ಮುಖೇಶ್‌ ಅಂಬಾನಿಗೆ ಮತ್ತೊಮ್ಮೆ ಜೀವ ಬೆದರಿಕೆ ಕರೆ, ರಿಲಯನ್ಸ್‌ ಆಸ್ಪತ್ರೆ ಸ್ಪೋಟಿಸುವ ಎಚ್ಚರಿಕೆ!

By Santosh NaikFirst Published Oct 5, 2022, 7:52 PM IST
Highlights

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಹಾಗೂ ವಿಶ್ವದ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರಾಗಿರುವ ಮುಖೇಶ್‌ ಅಂಬಾನಿಗೆ ಮತ್ತೊಮ್ಮೆ ಜೀವ ಬೆದರಿಕೆ ಕರೆ ಬಂದಿದೆ. ಈ ಬಾರಿ ಅವರ ಜೀವಕ್ಕೆ ಬೆದರಿಕೆ ಕರೆಯೊಂದಿಗೆ ಮಂಬೈನ ರಿಲಯನ್ಸ್‌ ಆಸ್ಪತ್ರೆಯನ್ನು ಸ್ಫೋಟ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ.
 

ಮುಂಬೈ (ಅ.5): ಮುಂಬೈನ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಮತ್ತೊಂದು ಬಾಂಬ್ ಬೆದರಿಕೆ ಕರೆ ಬಂದಿದೆ. ಆಸ್ಪತ್ರೆಯ ಸ್ಥಿರ ದೂರವಾಣಿ ಸಂಖ್ಯೆಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಅದರಲ್ಲಿ ಕರೆ ಮಾಡಿದವರು ಅಂಬಾನಿ ಕುಟುಂಬದ ಕೆಲವರನ್ನು ಹೆಸರಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇಂದು ಮಧ್ಯರಾತ್ರಿ 12.57ಕ್ಕೆ ಈ ಕರೆ ಬಂದಿದೆ. ಅಂದಿನಿಂದ ಆಸ್ಪತ್ರೆ ಮತ್ತು ಆಂಟಿಲಿಯಾ (ಮುಖೇಶ್ ಅಂಬಾನಿ ಮನೆ) ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಂಬೈನ ಡಿಬಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ನೀಲೋತ್ಪಾಲ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು. ಈ ಹಿಂದೆಯೂ ಅಂಬಾನಿ ಕುಟುಂಬಕ್ಕೆ ಹಲವು ಬಾರಿ ಕೊಲೆ ಬೆದರಿಕೆಗಳು ಬಂದಿದ್ದವು. ಆಗಸ್ಟ್ 15 ರಂದು ಕೂಡ ವ್ಯಕ್ತಿಯೊಬ್ಬ ಮುಖೇಶ್ ಮತ್ತು ನೀತಾ ಅಂಬಾನಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದ. ಆದರೆ, ಈ ಪ್ರಕರಣದಲ್ಲಿ ಪೊಲೀಸರು ಒಬ್ಬನನ್ನು ಬಂಧಿಸಿದ್ದರು. ಆಗಸ್ಟ್‌ನಲ್ಲಿ ಬಂದಿದ್ದ ಕೊಲೆ ಬೆದರಿಕೆ ಪ್ರಕರಣದಲ್ಲಿ ಪೊಲೀಸರು ವಿಷ್ಣು ವಿಭು ಭೌಮಿಕ್‌ ಎನ್ನುವ ವ್ಯಕ್ತಿಯನ್ನು ಬಂಧನ ಮಾಡಿದ್ದರು. ಆಗಸ್ಟ್‌ನಲ್ಲಿ ಒಟ್ಟು 8 ಬೆದರಿಕೆ ಕರೆಗಳು ಬಂದಿದ್ದವು.

ಸ್ವಾತಂತ್ರ್ಯ ದಿನಾಚರಣೆಯ ದಿನದಂದು ರಿಲಯನ್ಸ್ ಫೌಂಡೇಶನ್ (reliance foundation) ಆಸ್ಪತ್ರೆಯ ಸ್ಥಿರ ದೂರವಾಣಿ ಸಂಖ್ಯೆಗೆ ಎಂಟು ಬೆದರಿಕೆ ಕರೆಗಳು ಬಂದಿದ್ದವು. ಕರೆ ಮಾಡಿದವರು ಮೂರು ಗಂಟೆಗಳಲ್ಲಿ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಆಸ್ಪತ್ರೆ ಆಡಳಿತ ಮಂಡಳಿ ಡಿಬಿ ಮಾರ್ಗ (DB Marg) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಮುಂಬೈ ಪೊಲೀಸರು ಮೂರು ತಂಡಗಳನ್ನು ರಚಿಸಿ ತನಿಖೆ ಆರಂಭ ಮಾಡಿದ್ದರು. ಆರಂಭಿಕ ತನಿಖೆಯಲ್ಲಿ, ಕರೆ ಮಾಡಿದ ವ್ಯಕ್ತಿ ಒಬ್ಬನೇ ಎಂದು ಕಂಡುಬಂದಿದೆ ಮತ್ತು ಅವರು ಸತತ ಎಂಟು ಕರೆಗಳನ್ನು ಮಾಡಿದ್ದಾರೆ. ಇದಾದ ಬಳಿಕ ಕರೆ ಮಾಡಿದವರ ಸ್ಥಳ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದರು.

ಬಂಧಿತ ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದ: ಪೊಲೀಸರ ಕೈಗೆ ಸಿಕ್ಕಿಬಿದ್ದ ಈ ವ್ಯಕ್ತಿ ವೃತ್ತಿಯಲ್ಲಿ ಆಭರಣ ವ್ಯಾಪಾರಿಯಾಗಿದ್ದ. ಆತನ ಹೆಸರು ವಿಷ್ಣು ವಿಭು ಭೌಮಿಕ್ ಎಂದು ಡಿಸಿಪಿ ನೀಲೋತ್ಪಾಲ್ ಹೇಳಿದ್ದರು. ದೂರವಾಣಿ ಕರೆ ಮಾಡುವಾಗ ಆತನ ಹೆಸರನ್ನು ಅಫ್ಜಲ್ ಎಂದು ನೀಡಲಾಗಿತ್ತು. ಬಂಧನದ ವೇಳೆ ಆತ ಮಾನಸಿಕ ಅಸ್ವಸ್ಥ ಎನ್ನುವುದು ತಿಳಿದುಬಂದಿತ್ತು.
ಫೆಬ್ರವರಿ 2021 ರಲ್ಲಿ, ಆಂಟಿಲಿಯಾದ (Antilia) ಹೊರಗೆ ಸ್ಫೋಟಕ-ಹೊತ್ತ ಎಸ್‌ಯುವಿ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ 20 ಜೆಲೆಟಿನ್‌ ಕಡ್ಡಿಗಳು ಮತ್ತು ಪತ್ರವು ಕಂಡುಬಂದಿತ್ತು.

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಾರಿದ ಗೌತಮ್ ಅದಾನಿ; ಟಾಪ್ 10 ಪಟ್ಟಿಯಿಂದ ಮುಖೇಶ್ ಅಂಬಾನಿ ಔಟ್

ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರಿಗೆ ಪತ್ರದಲ್ಲಿ ಬೆದರಿಕೆ ಹಾಕಲಾಗಿತ್ತು.  ಈ ವೇಳೆ ಮುಂಬೈ ಪೊಲೀಸರ ಎನ್‌ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಾಜೆ ಹೆಸರು ಕೇಳಿ ಬಂದಿತ್ತು. ಇದೀಗ ಎನ್‌ಐಎ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಸೆಪ್ಟೆಂಬರ್ 2021 ರಲ್ಲಿ, 2 ಶಂಕಿತರು ಆಂಟಿಲಿಯಾ ವಿಳಾಸವನ್ನು ಕೇಳಿದರು. ಅನುಮಾನಗೊಂಡ ಟ್ಯಾಕ್ಸಿ ಚಾಲಕ, ಅಂಬಾನಿ ಮನೆಯ ವಿಳಾಸವನ್ನು ಕೇಳಿದಾಗ, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದ. ಇಬ್ಬರೂ ಉರ್ದುವಿನಲ್ಲಿ ಮಾತನಾಡುತ್ತಿದ್ದರು ಎಂದು ಚಾಲಕ ಹೇಳಿದ್ದಾನೆ. ಶಂಕಿತರ ಕೈಯಲ್ಲಿ ಬ್ಯಾಗ್ ಕೂಡ ಇತ್ತು ಎಂದು ಚಾಲಕ ಹೇಳಿದ್ದಾನೆ. ಇದಾದ ನಂತರ ಮುಂಬೈ ಪೊಲೀಸರು ಆಂಟಿಲಿಯಾ ಭದ್ರತೆಯನ್ನು ಹೆಚ್ಚಿಸಿದ್ದರು. ಆಜಾದ್ ಮೈದಾನ ಪೊಲೀಸ್ ಠಾಣೆಯಲ್ಲಿ ಚಾಲಕನನ್ನು ವಿಚಾರಣೆ ಮಾಡಲಾಗಿತ್ತು.

ತಿರುಪತಿ ದೇವಸ್ಥಾನಕ್ಕೆ 1.02 ಕೋಟಿ ರೂ. ದೇಣಿಗೆ ನೀಡಿದ ಮುಸ್ಲಿಂ ದಂಪತಿ!

ಮುಖೇಶ್ ಅಂಬಾನಿಗೆ Z + ಭದ್ರತೆ: ಕೇಂದ್ರ ಗೃಹ ಸಚಿವಾಲಯವು (MHA) ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ (Mukesh Ambani) ಅವರ ಭದ್ರತೆಯನ್ನು ಸೆಪ್ಟೆಂಬರ್ 29 ರಂದು ಹೆಚ್ಚಿಸಿದೆ. ಎಂಎಚ್‌ಎ ಅವರಿಗೆ Z+ ವರ್ಗದ ಭದ್ರತೆಯನ್ನು ನೀಡಿದೆ. ಮುಕೇಶ್ ಅಂಬಾನಿ ಇದರ ಭದ್ರತಾ ವೆಚ್ಚವನ್ನು ಭರಿಸುತ್ತಿದ್ದಾರೆ. ಈ ಖರ್ಚು ತಿಂಗಳಿಗೆ 40 ರಿಂದ 45 ಲಕ್ಷ ರೂ. ಈ ಹಿಂದೆ ಅವರಿಗೆ ಝಡ್ ಕೆಟಗರಿ ಭದ್ರತೆ ಸಿಕ್ಕಿತ್ತು. ಮಾಧ್ಯಮ ವರದಿಗಳ ಪ್ರಕಾರ, ಐಬಿ ಶಿಫಾರಸಿನ ಮೇರೆಗೆ ಗೃಹ ಸಚಿವಾಲಯ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮುಕೇಶ್ ಅಂಬಾನಿ (Nita Ambani) ಅಪಾಯದ ಬಗ್ಗೆ ಐಬಿ ಆತಂಕ ವ್ಯಕ್ತಪಡಿಸಿತ್ತು.

click me!