
ಇಂಥವರೆಲ್ಲ ವೈದ್ಯರೆಂಬ ಸರ್ಟಿಫಿಕೇಟ್ ಹೇಗೆ ಪಡೆಯುತ್ತಾರೆ ಸ್ವಾಮಿ? ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ನಿರ್ಲಕ್ಷಿಸಲಾಗುತ್ತದೆ ಎಂಬ ಆರೋಪ ಇದ್ದಿದ್ದೇ.. ಆದರೆ, ಈ ಮಟ್ಟಿಗಿನ ನಿರ್ಲಕ್ಷ್ಯವನ್ನು ಯಾರೂ ಊಹಿಸಲು ಸಾಧ್ಯವಿಲ್ಲ.
ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜಿನ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರದ ವೈದ್ಯರು ಗುರುವಾರ 4 ವರ್ಷದ ಬಾಲಕಿಗೆ ಕೈ ಬೆರಳ ಬದಲಾಗಿ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ!
ಮಗುವಿಗೆ ಕೈಲಿ 6ನೇ ಬೆರಳಿತ್ತು. ಈ ಬೆರಳನ್ನು ತೆಗೆದು ಹಾಕಲು ಶಸ್ತ್ರಚಿಕಿತ್ಸೆ ನಿಗದಿಯಾಗಿತ್ತು. ಆದರೆ, ಆಪರೇಶನ್ ಥಿಯೇಟರ್ ಒಳಗೆ ಹೋದ ಮಗುವಿಗೆ ನಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಆಪರೇಶನ್ ಬಳಿಕ ಮಗುವಿನ ಬಾಯಲ್ಲಿ ಹತ್ತಿಯನ್ನು ತುಂಬಿಟ್ಟಿದ್ದನ್ನು ಪೋಷಕರು ನೋಡಿದ ಬಳಿಕ ವಿಷಯ ಅರಿವಾಗಿದೆ. ಇದರಿಂದ ಪ್ರೇರೇಪಿಸಲ್ಪಟ್ಟ ಕುಟುಂಬಸ್ಥರು ಸೂಕ್ಷ್ಮವಾಗಿ ತಪಾಸಣೆ ನಡೆಸಿದಾಗ ಆಕೆಯ ನಾಲಿಗೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆಯೇ ಹೊರತು ಆಕೆಯ ಕೈಗಲ್ಲ ಎಂದು ತಿಳಿದುಬಂದಿದೆ. ನಾಲಿಗೆಗೆ ವೈದ್ಯರು ಏನು ಮಾಡಿದ್ದಾರೆ, ಮಗು ಮಾತಾಡಬಲ್ಲದೇ ಏನು ಎಂಬ ಮಾಹಿತಿ ಇನ್ನೂ ಇಲ್ಲ.
ಬೆರಳಿಗೆ ಉದ್ದೇಶಿಸಲಾದ ಶಸ್ತ್ರಚಿಕಿತ್ಸೆಯ ಬದಲಿಗೆ ನಾಲಿಗೆಗೆ ತಪ್ಪಾಗಿ ಶಸ್ತ್ರಚಿಕಿತ್ಸೆ ಮಾಡುವಂಥ ಅಸಂಬದ್ಧತೆ ನಡೆಯಲು ಅಂದು ಎರಡು ಶಸ್ತ್ರಚಿಕಿತ್ಸೆ ಇದ್ದಿದ್ದು ಕಾರಣವಂತೆ! ಒಂದು ಮಗುವಿಗೆ ಕೈ ಬೆರಳೂ, ಮತ್ತೊಂದಕ್ಕೆ ನಾಲಿಗೆಗೂ ಶಸ್ತ್ರಚಿಕಿತ್ಸೆ ಇತ್ತು ಎನ್ನಲಾಗಿದೆ.
ಪ್ರಸ್ತುತ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭೀಕರ ತಪ್ಪಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಪೊಲೀಸರಿಗೆ ದೂರು ನೀಡುವ ಉದ್ದೇಶವನ್ನು ಕುಟುಂಬಸ್ಥರು ತಿಳಿಸಿದ್ದಾರೆ.
‘ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮತ್ತೆ ಯಾರಿಗೂ ಇಂತಹ ಅನುಭವ ಆಗಬಾರದು’ ಎಂದು ಮಗುವಿನ ಮನೆಯವರು ಹೇಳಿದ್ದಾರೆ. ಇದೇ ವೇಳೆ ಮಗುವಿನ ನಾಲಿಗೆಗೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ. ಈ ಪ್ರಕ್ರಿಯೆಯಿಂದ ಮಗುವಿಗೆ ಯಾವುದೇ ವ್ಯತಿರಿಕ್ತ ಪರಿಣಾಮಗಳು ಉಂಟಾದರೆ ಆಸ್ಪತ್ರೆಯ ಅಧಿಕಾರಿಗಳು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಕುಟುಂಬದವರು ಕಿಡಿ ಕಾರಿದ್ದಾರೆ.
ಕೋವಿಶೀಲ್ಡ್ ಲಸಿಕೆ ದೂಷಿಸಬೇಡಿ, ಕಂಡುಹಿಡಿದವರಿಗೊಂದು ಥ್ಯಾಂಕ್ಸ್ ಹೇಳಿ: ಡಾ. ಸಿ ಎನ್ ಮಂಜುನಾಥ್
ಕೇರಳ ಆರೋಗ್ಯ ಸಚಿವರಿಂದ ತನಿಖೆಗೆ ಆದೇಶ
ಕುಟುಂಬದವರ ಪ್ರಕಾರ, ಒಂದೇ ದಿನದಲ್ಲಿ ಇಬ್ಬರು ಮಕ್ಕಳಿಗೆ ಶಸ್ತ್ರಚಿಕಿತ್ಸೆಯನ್ನು ನಿಗದಿಪಡಿಸಿದ್ದರಿಂದ ಈ ತಪ್ಪಾಗಿದೆ ಎಂದು ವೈದ್ಯರು ಒಪ್ಪಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ರಾಜ್ಯ ಆರೋಗ್ಯ ಸಚಿವೆ ವೀಣಾ, ಘಟನೆಯ ಕುರಿತು ಕ್ಷಿಪ್ರ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ