ಒಆರ್‌ಒಪಿ ಬಾಕಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ತರಾಟೆ; ನ್ಯಾಯಾಂಗ ನಿಂದನೆ ಕೇಸ್‌ ಎಚ್ಚರಿಕೆ

Published : Feb 28, 2023, 08:44 AM ISTUpdated : Feb 28, 2023, 08:49 AM IST
ಒಆರ್‌ಒಪಿ ಬಾಕಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ತರಾಟೆ; ನ್ಯಾಯಾಂಗ ನಿಂದನೆ ಕೇಸ್‌ ಎಚ್ಚರಿಕೆ

ಸಾರಾಂಶ

ನಿವೃತ್ತ ಯೋಧರಿಗೆ ಹಿಂಬಾಕಿ ಪಾವತಿ ಸಂಬಂಧ 2022ರ ಮಾರ್ಚ್‌ 16ರ ಸುಪ್ರೀಂಕೋರ್ಟ್ ಆದೇಶ ಪಾಲನೆಗೆ ತನಗೆ 3 ತಿಂಗಳ ಸಮಯ ನೀಡುವಂತೆ ಕೇಂದ್ರ ಸರ್ಕಾರ ಕಳೆದ ಜೂನ್‌ನಲ್ಲಿ ಕೋರ್ಟ್‌ಗೆ ಕೋರಿಕೆ ಸಲ್ಲಿಸಿತ್ತು. ಬಳಿಕ ಎರಡನೇ ಬಾರಿ ಸಮಯ ವಿಸ್ತರಣೆಗೆ ಅವಕಾಶ ಕೋರಿತ್ತು. ಈ ಹಿನ್ನೆಲೆಯಲ್ಲಿ 2023ರ ಮಾರ್ಚ್‌ 15ರೊಳಗೆ ಪೂರ್ಣ ಪ್ರಮಾಣದ ಹಿಂಬಾಕಿ ಪಾವತಿ ಸೂಚಿಸಲು ಅವಕಾಶ ನೀಡಿ ಜನವರಿ 9ರಂದು ಸೂಚನೆ ನೀಡಿತ್ತು.

ನವದೆಹಲಿ (ಫೆಬ್ರವರಿ 28, 2023): ಒಂದು ರ‍್ಯಾಂಕ್‌ ಒಂದು ಪಿಂಚಣಿ ಯೋಜನೆಯಡಿ ಭಾರತೀಯ ಸೇನೆಯ ಅರ್ಹ ಪಿಂಚಣಿದಾರರಿಗೆ ಒಂದೇ ಹಂತದಲ್ಲಿ ಹಿಂಬಾಕಿ ಪಾವತಿಸುವಂತೆ ತಾನು ಸೂಚನೆ ನೀಡಿದ ಹೊರತಾಗಿಯೂ, ಹಂತಹಂತವಾಗಿ ಹಣ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯದ ವಿರುದ್ಧ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಈ ಕುರಿತ ಪ್ರಕಟಣೆ ಹಿಂದಕ್ಕೆ ಪಡೆಯಬೇಕು. ಇಲ್ಲದೇ ಹೋದಲ್ಲಿ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ನಿವೃತ್ತ ಯೋಧರಿಗೆ ಹಿಂಬಾಕಿ ಪಾವತಿ ಸಂಬಂಧ 2022ರ ಮಾರ್ಚ್‌ 16ರ ಸುಪ್ರೀಂಕೋರ್ಟ್ ಆದೇಶ ಪಾಲನೆಗೆ ತನಗೆ 3 ತಿಂಗಳ ಸಮಯ ನೀಡುವಂತೆ ಕೇಂದ್ರ ಸರ್ಕಾರ ಕಳೆದ ಜೂನ್‌ನಲ್ಲಿ ಕೋರ್ಟ್‌ಗೆ ಕೋರಿಕೆ ಸಲ್ಲಿಸಿತ್ತು. ಬಳಿಕ ಎರಡನೇ ಬಾರಿ ಸಮಯ ವಿಸ್ತರಣೆಗೆ ಅವಕಾಶ ಕೋರಿತ್ತು. ಈ ಹಿನ್ನೆಲೆಯಲ್ಲಿ 2023ರ ಮಾರ್ಚ್‌ 15ರೊಳಗೆ ಪೂರ್ಣ ಪ್ರಮಾಣದ ಹಿಂಬಾಕಿ ಪಾವತಿ ಸೂಚಿಸಲು ಅವಕಾಶ ನೀಡಿ ಜನವರಿ 9ರಂದು ಸೂಚನೆ ನೀಡಿತ್ತು.

ಇದನ್ನು ಓದಿ: OROP ಕೇಂದ್ರ ಸರ್ಕಾರದ ಒನ್‌ ರ‍್ಯಾಂಕ್ ಒನ್‌ ಪೆನ್ಶನ್ ಯೋಜನೆಯಲ್ಲಿ ಲೋಪವಿಲ್ಲ, ಸುಪ್ರೀಂ ಕೋರ್ಟ್!

ಆದರೆ ಈ ನಡುವೆ ಜನವರಿ 20ರಂದು ಪ್ರಕಟಣೆ ಹೊರಡಿಸಿದ್ದ ರಕ್ಷಣಾ ಸಚಿವಾಲಯ ಕಾರ್ಯದರ್ಶಿ, ಹಂತಹಂತವಾಗಿ ಹಿಂಬಾಕಿ ಪಾವತಿ ಮಾಡುವುದಾಗಿ ಮಾಹಿತಿ ನೀಡಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ ನ್ಯಾಯಪೀಠ, ‘ಒಂದೂ ನೀವು ಜನವರಿ 20ರ ಪ್ರಕಟಣೆ ಹಿಂದಕ್ಕೆ ಪಡೆಯಿರಿ. ಇಲ್ಲವೇ ನಾವು ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ. ಏಕೆಂದರೆ ನ್ಯಯಾಂಗ ಪ್ರಕ್ರಿಯೆಯ ಘನತೆಯನ್ನು ನಾವು ಕಾಪಾಡಲೇಬೇಕು’ ಎಂದು ಎಚ್ಚರಿಸಿತು.
ಜೊತೆಗೆ ಜನವರಿ 20ರ ಪ್ರಕಟಣೆ ಬಗ್ಗೆ ಖದ್ದು ಅಫಿಡವಿಟ್‌ ಸಲ್ಲಿಸುವಂತೆ ರಕ್ಷಣಾ ಸಚಿವಾಲಯದ ಕಾರ್ಯದರ್ಶಿಗೆ ಸೂಚಿಸಿ, ಹೋಳಿ ನಂತರಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿತು.

ಅಗ್ನಿಪಥ ಯೋಜನೆಗೆ ದಿಲ್ಲಿ ಹೈಕೋರ್ಟ್‌ ಅಸ್ತು
ಭಾರತೀಯ ಸೇನೆಯಲ್ಲಿ ಅಲ್ಪಾವಧಿ ನೇಮಕಕ್ಕಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಆರಂಭಿಸಿರುವ ಅಗ್ನಿಪಥ ಯೋಜನೆಯು, ಸೇನೆಯನ್ನು ಇನ್ನಷ್ಟುಸಶಕ್ತಗೊಳಿಸುವ ರಾಷ್ಟ್ರೀಯ ಹಿತಾಸಕ್ತಿಯ ಯೋಜನೆ ಎಂದು ಬಣ್ಣಿಸಿರುವ ದೆಹಲಿ ಹೈಕೋರ್ಟ್, ಯೋಜನೆ ಮತ್ತು ಯೋಜನೆಯಡಿ ನೇಮಕಕ್ಕೆ ಮಾಡಿರುವ ಕೆಲ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವು ಅರ್ಜಿಗಳನ್ನು ವಜಾ ಮಾಡಿದೆ. ಜೊತೆಗೆ ಈ ವಿಷಯದಲ್ಲಿ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಅಗ್ನಿಪಥದಿಂದ ಸೇನೆಗೆ ಮತ್ತಷ್ಟುಶಕ್ತಿ, ಇದೊಂದು ಕ್ರಾಂತಿಕಾರಕ ನೀತಿ: ಪ್ರಧಾನಿ ಮೋದಿ

2022ರ ಜೂನ್‌ 14ರಂದು ಕೇಂದ್ರ ಸರ್ಕಾರ ಘೋಷಿಸಿದ ಅಗ್ನಿಪಥ ಯೋಜನೆ ಅನ್ವಯ ಕನಿಷ್ಠ 17 ವರ್ಷ 6 ತಿಂಗಳು ಮತ್ತು ಗರಿಷ್ಠ 21 ವರ್ಷ ಮೀರದವರು 4 ವರ್ಷ ಅವಧಿಯ ನೇಮಕಕ್ಕೆ ಅರ್ಜಿ ಸಲ್ಲಿಸಬಹುದಾಗಿತ್ತು. ಹೀಗೆ 4 ವರ್ಷ ಸೇವೆ ಪೂರ್ಣಗೊಳಿಸಿದವರ ಪೈಕಿ ಶೇ. 25ರಷ್ಟು ಜನರನ್ನು ಕಾಯಂ ಆಗಿ ಮುಂದುವರೆಸಲಾಗುವುದು ಎಂದು ಹೇಳಿತ್ತು. ಆದರೆ ಹೀಗೆ ಅಲ್ಪಾವಧಿ ಸೇವೆ ತಮ್ಮ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.

ಆದರೆ ಈ ವಾದ ತಳ್ಳಿಹಾಕಿದ್ದ ಕೇಂದ್ರ ಸರ್ಕಾರ, ಇದು ಸೇನಾ ನೇಮಕಾತಿ ನೀತಿಯಲ್ಲಿ ಆಮೂಲಾಗ್ರ ಬದಲಾವಣೆಯ ಹೊಸ ಯೋಜನೆ. ಇದು ಸೇನೆಯನ್ನು ಕಾಲಕ್ಕೆ ತಕ್ಕಂತೆ ಸಜ್ಜುಗೊಳಿಸುವ, ಸೇನೆಗೆ ಯುವ ಶಕ್ತಿ ತುಂಬುವ ಉದ್ದೇಶ ಹೊಂದಿದೆ. ಮೇಲಾಗಿ ಇದು ಐಚ್ಛಿಕ. ಆಸಕ್ತಿ ಇದ್ದವರು ಮಾತ್ರವೇ ಸೇರ್ಪಡೆಯಾಗಬಹುದು. ಜೊತೆಗೆ ಮೊದಲ ವರ್ಷ ನೇಮಕಾತಿಗೆ ನೀಡಲಾದ ಎರಡೂವರೆ ವರ್ಷಗಳ ವಯೋಮಿತಿ ವಿನಾಯಿತಿಯನ್ನು 10 ಲಕ್ಷಕ್ಕೂ ಹೆಚ್ಚು ಆಸಕ್ತರು ಪಡೆದುಕೊಂಡಿದ್ದಾರೆ ಎಂದು ಹೇಳಿತ್ತು.

ಇದನ್ನೂ ಓದಿ: ಬೀದರ್ ನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಅಗ್ನಿಪಥ ರ್‍ಯಾಲಿ, ಆಕಾಂಕ್ಷಿಗಳ ನೋಂದಣಿ ದಾಖಲೆ

ಈ ವಾದ ಒಪ್ಪಿದ್ದ ಹೈಕೋರ್ಟ್, ಇದರಲ್ಲಿ ಅಭ್ಯರ್ಥಿಗಳ ಯಾವುದೇ ಹಕ್ಕು ಉಲ್ಲಂಘನೆಯಾಗಿಲ್ಲ, ಯಾರಿಗೆ ಇದರ ಬಗ್ಗೆ ಆಕ್ಷೇಪ ಇದೆಯೋ ಅವರು ಸೇನೆಯನ್ನು ಸೇರಲೇ ಬಾರದು ಎಂದು ವಿಚಾರಣೆ ಹಂತದಲ್ಲಿ ಹೇಳಿತ್ತು. ಈ ಕುರಿತು ಕಳೆದ ಡಿಸೆಂಬರ್‌ 15ರಂದು ವಿಚಾರಣೆ ಪೂರ್ಣಗೊಳಿಸಿದ್ದ ಕೋರ್ಟ್‌ ಸೋಮವಾರ ತೀರ್ಪು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!