ಹೊಸ ಇತಿಹಾಸ ರಚಿಸಿದ ಮೋದಿ, ಅಂತಾರಾಷ್ಟ್ರೀಯ ಕುಲು ದಸರಾದಲ್ಲಿ ಪಾಲ್ಗೊಂಡ ಮೊದಲ ಪ್ರಧಾನಿ!

By Suvarna NewsFirst Published Oct 5, 2022, 7:29 PM IST
Highlights

ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಹಿಮಾಚಲ ಪ್ರದೇಶಕ್ಕೆ ತೆರಳಿರುವ ಮೋದಿ, ಕುಲು ದಸರಾದಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ. 

ಹಿಮಾಚಲ ಪ್ರದೇಶ(ಅ.05): ಹಿಮಾಚಲ ಪ್ರದೇಶದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮಾಡಿದ್ದಾರೆ. ಇದರ ನಡುವ ಇದೇ ಮೊದಲ ಬಾರಿಗೆ ಕುಲು ಅಂತಾರಾಷ್ಟ್ರೀಯ ದಸರಾದಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಹೊಸ ಅಧ್ಯಾಯ ಬರೆದಿದ್ದಾರೆ. ಅಂತಾರಾಷ್ಟ್ರೀಯ ಕುಲು ದಸರಾದಲ್ಲಿ ಪಾಲ್ಗೊಂಡ ಮೊದಲ ಪ್ರಧಾನಿ ಎಂಬ ಹೆಗ್ಗಳಿಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ದಸರಾದ ಐತಿಹಾಸಿಕ ರಥಯಾತ್ರೆಯಲ್ಲಿ ಮೋದಿ ಪಾಲ್ಗೊಂಡಿದ್ದಾರೆ. ಪ್ರಧಾನಿ ಮೋದಿಗೆ ಹಿಮಾಚಲ ಪ್ರದೇಶ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕಾರ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹಾಗೂ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸಾಥ್ ನೀಡಿದರು. ಭಾರಿ ಭದ್ರತೆಯೊಂದಿಗೆ ಕುಲು ದಸರಾಗೆ ಆಗಮಿಸಿದ ಮೋದಿ, ರಥಯಾತ್ರೆಯಲ್ಲಿ ಪಾಲ್ಗೊಂಡರು. 

ಕುಲು ಅಂತಾರಾಷ್ಟ್ರೀಯ ದಸರಾ ಉದ್ಘಾಟನೆ ಮಾಡಿದ ಮೋದಿ, ಐತಿಹಾಸಿಕ ರಥಯಾತ್ರೆಯಲ್ಲಿ ಪಾಲ್ಗೊಂಡರು. 7 ದಿನಗಳ ಕಾಲ ನಡೆಯಲಿರುವ ಈ  ದಸರಾಗೆ ದಾಲ್ಪುರ್ ಮೈದಾನದಲ್ಲಿ ವಿದ್ಯುಕ್ತ ಚಾಲನೆ ಸಿಕ್ಕಿದೆ.  ರಥಯಾತ್ರೆಯಲ್ಲಿ ಕುಲು ಮುಖ್ಯ ದೇವತೆ ಭಗವಾನ್ ರುಘನಾಥ, ಸೀತೆ, ಹನುಮಾನ್ ಸೇರಿದಂತೆ ಇತರ ವಿಗ್ರಹಗಳನ್ನು ಸುಲ್ತಾನಪುರದಲ್ಲಿನ ದೇವಸ್ಥಾನದ ಗರ್ಭಗುಡಿಯಿಂದ ಪಲ್ಲಕ್ಕಿಯಲ್ಲಿ ದಾಲ್‌ಪುರಕ್ಕೆ ತರಲಾಯಿತು. ರಥಯಾತ್ರೆಗೂ ಮುನ್ನ ನರೇಂದ್ರ ಮೋದಿ ರಥದ ಬಳಿ ತೆರಳಿ ದೇವರಿಗೆ ನಮನ ಸಲ್ಲಿಸಿದರು. ಈ ವೇಳೆ ಮೋದಿ ನೋಡಲು ಜನಸಾಗರವೇ ಹರಿದು ಬಂದಿತ್ತು.  

 

Modi ಅಪೇಕ್ಷೆಯಂತೆ ಭಾರತ 6ಜಿಯಲ್ಲಿ ವಿಶ್ವದಲ್ಲೇ ಮುನ್ನಡೆ ಸಾಧಿಸಲಿದೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌

ಅದ್ಧೂರಿ ರಥಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಪುರುಷರು, ಮಹಿಳೆಯರು ಮತ್ತು ಮಕ್ಕಳು ತಮ್ಮ ಸಾಂಪ್ರದಾಯಿಕ ಜಾನಪದ ಉಡುಪುಗಳನ್ನು ಧರಿಸಿ ರಥಯಾತ್ರೆಯಲ್ಲಿ ಪಾಲ್ಗೊಂಡರು. ಕುಲು ದಸರಾ ಉತ್ಸವ ಸಮಿತಿಯಿಂದ ಶ್ರೀ ರಾಮ ಪರಿವಾರದ ಲೋಹದ ಕೆತ್ತಿದ ವಿಗ್ರಹಗಳನ್ನು ಸಹ ಅವರಿಗೆ ನೀಡಲಾಯಿತು. ಸಂಜೆ 4.15 ಕ್ಕೆ ರಥಯಾತ್ರೆಯನ್ನು ವೀಕ್ಷಿಸಿದ ನಂತರ ಮೋದಿ ನಿರ್ಗಮಿಸಿದರು.
 

click me!