2022ರ ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆಂದು ಹೋದ ಎನ್‌ಐಎ ಅಧಿಕಾರಿಗಳ ಮೇಲೆಯೇ ಗ್ರಾಮಸ್ಥರು ದಾಳಿ ಮಾಡಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಕೋಲ್ಕತ್ತಾ: 2022ರ ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆಂದು ಹೋದ ಎನ್‌ಐಎ ಅಧಿಕಾರಿಗಳ ಮೇಲೆಯೇ ಗ್ರಾಮಸ್ಥರು ದಾಳಿ ಮಾಡಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪುರ್ಬಾ ಮೇದಿನಿಪುರ ಜಿಲ್ಲೆಯ ಭೂಪತಿನಗರ ಪ್ರದೇಶಕ್ಕೆ ಎನ್‌ಐಎ ಅಧಿಕಾರಿಗಳು ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆಂದು ಆಗಮಿಸಿದ ವೇಳೆ ಈ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಇಂದು ಮುಂಜಾನೆಯಷ್ಟೇ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಈ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದರು. ಬಳಿಕ ಕೋಲ್ಕತ್ತಾಗೆ ಮರಳುವ ವೇಳೆ ಎನ್‌ಐಎ ಅಧಿಕಾರಿಗಳು ಚಲಿಸುತ್ತಿದ್ದ ವಾಹನದ ಮೇಲೆ ಸ್ಥಳೀಯರು ದಾಳಿ ನಡೆಸಿದ್ದಾರೆ.
ಎನ್‌ಐಎ ಅಧಿಕಾರಿಗಳಿದ್ದ ವಾಹನಕ್ಕೆ ತಡೆಯೊಡ್ಡಿ ಘೇರಾವ್ ಹಾಕಿದ ದುಷ್ಕರ್ಮಿಗಳು ಬಳಿಕ ವಾಹನದ ಮೇಲೆ ಕಲ್ಲೂ ತೂರಾಟ ಮಾಡಿದ್ದಾರೆ. ಘಟನೆಯಲ್ಲಿ ಎನ್‌ಐಎ ಓರ್ವ ಅಧಿಕಾರಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಫೆಡರಲ್ ತನಿಖಾ ಏಜೆನ್ಸಿಯ ಯಾರೂ ಸಿಕ್ಕಿಲ್ಲ, ಘಟನೆಯ ನಂತರ ದೊಡ್ಡ ಮಟ್ಟ ಸೆಂಟ್ರಲ್ ಪೊಲೀಸ್ ತುಕಡಿ ಭೂಪತಿನಗರಕ್ಕೆ ಆಗಮಿಸಿದೆ. ಅಲ್ಲಿ ಬಂಧಿಸಿರುವ ಇಬ್ಬರು ಯುವಕರ ಜೊತೆ ಎನ್‌ಐಎ ತಂಡ ಇದೆ ಎಂದು ಪೊಲೀಸರು ಹೇಳಿದ್ದಾರೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ, ಸುಳ್ಳು ಸುದ್ದಿಗೆ NIA ಅಧಿಕೃತ ಪ್ರಕಟಣೆ ಮೂಲಕ ಕಪಾಳ ಮೋಕ್ಷ!
2022ರ ಡಿಸೆಂಬರ್ 3 ರಂದು ಭೂಪತಿನಗರದ ಗುಡಿಸಲು ಮನೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಒಟ್ಟು ಮೂವರು ಬಲಿಯಾಗಿದ್ದರು. ಈ ಪ್ರಕರಣವನ್ನು ನಂತರ ಎನ್ಐಎಗೆ ಹಸ್ತಾಂತರಿಸಲಾಗಿತ್ತು. ಇಂದು ಈ ಪ್ರಕರಣದ ವಿಚಾರಣೆಗೆ ಆಗಮಿಸಿದ ಎನ್‌ಐಎ ಅಧಿಕಾರಿಗಳ ಮೇಲೆ ದಾಳಿ ನಡೆದಿದ್ದು, ಇದು ಜನವರಿ 5 ರಂದು ನಡೆದ ಘಟನೆಯನ್ನು ಮತ್ತೆ ನೆನಪು ಮಾಡುವಂತೆ ಮಾಡಿದೆ. ಜನವರಿ 5 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರೇಷನ್ ಕಾರ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಉತ್ತರ ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಪ್ರದೇಶಕ್ಕೆ ಆಗಮಿಸಿದ್ದ ವೇಳೆಯೂ ಕೆಲ ದುಷ್ಕರ್ಮಿಗಳು ಅಧಿಕಾರಿಗಳ ಮೇಲೆಯೇ ದಾಳಿ ನಡೆಸಿದ್ದರು.
Rameshwaram Cafe Blast Case: ಬಿಜೆಪಿ ಕಾರ್ಯಕರ್ತ ಆರೋಪಿಯಲ್ಲ, ಸಾಕ್ಷಿಯಾಗಿ ವಿಚಾರಣೆ ಎಂದ ಎನ್‌ಐಎ!