ಎಣ್ಣೆ ಮತ್ತಲ್ಲಿ ನಡುರಸ್ತೆಯಲ್ಲಿ ಕಾರು ನಿಲ್ಲಿಸಿ ನಿದ್ದೆಗೆ ಜಾರಿದ ಕುಡುಕ...!

Published : Feb 22, 2023, 11:04 AM IST
ಎಣ್ಣೆ ಮತ್ತಲ್ಲಿ ನಡುರಸ್ತೆಯಲ್ಲಿ ಕಾರು ನಿಲ್ಲಿಸಿ ನಿದ್ದೆಗೆ ಜಾರಿದ ಕುಡುಕ...!

ಸಾರಾಂಶ

ತಮಿಳುನಾಡಿನ ಕೊಯಂಬತ್ತೂರು ಸಮೀಪ ಕುಡುಕನೋರ್ವ ರಸ್ತೆ ಮಧ್ಯೆಯೇ ವಾಹನವನ್ನು ನಿಲ್ಲಿಸಿ ನಿದ್ದೆಗೆ ಜಾರಿದ್ದಾನೆ.  ಹೀಗೆ ರಸ್ತೆ ಮಧ್ಯೆ ಕಾರು ನಿಲ್ಲಿಸಿ ನಿದ್ದೆಗೆ ಜಾರಿದ ವ್ಯಕ್ತಿ ಖಾಸಗಿ ಬ್ಯಾಂಕೊಂದರ ಹಣಕಾಸು ಮ್ಯಾನೇಜರ್ ಎಂದು ತಿಳಿದು ಬಂದಿದೆ. 

ಕೊಯಂಬತ್ತೂರು: ಕುಡಿದು ವಾಹನ ಚಾಲನೆ ಮಾಡುವುದು ಅಪರಾಧ. ಆದರೂ ಅನೇಕರು ಪಾನಮತ್ತರಾಗಿ ವಾಹನ ಚಲಾಯಿಸಿ ಪೊಲೀಸರ ದಂಡಕ್ಕೆ ಗುರಿಯಾಗುತ್ತಾರೆ ಇನ್ನೂ ಕೆಲವರು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಆದರೆ ನೆರೆಯ ತಮಿಳುನಾಡಿನ ಕೊಯಂಬತ್ತೂರು ಸಮೀಪ ಕುಡುಕನೋರ್ವ ರಸ್ತೆ ಮಧ್ಯೆಯೇ ವಾಹನವನ್ನು ನಿಲ್ಲಿಸಿ ನಿದ್ದೆಗೆ ಜಾರಿದ್ದಾನೆ.  ಹೀಗೆ ರಸ್ತೆ ಮಧ್ಯೆ ಕಾರು ನಿಲ್ಲಿಸಿ ನಿದ್ದೆಗೆ ಜಾರಿದ ವ್ಯಕ್ತಿ ಖಾಸಗಿ ಬ್ಯಾಂಕೊಂದರ ಹಣಕಾಸು ಮ್ಯಾನೇಜರ್ ಎಂದು ತಿಳಿದು ಬಂದಿದೆ. 

ಈತ ಕವುಂಡಪಾಲ್ಯಂ (Kavundampalayam) ಸಮೀಪದ  ಮೆಟ್ಟುಪಾಲ್ಯಂ  ಮುಖ್ಯರಸ್ತೆಯ (Mettupalayam main road) ಒಂದು ಮಾರ್ಗದಲ್ಲಿ ತನ್ನ ಕಾರನ್ನು ಪಾರ್ಕ್ ಮಾಡಿ ಆಳವಾದ ನಿದ್ರೆಗೆ ಜಾರಿದ್ದಾನೆ.  ಈತನ ಈ ಎಡವಟ್ಟಿನಿಂದಾಗಿ ಈ ರಸ್ತೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿ ಸಂಚಾರಕ್ಕೆ ತೊಂದರೆ ಆಗಿತ್ತು.  ವಗರಾಯಪಾಲ್ಯಂ (Vagarayampalayam) ನಿವಾಸಿ 30 ವರ್ಷದ ರಂಜಿತ್ (S Ranjith)ಎಂಬಾತನೇ ಹೀಗೆ ನಡುರಸ್ತೆಯಲ್ಲಿ ತನ್ನ ಕಾರು ಪಾರ್ಕಿಂಗ್ ಮಾಡಿ ನಿದ್ದೆಗೆ ಜಾರಿದ ವ್ಯಕ್ತಿಯಾಗಿದ್ದಾನೆ. ಈತ ಕವುಂಡಪಾಲ್ಯಂ ಬಳಿ  ಟಿಎನ್‌ಎಸ್‌ಟಿಸಿ ಬಸ್ ಡಿಪೋ ಸಮೀಪದ ಮುಖ್ಯರಸ್ತೆಯಲ್ಲಿ ಮಧ್ಯಾಹ್ನದ ವೇಳೆಗೆ ತನ್ನ ಕಾರನ್ನು ಪಾರ್ಕಿಂಗ್ ಮಾಡಿ ನಿದ್ದೆಗೆ ಜಾರಿದ್ದಾನೆ.  ಈತ ಇಲ್ಲಿನ ಸಾಯಿಬಾಬಾ ಕಾಲೋನಿಯಲ್ಲಿರುವ ಖಾಸಗಿ ಬ್ಯಾಂಕೊಂದರಲ್ಲಿ ಹಣಕಾಸು ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದ. 

ಡ್ರೈವರ್‌ ಫುಲ್‌ ಟೈಟ್‌, ಯುಪಿಎಸ್‌ಆರ್‌ಟಿಸಿ ಬಸ್‌ ಡ್ರೈವ್‌ ಮಾಡಿಕೊಂಡು ಬಂದ ಪ್ರಯಾಣಿಕ!

ಈತನ ಈ ಕಿತಾಪತಿಯಿಂದಾಗಿ ಆ ರಸ್ತೆಯಲ್ಲಿ ಬಂದ ವಾಹನಗಳೆಲ್ಲಾ ಸಾಲು ಸಾಲಾಗಿ ನಿಂತಲ್ಲೇ ನಿಂತು ಸಂಚಾರ ದಟ್ಟಣೆಗೆ ಕಾರಣವಾಗಿತ್ತು. ಅಲ್ಲದೇ ಕೆಲವು ವಾಹನಗಳ ಸವಾರರು ತಮ್ಮ ವಾಹನದಿಂದ ಕೆಳಗಿಳಿದು ಬಂದು ಕಾರಿಗೆ ಏನಾಯಿತು ಎಂದು ನೋಡಲು ಆರಂಭಿಸಿದ್ದರು. ಆದರೆ ಕಾರಿನೊಳಗೆ ಈತ ಗಾಢವಾದ ನಿದ್ದೆಗೆ ಜಾರಿದ್ದನ್ನು ನೋಡಿ ವಾಹನ ಸವಾರರು ಅಚ್ಚರಿ ಪಟ್ಟಿದ್ದಾರೆ.  ಅಲ್ಲದೇ ಚಾಲಕನನ್ನು ನಿದ್ದೆಯಿಂದ ಏಳಿಸಲು 30 ನಿಮಿಷಗಳ ಕಾಲ ಪ್ರಯತ್ನಿಸಿದ್ದಾರೆ ಆದರೆ ಅವರಿಗೆ ಆತನನ್ನು ನಿದ್ದೆಯಿಂದ ಏಳಿಸಲು ಸಾಧ್ಯವಾಗಿಲ್ಲ ಎಂದು ಅಲ್ಲಿನ ಟ್ರಾಫಿಕ್ ಪೊಲೀಸೊಬ್ಬರು ಹೇಳಿದ್ದಾರೆ. 

ಅಲ್ಲದೇ ಈ ಕಾರು ಚಾಲಕ ಕಾರನ್ನು ಒಳಭಾಗದಿಂದ ಲಾಕ್ ಮಾಡಿಕೊಂಡಿದ್ದ, ಹೀಗಾಗಿ ಆತನನ್ನು ಏಳಿಸಲು ಹೆಚ್ಚೇನು ಮಾಡುವಂತಿರಲಿಲ್ಲ. ಅಲ್ಲದೇ ಕೆಲವು ವಾಹನ ಸವಾರರು ಆತ ಮೃತಪಟ್ಟಿರಬೇಕು ಎಂದು ಭಾವಿಸಿದ್ದರು. ಈ ವೇಳೆ ಅಲ್ಲಿಗೆ ಸಿಟಿ ಟ್ರಾಫಿಕ್ ಪೊಲೀಸರು ಆಗಮಿಸಿದ್ದು, ಅವರು ಕೂಡ ಕಾರು ಚಾಲಕನನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಕೆಲವರು ಕೆಲ ಉಪಕರಣ ಬಳಸಿ ಕಾರಿನ ಬಾಗಿಲನ್ನು ತೆಗೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಬಳಿಕ ಓರ್ವ ವಾಹನ ಸವಾರರು ಡ್ರೈವರ್ ಇದ್ದ ಭಾಗದ ಕಾರಿನ ಕಿಟಕಿ ಗ್ಲಾಸ್‌ ಅನ್ನು ಒಡೆದಿದ್ದಾರೆ. 

ಪುಣೆ ಗೂಗಲ್‌ ಕಚೇರಿಗೆ ಬೆದರಿಕೆ ಕರೆ: ಕುಡಿದ ಮತ್ತಿನಲ್ಲಿ ಕರೆ ಮಾಡಿದ್ದ ವ್ಯಕ್ತಿ ವಶಕ್ಕೆ

ನಂತರ ಪೊಲೀಸರು ಹಾಗೂ ಇತರ ವಾಹನ ಸವಾರರು ಕಾರಿನಲ್ಲಿದ ರಂಜಿತ್‌ನನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.  ಈ ರಂಜಿತ್ ಫುಲ್ ಟೈಟ್ ಆಗಿದ್ದು, ನೇರವಾಗಿ ನಿಂತುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಆತನಿದ್ದ. ನಂತರ ಒಬ್ಬರು ವಾಹನ ಸವಾರರು ಆತನ ಕಾರನ್ನು ನಡುರಸ್ತೆಯಿಂದ ಪಕ್ಕಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಿ, ಇತರ ವಾಹನಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ. ನಂತರ ಟ್ರಾಫಿಕ್ ಪೊಲೀಸರು ಆತನನ್ನು ತಪಾಸಣೆ ನಡೆಸಿದಾಗ ಆತ ಕುಡಿದಿರುವುದು ಖಚಿತವಾಗಿದೆ. ಆತನ ವಿರುದ್ಧ ಡ್ರಿಂಕ್ & ಡ್ರೈವ್ ಕೇಸ್ ದಾಖಲಿಸಿದ್ದಾರೆ. ಅಲ್ಲದೇ ಫೋನ್‌ನಲ್ಲಿ ಆತನ ಮನೆಯವರಿಗೆ ಈ ವಿಚಾರ ತಿಳಿಸಿದ್ದಾರೆ ನಂತರ ಆತನ ಮನೆಯವರು ಬಂದು ಆತನನ್ನು ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇನ್ನು ಈ ದೃಶ್ಯಾವಳಿಯನ್ನು ವಾಹನ ಸವಾರರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದು, ಸಂಜೆ ವೇಳೆಗೆ ಇದು ವೈರಲ್ ಆಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್