳಿದ್ದು, ಅವರಲ್ಲೊಬ್ಬ ಅಗರ್ತಲಾದಲ್ಲಿ ವಾಸ ಮಾಡ್ತಿದ್ದ. 

ಮಗನ ಕಳೆದುಕೊಂಡ ತಾಯಿ ನೋವಿಗೆ ಮಿಡಿದ ಬೆಂಗಳೂರು ಪಾಸ್‌ಪೋರ್ಟ್ ಕಚೇರಿ: 3 ಗಂಟೆಯೊಳಗೆ ಸಿಕ್ತು ಪಾಸ್‌ಪೋರ್ಟ್‌

ಈ ಘಟನೆ ಬಗ್ಗೆ ವಿಚಾರ ತಿಳಿದು ಸ್ಥಳಕ್ಕೆ ಹೋದ ಪೊಲೀಸರಿಗೆ ಅಲ್ಲಿ ಮರಕ್ಕೆ ಕಟ್ಟಿದ್ದ ಸ್ಥಿತಿಯಲ್ಲಿ ಮಹಿಳೆಯ ಸುಟ್ಟು ಕರಕಲಾದ ಶವ ಸಿಕ್ಕಿದೆ. ನಂತರ ಮೃತದೇಹವನ್ನು ಮಹಜರು ಮಾಡಿದ ಪೊಲೀಸರು ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಜಿರನಿಯಾದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ  ಕಮಲ್ ಕೃಷ್ಣ ಕೊಲೊಯಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಗಂಡು ಮಕ್ಕಳನ್ನು ಬಂಧಿಸಲಾಗಿದೆ. ಮೂವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಪೊಲೀಸರು ಅವರನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ಬಯಸಿದ್ದಾರೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣವಿರಬಹುದು ಎಂದು ಪೊಲೀಸರು ಹೇಳಿದ್ದಾರೆ. 

ಒಟ್ಟಿನಲ್ಲಿ ಮಕ್ಕಳನ್ನು ಸಾಕಲು ಪೋಷಕರು ಇನ್ನಿಲ್ಲದ ತ್ಯಾಗ ಮಾಡಿರುತ್ತಾರೆ. ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ, ಮಕ್ಕಳಿಗೆ ಉತ್ತಮ ಸೌಲಭ್ಯ ನೀಡಿ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲಿ ಎಂದು ಬಯಸುತ್ತಾರೆ ಆದರೆ ಇದೆಲ್ಲವನ್ನು ಮರೆತ ಪಾಪಿ ಮಕ್ಕಳು ಅಮ್ಮನಿಗೆ ಜೀವ ಇದ್ದಾಗಲೇ ಚಟ್ಟ ಕಟ್ಟಿರುವುದು ಮಾತ್ರ ವಿಪರ್ಯಾಸ. 

ಬೇಕಾ ಇಂಥಾ ಮಕ್ಕಳು... ಮುಂಗೋಪಿ ಮಗ ಕಿಡಿಗೇಡಿ ಮೊಮ್ಮಗ : ವೃದ್ಧ ತಾಯಿ ಮೇಲೆ ಹಿಗ್ಗಾಮುಗ್ಗಾ ಥಳಿತ

click me!