ಚೀನಾ ಮೇಲೆ ಹದ್ದಿನ ಕಣ್ಣು, ಮಿಸಾಮರಿ ವಾಯುನೆಲೆಗೆ ಪ್ರಚಂಡ ಲಘು ಯುದ್ಧ ಹೆಲಿಕಾಪ್ಟರ್ ನಿಯೋಜನೆ!

By Suvarna NewsFirst Published Oct 5, 2022, 6:21 PM IST
Highlights

ಸಂಪೂರ್ಣ ಸ್ವದೇಶಿ ನಿರ್ಮಿತ ಪ್ರಚಂಡ ಹೆಲಿಕಾಪ್ಟರ್ ಭಾರತೀಯ ವಾಯುಪಡೆ ಸೇರಿಕೊಂಡಿದೆ. ಇದೀಗ ಚೀನಾದಿಂದ ಕೂಗಳತೆ ದೂರದಲ್ಲಿರುವ ಮಿಸಾಮರಿ ವಾಯುನೆಲೆಗೆ ಇದೇ ಪ್ರಚಂಡ ಹೆಲಿಕಾಪ್ಟರ್ ನಿಯೋಜನೆಗೊಳ್ಳುತ್ತಿದೆ. 

ನವದೆಹಲಿ(ಅ.05): ಭಾರತೀಯ ವಾಯುಪಡೆಗೆ ನಾಲ್ಕು ಸ್ವದೇಶಿ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್ ಸೇರ್ಪಡೆಗೊಳಿಸಲಾಗಿದೆ. ಬೆಂಗಳೂರಿನ ಎಚ್‌ಎಎಲ್‌ನಲ್ಲಿ ನಿರ್ಮಾಣಗೊಂಡಿರುವ ಈ ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಚಂಡ ಎಂದು ನಾಮಕರಣ ಮಾಡಿ ವಾಯುಪಡೆಗೆ ಸೇರ್ಪಡೆಗೊಳಿಸಿದ್ದಾರೆ. ಇದೀಗ ಈ ಪ್ರಚಂಡ ಹೆಲಿಕಾಪ್ಟರ್ ಚೀನಾ ಮೇಲೆ ಹದ್ದಿನ ಕಣ್ಣಿಡಲು ನಿಯೋಜನೆಯಾಗುತ್ತಿದೆ. ಚೀನಾ ಗಡಿ, ಚೀನಾ-ಟಿಬೆಟ್ ಭಾರತದ ನಡುವಿನ ಬಮ್ ಲಾ ಪಾಸ್ ಬಳಿ ಇರುವ ಅಸ್ಸಾಂ ಮಿಸ್ಸಾಮರಿ ವಾಯುನೆಲೆಗೆ ಈ ಪ್ರಚಂಡ ಹೆಲಿಕಾಪ್ಟರ್ ನಿಯೋಜನೆಗೊಳ್ಳುತ್ತಿದೆ. ಸದ್ಯ ವಾಯುಸೇನೆಗೆ ಸೇರ್ಪಡೆಗೊಂಡಿರುವ ನಾಲ್ಕು ಪ್ರಚಂಡ ಯುದ್ಧ ಹೆಲಿಕಾಪ್ಟರ್‌ಗಳನ್ನು ಮುಂದಿನ ತಿಂಗಳ ಆರಂಭದಲ್ಲಿ ಅಸ್ಸಾಂ ಮಿಸ್ಸಾಮರಿ ವಾಯುನೆಲೆಗೆ ನಿಯೋಜನೆಗೊಳ್ಳಲಿದೆ. ಭಾರತೀಯ ವಾಯುಪಡೆ ಈಗಾಗಲೇ ಮೂರು ಪ್ರಚಂಡ ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಪಡೆದಿದೆ. ಇನ್ನು ನಾಲ್ಕನೇ ಹೆಲಿಕಾಪ್ಟರ್ ಈ ತಿಂಗಳ ಅಂತ್ಯದಲ್ಲಿ ವಾಯುಸೇನೆ ಕೈಸೇರಲಿದೆ. ಈ ನಾಲ್ಕು ಹೆಲಿಕಾಪ್ಟರ್‌ಗಳನ್ನು ಮುಂದಿ ತಿಂಗಳ ಆರಂಭದಲ್ಲಿ ಮಿಸ್ಸಾಮರಿ ವಾಯುನೆಲೆಗೆ ನೀಡಲಾಗುತ್ತಿದೆ. 

LAC ಬಳಿ ಇರುವ ಅಂದರೆ ಕೇವಲ 150 ಕಿಲೋಮೀಟರ್ ಅಂತರದಲ್ಲಿರುವ ಅಸ್ಸಾಂ ಮಿಸ್ಸಾಮರಿ ವಾಯುನೆಲೆ ಭಾರತೀಯ ಗಡಿ ಪಹರೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಅದರಲ್ಲೂ ಚೀನಾ ಜೊತೆಗಿನ ಗುದ್ದಾಟ ನಡೆಯುತ್ತಿರುವ ಹಿನ್ನಲೆಯಲ್ಲಿ ಭಾರತೀಯ ವಾಯುಪಡೆ ಮಿಸ್ಸಾಮರಿ ವಾಯುನೆಲೆಯನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿದೆ.

ಸೇನೆಗೆ ‘ಪ್ರಚಂಡ’ ಶಕ್ತಿ: ಭಾರತದ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರಗಳ ರಾಶಿ!

ಪೂರ್ವ ಲಡಾಖ್ ಸೇರಿದಂತೆ ಚೀನಾ ಜೊತೆ ಗಡಿ ಹಂಚಿಕೊಂಡಿರುವ ಪ್ರದೇಶಗಳಲ್ಲಿ ಭಾರತಕ್ಕೆ ಹೆಚ್ಚಿನ ತಲೆನೋವು ಎದುರಾಗಿದೆ. ಚೀನಾ ವಿರುದ್ಧ ದ ಬಿಕ್ಕಟ್ಟಿನ ನಡುವೆ ಇದೀಗ 5.8 ಟನ್ ಲಘು ಯುದ್ದ ಹೆಲಿಕಾಪ್ಟರ್ ನಿಯೋಜನೆ ಭಾರಿ ಮಹತ್ವ ಪಡೆದುಕೊಂಡಿದೆ. ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಹೆಲಿನಾ, ಏರ್ ಟು ಏರ್ ಮಿಸೈಲ್ ವ್ಯವಸ್ಥೆ ಹೊಂದಿರುವ ಯುದ್ದ ಹೆಲಿಕಾಪ್ಟರ್ ಇದಾಗಿದೆ. ಭಾರತದಲ್ಲೇ ನಿರ್ಮಾಣವಾಗಿರುವ ಈ ಹೆಲಿಕಾಪ್ಟರ್ ಇದೀಗ ಚೀನಾ ಗಡಿಯಲ್ಲಿ ನಿಯೋಜನೆಗೊಳ್ಳುತ್ತಿರುವುದು ಬಿಕ್ಕಟ್ಟು ಶಮನದಲ್ಲೂ ಪ್ರಮುಖ ಪಾತ್ರ ನಿರ್ವಹಿಸಲಿದೆ.

ಸಮುದ್ರ ಮಟ್ಟಕ್ಕಿಂತ ಅಗಾಧ ಎತ್ತರದಲ್ಲಿರುವ ಲಡಾಖ್‌ನಲ್ಲಿ ಪ್ರಚಂಡ ಹೆಲಿಕಾಪ್ಟರ್‌ಗಳನ್ನು ಪರೀಕ್ಷಿಸಲಾಗಿದೆ. ಅಲ್ಲಿಂದ ಇವು ಕ್ಷಿಪಣಿಗಳ ಮೂಲಕ ಚೀನಾದ ಡ್ರೋನ್‌ಗಳು ಹಾಗೂ ಚೀನಾ ನೆಲೆಗಳನ್ನು ಧ್ವಂಸ ಮಾಡಬಲ್ಲ ಶಕ್ತಿ ಹೊಂದಿವೆ. ಈಗಾಗಲೇ ಇರುವ ‘ಧ್ರುವ’ ಮಾದರಿಯ ಕಾಪ್ಟರ್‌ ಇದಾಗಿದೆ.

ಇಂದು ವಾಯುಪಡೆಗೆ ಸೇರ್ಪಡೆಗೊಂಡ Prachand ಹೆಲಿಕಾಪ್ಟರ್‌ ಹಾರಿಸಿದ ರಾಜನಾಥ್ ಸಿಂಗ್

3,997 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ವದೇಶಿ ಲಘು ಯುದ್ದ ಹೆಲಿಕಾಪ್ಟರ್ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂಪುಟ ಅನುಮೋದನೆ ನೀಡಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಇದೀಗ ಮೂರು ಹೆಲಿಕಾಪ್ಟರ್ ವಾಯುಪಡೆ ಕೈಸೇರಿದ್ದರು. ಈ ತಿಂಗಳ ಅಂತ್ಯದಲ್ಲಿ ನಾಲ್ಕನೇ ಹಾಗೂ ನವೆಂಬರ್ ತಿಂಗಳಲ್ಲಿ 5ನೇ ಲಘು ಯುದ್ಧ ಹೆಲಿಕಾಪ್ಟರ್ ವಾಯುಸೇನೆ ಸೇರಿಕೊಳ್ಳಲಿದೆ. ಒಟ್ಟು 15 ಲಘು ಯುದ್ಧ ಹೆಲಿಕಾಪ್ಟರ್ ಪೈಕಿ 10 ಹೆಲಿಕಾಪ್ಟರ್ ಭಾರತೀಯ ವಾಯುಸೇನೆ ಸೇರಿಕೊಳ್ಳಲಿದ್ದರೆ, 5 ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿದೆ.

ಅಸ್ಸಾಂ ಮಿಸ್ಸಮರಿ ಬ್ರಿಗೇಡ್
ಅಸ್ಸಾಂ ಮಿಸ್ಸಮರಿ ಬ್ರಿಗೇಡ್ 2021ರಲ್ಲಿ ಆರಂಭಗೊಂಡಿದೆ. ಇದರ ವಾಯುನೆಲೆ ಚೀನಾ ಗಡಿ ಸಮೀಪ ಇದೆ. ಈ ಬ್ರಿಗೇಡ್‌ನಲ್ಲಿ ಚೀತಾ ಮತ್ತುಅಡ್ವಾನ್ಸ್  ಲೈಟ್ ಹೆಲಿಕಾಪ್ಟರ್, ಧ್ರುವ್ ಯುಟಿಲಿಟಿ ಹೆಲಿಕಾಪ್ಟರ್, ರುದ್ರ ಶಸ್ತ್ರಸಜ್ಜಿತ ಹೆಲಿಕಾಪ್ಟರ್, ರಿಮೂಟ್ ಪೈಲೆಟ್ ಏರ್‌ಕ್ರಾಫ್ಟ್ ಹೆರಾನ್ Mk1 ಹೊಂದಿದೆ. ಈ ಬತ್ತಳಿಕೆಗೆ ಇದೀಗ ಪ್ರಚಂಡ ಲಘು ಯುದ್ಧ ಹೆಲಿಕಾಪ್ಟರ್ ಸೇರಿಕೊಳ್ಳುತ್ತಿದೆ.
 

click me!