
ಗಾಜಿಯಾಬಾದ್: ನಾನು ಸತ್ತ ಮೇಲೆ ಎಲ್ಲವನ್ನೂ ಮಾಡು. ಆದ್ರೆ ಮದುವೆ ಮಾತ್ರ ಅಗಬೇಡ ಎಂದು ವಿಡಿಯೋ ಮಾಡಿ ಪತ್ನಿಯ ಕಿರುಕುಳಕ್ಕೆ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಡ ಹೆಂಡತಿ ಅಂದ್ರೆ ಸಣ್ಣ ಪುಟ್ಟ ಜಗಳಗಳು ಇದ್ದೇ ಇರುತ್ತವೆ. ಆದ್ರೆ ಕೆಲವೊಮ್ಮೆ ಶುರುವಾದ ಜಗಳಗಳು ದುರಂತ ಅಂತ್ಯ ಕಾಣುತ್ತವೆ. ಇಲ್ಲೊಬ್ಬ ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಮುನ್ನ ವ್ಯಕ್ತಿ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಡಿಎಲ್‌ಎಫ್ ಕಾಲೋನಿಯ ನಿವಾಸಿಯಾಗಿರುವ 38 ವರ್ಷದ ಜಗಜಿತ್ ಸಿಂಗ್ ರಾಣಾ ಆತ್ಮಹತ್ಯೆಗೆ ಶರಣಾದ ಗಂಡ. ಔಷಧಗಳ ಪೂರೈಕೆಗೆ ಕೆಲಸ ಮಾಡಿಕೊಂಡಿದ್ದ ಜಗಜಿತ್ ಸಿಂಗ್, ಮನೆಯಲ್ಲಿ ಒಬ್ಬನೇ ವಾಸವಾಗಿದ್ದನು. ಪತ್ನಿ ಹಾಗೂ ಆಕೆಯ ಪೋಷಕರು ನೀಡಿದ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. 3 ನಿಮಿಷದ ಸೆಲ್ಫಿ ವಿಡಿಯೋ ಮಾಡಿರುವ ಜಗಜಿತ್ ಸಿಂಗ್, ಪತ್ನಿ ಬುಲಂದ್‌ಶಹರ್ ನಿವಾಸಿ ಎಂಬ ಮಾಹಿತಿಯನ್ನು ಹೇಳಿದ್ದಾನೆ. ನಂತರ ಸೆಲ್ಫಿ ವಿಡಿಯೋವನ್ನು ತನ್ನ ಎಲ್ಲಾ ಬಂಧು ಹಾಗೂ ಆಪ್ತರಿಗೆ ವಾಟ್ಸಪ್‌ನಲ್ಲಿ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೆಲ್ಫಿ ವಿಡಿಯೋದಲ್ಲಿ ಏನಿದೆ?
ನನ್ನ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಕಿರುಕುಳದಿಂದ ಬೇಸತ್ತು ಪ್ರಾಣ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ. ಪತ್ನಿ ಕುಟುಂಬಸ್ಥರು ಹೇಗೆ ಕಿರುಕುಳ ನೀಡಿದ್ದಾರೆ ಎಂದು ಪದಗಳಿಗೆ ವಿವರಿಸಲು ಸಾಧ್ಯವಾಗಲ್ಲ. ಪತ್ನಿಗೆ ನನ್ನ ಆಸ್ತಿಯಲ್ಲಿ ಯಾವುದೇ ಪಾಲು ನೀಡಬೇಡಿ. ನನ್ನ ಮುಖವನ್ನು ಸಹ ಆಕೆಗೆ ತೋರಿಸಬೇಡಿ. ಕೊರಳಿಗೆ ನೇಣು ಹಾಕಿಕೊಂಡೇ ವಿಡಿಯೋ ಮಾಡಿರುವ ಜಗಜಿತ್ ಸಿಂಗ್, ಜೀವನದಲ್ಲಿ ಏನು ಮಾಡಬೇಕೋ ಎಲ್ಲವನ್ನು ಮಾಡಿ. ಆದ್ರೆ ಎಂದಿಗೂ ಮದುವೆ ಆಗಬೇಡಿ. ಜೈ ಶ್ರೀರಾಮ್ ಎಂದು ಹೇಳಿ ನೇಣು ಹಾಕಿಕೊಂಡಿದ್ದಾರೆ.
ಆತ್ಮಹತ್ಯೆಯ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೃತದೇಹವನ್ನು ಫ್ಯಾನ್‌ನಿಂದ ಕೆಳಗಿಳಿಸಿ ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕುಟುಂಬಸ್ಥರಿಂದ ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ