
ಕೋಲ್ಕತಾ [ಮಾ.01]: ಇತ್ತೀಚೆಗಷ್ಟೇ ದ್ವೇಷ ಮರೆತಂತೆ ಒಬ್ಬರ ಮುಂದೊಬ್ಬರು ಕುಳಿತು ಊಟ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತಂತೆ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಭಾನುವಾರ ಕೋಲ್ಕತಾದಲ್ಲಿ ನಡೆದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಶಾ, ‘ಅಕ್ಕಪಕ್ಕದ ರಾಷ್ಟ್ರಗಳ ನಿರಾಶ್ರಿತರೆಲ್ಲರಿಗೂ ಭಾರತೀಯ ಪೌರತ್ವ ಸಿಗುವವರೆಗೂ ಸರ್ಕಾರ ವಿಶ್ರಮಿಸುವುದಿಲ್ಲ. ತೃಣಮೂಲ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ನಿರಾಶ್ರಿತರು ಹಾಗೂ ಅಲ್ಪಸಂಖ್ಯಾತರನ್ನು ತಪ್ಪುದಾರಿಗೆ ಎಳೆದು ಭೀತಿ ಸೃಷ್ಟಿಸುತ್ತಿವೆ. ಮಮತಾ ಬ್ಯಾನರ್ಜಿ ಅವರು ಗಲಭೆಗೆ ಪ್ರಚೋದಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಮತಾ, ‘ಜಾತಿ, ಧರ್ಮ, ವರ್ಣದ ಆಧಾರದಲ್ಲಿನ ವಿಭಜನೆ ಸೃಷ್ಟಿಸುವವರನ್ನು ಸಮಾಜದಿಂದ ಬುಡಸಮೇತ ಕಿತ್ತೆಸೆಯಬೇಕು. ಭಾನುವಾರದ ಶೂನ್ಯ ತಾರತಮ್ಯದ ದಿನದಂದು ತಾರತಮ್ಯದ ರಾಜಕೀಯ ನೋಡಿ ನೋವಾಗುತ್ತಿದೆ’ ಎಂದು ಪರೋಕ್ಷವಾಗಿ ಶಾ ಉದ್ದೇಶಿಸಿ ಹೇಳಿದ್ದಾರೆ.
ಇನ್ನು ಮಮತಾ ಅವರ ಬಂಧು ಹಾಗೂ ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ ಕೂಡ ತಿರುಗೇಟು ನೀಡಿದ್ದಾರೆ. ‘ಬಂಗಾಳಕ್ಕೆ ಬಂದು ಬೋಧನೆ ಮಾಡುವುದಕ್ಕಿಂತ, ನಿಮ್ಮ ಮೂಗಿನ ಅಡಿಯಲ್ಲೇ ಸುಮಾರು 50 ಜೀವಗಳು ದಿಲ್ಲಿ ಹಿಂಸೆಯಲ್ಲಿ ಬಲಿಯಾಗಿರುವುದಕ್ಕೆ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಶಾ ವಾಗ್ದಾಳಿ:
ಕೋಲ್ಕತಾದಲ್ಲಿ ಕಳೆದ ಲೋಕಸಭೆ ಚುನಾವಣೆ ನಂತರದ ಮೊದಲ ಸಾರ್ವಜನಿಕ ರಾರಯಲಿ ಉದ್ದೇಶಿಸಿ ಮಾತನಾಡಿದ ಶಾ, ‘ಅಲ್ಪಸಂಖ್ಯಾತರಲ್ಲಿ ವಿಪಕ್ಷಗಳು ಭೀತಿ ಮೂಡಿಸುತ್ತಿವೆ. ನಿರಾಶ್ರಿತರು ಸರ್ಕಾರಕ್ಕೆ ದಾಖಲಾತಿ ನೀಡಬೇಕು ಎಂದು ಸಿಎಎನಲ್ಲಿದೆ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಇದೆಲ್ಲ ಸುಳ್ಳು. ಯಾರೂ ದಾಖಲಾತಿ ತೋರಿಸಬೇಕಿಲ್ಲ. ನಾವು ಎಲ್ಲ ನಿರಾಶ್ರಿತರಿಗೆ ನಾಗರಿಕತ್ವ ನೀಡುವರೆಗೆ ಸುಮ್ಮನಾಗುವುದಿಲ್ಲ’ ಎಂದರು.
ಮೋದಿ, ಅಮಿತ್ ಎಲ್ಲಾ ಎಲೆಕ್ಷನ್ ಗೆಲ್ಲಿಸಲಾಗದು,ನೀವೂ ಸಜ್ಜಾಗಿ: RSS..
‘ಸಿಎಎ ವಿರೋಧಿ ಪ್ರತಿಭಟನೆಗಳ ವೇಳೆ ಮಮತಾ ಗಲಭೆಗೆ ಪ್ರಚೋದಿಸುತ್ತಿದ್ದಾರೆ. ರೈಲು ನಿಲ್ದಾಣ ಹಾಗೂ ರೈಲಿಗೆ ಬೆಂಕಿ ಹಚ್ಚಲಾಗುತ್ತಿದೆ. ಸಿಎಎ ಜಾರಿಯನ್ನು ಮಮತಾ ತಡೆಹಿಡಿಯಲಿ’ ಎಂದು ಸವಾಲು ಹಾಕಿದರು.
‘ನಿರಾಶ್ರಿತರಿಗೆ ಪೌರತ್ವ ನೀಡಿಕೆ ವಿರೋಧಿಸುವ ಭರದಲ್ಲಿ ಪ.ಬಂಗಾಳದ ಮಟುವಾ ದಲಿತ ಸಮುದಾಯಕ್ಕೂ ಪೌರತ್ವ ನೀಡಲು ಮಮತಾ ಬ್ಯಾನರ್ಜಿ ವಿರೋಧಿಸುತ್ತಿದ್ದಾರೆ. ದಲಿತರು ನಿಮಗೇನು ಅನ್ಯಾಯ ಮಾಡಿದ್ದಾರೆ? ಈ ಮೂಲಕ ಸಮಾಜ ಸುಧಾರಣೆಯನ್ನೂ ನೀವು ವಿರೋಧಿಸುತ್ತಿದ್ದೀರಿ’ ಎಂದು ಶಾ ಹರಿಹಾಯ್ದರು.
‘ಪ. ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. 2021ರಲ್ಲಿ ಬಿಜೆಪಿ ಮೂರನೇ ಎರಡರಷ್ಟುಬಹುಮತದೊಂದಿಗೆ ಬಂಗಾಳದಲ್ಲಿ ಅಧಿಕಾರಕ್ಕೆ ಬರಲಿದೆ. ಮಣ್ಣಿನ ಮಗನೊಬ್ಬ ಮುಖ್ಯಮಂತ್ರಿಯಾಗಿ ವಂಶಾಡಳಿತಕ್ಕೆ ಅಂತ್ಯ ಹಾಡಲಿದ್ದಾನೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ