ದೊಡ್ಡ ಹಕ್ಕಿಯೊಳಗೆ ಸಣ್ಣ ಹಕ್ಕಿ! ವಿಮಾನದೊಳಗೆ ಪಾರಿವಾಳ ನುಗ್ಗಿ ಅವಾಂತರ!

By Shrilakshmi ShriFirst Published Mar 1, 2020, 11:10 AM IST
Highlights

ಆಕಾಶದಲ್ಲಿ ಹಾಯಾಗಿ ಹಾರಿಕೊಂಡು ಇರಬೇಕಾದ ಪಾರಿವಾಳಗಳು ಅಚಾನಕ್ ಆಗಿ ವಿಮಾನದೊಳಗೆ ಬಂದು ಬಿಡುವುದೇ! ಇಂತದ್ದೊಂದು ಅವಾಂತರ ಅಹಮದಾಬಾದ್‌ನಲ್ಲಿ ನಡೆದಿದೆ. 

ಅಹಮದಾಬಾದ್‌ (ಮಾ. 01): ವಿಮಾನದೊಳಗೆ 2 ಪಾರಿವಾಳಗಳು ಕಾಣಿಸಿಕೊಂಡು ಅಚ್ಚರಿ ಸೃಷ್ಟಿಸಿದ ಘಟನೆ ಅಹಮದಾಬಾದ್‌ ವಿಮಾನದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಇದರಿಂದಾಗಿ ಅಹಮದಾಬಾದ್‌ನಿಂದ ಜೈಪುರಕ್ಕೆ ತೆರಳಬೇಕಿದ್ದ ಗೋ ಏರ್‌ ವಿಮಾನ ಅರ್ಧ ಗಂಟೆ ವಿಳಂಬವಾಗಿ ಚಲಿಸಿತು.

ವಿಮಾನ ಇನ್ನೇನು ಹಾರಾಟ ಆರಂಭಿಸಬೇಕು ಎನ್ನುವಷ್ಟರಲ್ಲಿ, ಲಗೇಜ್‌ ಬಾಕ್ಸ್‌ನಲ್ಲಿ ಅವಿತಿದ್ದ ಪಾರಿವಾಳಗಳು ಏಕಾಏಕಿ ವಿಮಾನದೊಳಗೆ ಅತ್ತಿಂದಿತ್ತ, ಇತ್ತಿಂದತ್ತ ಹಾರಲಾರಂಭಿಸಿದೆ. ಪ್ರಯಾಣಿಕರು ಇದರಿಂದ ಚಕಿತರಾಗಿದ್ದಾರೆ.

ಕೆಲವು ಪ್ರಯಾಣಿಕರು ಪಾರಿವಾಳಗಳ ವಿಡಿಯೋ ಮಾಡಿಕೊಂಡರೆ, ಇನ್ನು ಕೆಲವರು ಅವನ್ನು ಹಿಡಿಯಲು ವಿಫಲ ಯತ್ನ ನಡೆಸಿದ್ದಾರೆ. ಕೊನೆಗೆ ವಿಮಾನದ ಸಿಬ್ಬಂದಿ ವಿಮಾನದ ಬಾಗಿಲು ತೆರೆದಿದ್ದಾರೆ. ಆಗ ಪಾರಿವಾಳಗಳು ಅಲ್ಲಿಂದ ನಿರ್ಗಮಿಸಿವೆ.

ಈ ಇಡೀ ಘಟನೆಯನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಚಿತ್ರಿಸಿ ಸಾಮಾಜಿಕ ಮಾಧ್ಯಮಗಳಿಗೆ ಹಾಕಿದ್ದಾರೆ. ‘ದೊಡ್ಡ ಹಕ್ಕಿಯೊಳಗೆ ಸಣ್ಣ ಹಕ್ಕಿ’ ಎಂದು ಬರೆದು ತಮಾಷೆ ಕೂಡ ಮಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.

ಈ ಪ್ರಸಂಗದಿಂದಾಗಿ ಶುಕ್ರವಾರ ಸಂಜೆ 5 ಗಂಟೆಗೆ ಹೊರಡಬೇಕಿದ್ದ ವಿಮಾನ 5.30ಕ್ಕೆ ಪ್ರಯಾಣ ಆರಂಭಿಸಿತು. ಜೈಪುರವನ್ನು 6.15ರ ಬದಲು 6.45ಕ್ಕೆ ತಲುಪಿತು. ಘಟನೆಗಾಗಿ ಪ್ರಯಾಣಿಕರಲ್ಲಿ ಗೋ ಏರ್‌ ವಿಷಾದ ವ್ಯಕ್ತಪಡಿಸಿದೆ.

 

click me!