ಕೇಂದ್ರೀಯ ಸಂಸ್ಥೆಗಳು ಈ ಬಗ್ಗೆ ಪ್ರಾಥಮಿಕವಾಗಿ ತನಿಖೆ ನಡೆಸುತ್ತಿವೆ ಮತ್ತು ನಾವು ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದೇವೆ ಎಂದು ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಯೊಬ್ಬರು ಹೇಳಿದರು.
ನವದೆಹಲಿ (ಫೆಬ್ರವರಿ 28, 2023): ಚೀನಾ, ಪಾಕಿಸ್ತಾನ ಮತ್ತು ಹಾಂಕಾಂಗ್‌ನಲ್ಲಿ ತರಬೇತಿ ಪಡೆದ ‘ಡೇಂಜರಸ್’ ವ್ಯಕ್ತಿಯೊಬ್ಬ ಮುಂಬೈ ಪ್ರವೇಶಿಸಿದ್ದು, ಆತನ ಬಗ್ಗೆ ನಿಗಾ ವಹಿಸುವಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಮುಂಬೈ ಪೊಲೀಸರಿಗೆ ರಹಸ್ಯ ಇ ಮೇಲ್ ಸಂದೇಶ ರವಾನಿಸಿದೆ. ಡೇಂಜರಸ್ ಎಂದು ಹೆಸರಿಸಿದ ವ್ಯಕ್ತಿಯನ್ನು ಇಂದೋರ್ ಮೂಲದ ಸರ್ಫರಾಜ್ ಮೆಮನ್ ಎಂದು ಎನ್‌ಐಎ ಗುರುತಿಸಿದ್ದು, ಈತ ಈಗಾಗಲೇ ಮುಂಬೈ ಪ್ರವೇಶ ಮಾಡಿದ್ದಾನೆ ಎಂದು ಎಚ್ಚರಿಸಿದೆ. ಆತನ ಆಧಾರ್ ಕಾರ್ಡ್ ಮಾಹಿತಿ, ವಾಹನ ಚಾಲನಾ ಪರವಾನಗಿ, ಪಾಸ್‌ಪೋರ್ಟ್ ಮೊದಲಾದ ದಾಖಲೆಗಳನ್ನೂ ಎನ್‌ಐಎ ಮುಂಬೈ ಪೊಲೀಸರ ಜೊತೆ ಹಂಚಿಕೊಂಡಿದ್ದು, ನಗರದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ. ಜೊತೆಗೆ ಈ ಕುರಿತು ಅದು ಇಂದೋರ್ ಪೊಲೀಸರಿಗೂ ಮಾಹಿತಿ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ(Maharashtra) ಮೂಲದ ಖಾಲಿದ್ ಮುಬಾರಕ್ ಮತ್ತು ತಮಿಳುನಾಡು (Tamil Nadu) ಮೂಲದ ಅಬ್ದುಲ್ಲಾ ಎಂಬಿಬ್ಬರು ಶಸ್ತ್ರಾಸ್ತ್ರ ತರಬೇತಿ ಪಡೆಯಲು ಪಾಕಿಸ್ತಾನಕ್ಕೆ (Pakistan) ತೆರಳಲು ಯತ್ನಿಸುತ್ತಿದ್ದ ವೇಳೆ ಕಳೆದ ಶನಿವಾರವಷ್ಟೇ ದೆಹಲಿ ಪೊಲೀಸರ (Delhi Police) ವಿಶೇಷ ಪಡೆಯ ಕೈಗೆ ಸಿಕ್ಕಿಬಿದ್ದಿದ್ದರು. ಅದರ ಬೆನ್ನಲ್ಲೇ ‘ಡೇಂಜರಸ್’ ವ್ಯಕ್ತಿಯ ಬಗ್ಗೆ ಎನ್‌ಐಎ (NIA) ಈ ಮಾಹಿತಿ ನೀಡಿದೆ.
ಇದನ್ನು ಓದಿ: ಎಲ್‌ಇಟಿ ಉಗ್ರ ಕೃತ್ಯಗಳಿಗೆ ಡ್ರಗ್ಸ್ ಹಣ! NIA ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!
ಶನಿವಾರ ದೆಹಲಿಯಲ್ಲಿ ಸಿಕ್ಕಿಬಿದ್ದ ಇಬ್ಬರೂ ವ್ಯಕ್ತಿಗಳು ಅಕ್ರಮವಾಗಿ ಗಡಿದಾಟುವ ಮೂಲಕ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಶಸ್ತ್ರಾಸ್ತ್ರ ಬಳಕೆ ತರಬೇತಿ ಪಡೆಯಲು ನಿರ್ಧರಿಸಿದ್ದರು. ಪಾಕ್ ಮೂಲದ ಹ್ಯಾಂಡ್ಲರ್ ಒಬ್ಬನ ಸೂಚನೆ ಅನ್ವಯ ಪಾಕ್‌ಗೆ ತೆರಳಲು ಸಂಚು ರೂಪಿಸಿದ್ದ ವೇಳೆ ಇಬ್ಬರೂ ಸಿಕ್ಕಿಬಿದ್ದಿದ್ದರು. ಈ ವೇಳೆ ಅವರಿಂದ 2 ಪಿಸ್ತೂಲ್, 10 ಸಜೀವ ಗುಂಡು, ಚಾಕು, ವೈರ್ ಕಟರ್ ವಶಪಡಿಸಿಕೊಳ್ಳಲಾಗಿತ್ತು.
ಮುಂಬೈ ಮತ್ತು ಇಂದೋರ್ ಪೊಲೀಸರು ಸೇರಿದಂತೆ ಹಲವು ಏಜೆನ್ಸಿಗಳೊಂದಿಗೆ ಹಂಚಿಕೊಂಡ ಇ-ಮೇಲ್ ಅನ್ನು ಭಾನುವಾರ ಎನ್‌ಐಎ ಪಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ನಿಜವಾದ ಪ್ರಕರಣವೇ ಅಥವಾ ಇದರ ಹಿಂದೆ ಬೇರೆ ಏನಾದರೂ ಇದೆಯೇ, ಬೇಕೆಂದೇ ಹೀಗೆ ಮಾಡಿದ್ದಾರೋ ಎಂದು ನಮಗೆ ಖಚಿತವಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು. ಹಾಗೂ, ಇಮೇಲ್‌ನಲ್ಲಿ ಹಂಚಿಕೊಂಡಿರುವ ವಿವರಗಳ ಆಧಾರದ ಮೇಲೆ, ಅವರು ಹಿನ್ನೆಲೆ ಪರಿಶೀಲನೆ ನಡೆಸಿದ್ದು, ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 1982 ರಲ್ಲಿ ಜನಿಸಿದ ಸರ್ಫರಾಜ್ ಮೆಮನ್ ಚೀನಾಕ್ಕೆ ಪ್ರಯಾಣಿಸಿದ್ದಾರೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಆದರೆ ಪಾಕಿಸ್ತಾನಕ್ಕೆ ಹೋಗಿರುವ ಬಗ್ಗೆ ಯಾವುದೇ ಡೀಟೇಲ್ಸ್ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಐಸಿಸ್, ಖೈದಾಗೆ ಫ್ರೆಂಚ್ ಅನುವಾದಕ ಆಗಿದ್ದ ಬೆಂಗಳೂರಲ್ಲಿ ಸಿಕ್ಕ ಶಂಕಿತ ಉಗ್ರ!
ಈ ಮಧ್ಯೆ, ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೇಂದ್ರೀಯ ಸಂಸ್ಥೆಗಳು ಈ ಬಗ್ಗೆ ಪ್ರಾಥಮಿಕವಾಗಿ ತನಿಖೆ ನಡೆಸುತ್ತಿವೆ ಮತ್ತು ನಾವು ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದೇವೆ ಎಂದು ಹೇಳಿದರು. ಇಂದೋರ್ ಪೊಲೀಸರ ತಂಡಗಳು ಸರ್ಫರಾಜ್ ಮೆಮನ್‌ನ ಧಾರ್ ರೋಡ್ ನಿವಾಸಕ್ಕೂ ಭೇಟಿ ನೀಡಿದ್ದು, ಆತನ ಕುಟುಂಬ ಮತ್ತು ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೊಂದೆಡೆ, ಈ ತಿಂಗಳ ಆರಂಭದಲ್ಲಿ ಅಂತಹ ಇನ್ನೊಂದು ಪ್ರಕರಣದಲ್ಲಿ, ತಾಲಿಬಾನ್‌ನೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ವ್ಯಕ್ತಿ ನಗರದಲ್ಲಿ ಭಯೋತ್ಪಾದಕ ದಾಳಿ ನಡೆಸಲಿದ್ದಾರೆ ಎಂದು ಎನ್‌ಐಎ ಕಚೇರಿಗೆ ಇಮೇಲ್ ಎಚ್ಚರಿಕೆ ನೀಡಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಶಂಕಿತ ಅಲ್‌ಖೈದಾ ಉಗ್ರನನ್ನು ಬಂಧಿಸಿದ ಎನ್‌ಐಎ!