ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದು ನೂಪುರ್‌ ಶರ್ಮ: ಸುಪ್ರೀಂ ಕೋರ್ಟ್‌ ಛೀಮಾರಿ

Published : Jul 01, 2022, 11:52 AM ISTUpdated : Jul 01, 2022, 12:44 PM IST
ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದು ನೂಪುರ್‌ ಶರ್ಮ: ಸುಪ್ರೀಂ ಕೋರ್ಟ್‌ ಛೀಮಾರಿ

ಸಾರಾಂಶ

Prophet Row: ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌ ಪೀಠ, ನೂಪುರ್‌ ವಿರುದ್ಧ ಸಿಟ್ಟಿಗೆದ್ದಿದೆ. ಇಡೀ ದೇಶದ ಶಾಂತಿ - ಸೌಹಾರ್ದತೆಯನ್ನು ಕದಡಿದ್ದು ನೂಪುರ್‌ ಶರ್ಮ, ಅಧಿಕಾರದ ಮದ ತಲೆಗೇರಿದಾಗ ಈ ರೀತಿಯ ದುಷ್ಕೃತ್ಯಕ್ಕೆ ಜನ ಕೈಹಾಕುತ್ತಾರೆ ಎಂದು ಕೋರ್ಟ್‌ ಛೀಮಾರಿ ಹಾಕಿದೆ. 

ನವದೆಹಲಿ: ಪ್ರೊಫೆಟ್‌ ಮೊಹಮ್ಮದ್‌ರ ಬಗ್ಗೆ ವಿವಾದಾತ್ಮಕ (Prophet Mohammed Row) ಹೇಳಿಕೆ ನೀಡಿದ್ದ ನೂಪುರ್‌ ಶರ್ಮ (Nupur Sharma) ವಿರುದ್ಧ ಸುಪ್ರೀಂ ಕೋರ್ಟ್‌ (Supreme Court) ಕೆಂಡಾಮಂಡಲವಾಗಿದೆ. "ಇಡೀ ದೇಶಕ್ಕೆ ಬೆಂಕಿ ಹಚ್ಚುವಂತ ಹೇಳಿಕೆಗಳನ್ನು ನೀಡಿ, ಸಮಾಜದ ಶಾಂತಿಗೆ ಧಕ್ಕೆ ಉಂಟುಮಾಡಿದ್ದು ನೂಪುರ್‌ ಶರ್ಮ. ದೇಶದಲ್ಲಿ ಶಾಂತಿ ಹದಗೆಡಲು ಮತ್ತು ಉದ್ವಿಘ್ನ ವಾತಾವರಣ ನಿರ್ಮಾಣವಾಗಲು ನೂಪುರರ ಶರ್ಮ ಕಾರಣ. ಇಡೀ ದೇಶದ ಕ್ಷಮೆ ಯಾಚಿಸಬೇಕು ಅವರು," ಎಂದು ಸುಪ್ರೀಂ ಕೋರ್ಟ್‌ ತರಾಟೆ ತೆಗೆದುಕೊಂಡಿದೆ. ಟಿವಿ ವಾಹಿನಿಯಲ್ಲೇ ನೂಪುರ್‌ ಶರ್ಮ ಇಡೀ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್‌ ಖಡಕ್ಕಾಗಿ ಹೇಳಿದೆ. 

ನೂಪುರ್‌ ಶರ್ಮ ತಮ್ಮ ವಿರುದ್ಧ ದೇಶದ ಮೂಲೆಮೂಲೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಯನ್ನು ದೆಹಲಿಗೆ ಹಸ್ತಾಂತರಿಸಬೇಕು. ಎಲ್ಲಾ ಎಫ್‌ಐಆರ್‌ಗಳನ್ನೂ ದೆಹಲಿಗೆ ಹಸ್ತಾಂತರಿಸಿ ವಿಚಾರಣೆ ಇಲ್ಲೇ ನಡೆಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌ ನೂಪುರ್‌ ಶರ್ಮ ಅವರ ಮೇಲೆ ಸಿಟ್ಟಿಗೆದ್ದಿದೆ. "ದೇಶದ ಭದ್ರತೆಗೆ ನೂಪುರ್‌ ಶರ್ಮ ಬೆದರಿಕೆ ಒಡ್ಡಿದ್ದಾರೆ," ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. 

ಇದನ್ನೂ ಓದಿ: ಪ್ರವಾದಿ ಅವಹೇಳನ: ನೂಪುರ್‌ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

"ಈ ಅರ್ಜಿ ಆಕೆಯ ಮನಸ್ಥಿತಿಯನ್ನು ತೋರಿಸುತ್ತಿದೆ. ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹಾಜರಾಗಲು ಅವರ ಪ್ರತಿಷ್ಠೆ ಮತ್ತು ಧಿಮಾಕು ಅಡ್ಡ ಬರುತ್ತಿರಬೇಕು. ಒಂದು ಪಕ್ಷದ ವಕ್ತಾರೆ ಸಮಾಜದ ಶಾಂತಿ ಕದಡುವಂತ ಹೇಳಿಕೆ ಕೊಡುವಂತಿಲ್ಲ. ಕೆಲವೊಮ್ಮ ಅಧಿಕಾರದ ಮದ ತಲೆಗೇರುತ್ತದೆ. ಆಗ ಇಂತಾ ವ್ಯಕ್ತಿಗಳು ತಾವು ಸರ್ವಶ್ರೇಷ್ಟರು, ತಮಗೆ ಅನಿಸಿದ್ದನ್ನೆಲ್ಲಾ ಮಾಡಬಹುದು ಅಂದುಕೊಳ್ಳುತ್ತಾರೆ. ಜತೆಗೆ ಈ ರೀತಿಯ ಹೇಳಿಕೆ ಕೊಡಲು ಆಕೆಗೆ ಪ್ರೇರೇಪಿಸಿದವರ ಮೇಲೆ ಆಕೆ ಯಾಕೆ ದೂರು ನೀಡಿಲ್ಲ," ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. 

ಏನಿದು ಪ್ರಕರಣ?:

ಇತ್ತೀಚಿನ ಟೀವಿ ಚರ್ಚೆಯೊಂದರ ವೇಳೆ ಬಿಜೆಪಿ ವಕ್ತಾರೆ ನೂಪುರ ಶರ್ಮಾ ಅವರು, ಪ್ರವಾದಿ ಮೊಹಮ್ಮದರ ವಿರುದ್ಧ ಲೈಂಗಿಕ ಕಿರುಕುಳದಂಥ ಅವಹೇಳನಕಾರಿ ಮಾತುಗಳನ್ನು ಬಳಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೇಳಿಕೆ ವಿರುದ್ಧ ದೆಹಲಿ, ಮಹಾರಾಷ್ಟ್ರ ಮೊದಲಾದೆಡೆ ಪ್ರಕರಣ ದಾಖಲಾಗಿತ್ತು. ಜೊತೆಗೆ ಹಿಂಸಾಚಾರಕ್ಕೂ ಪ್ರಚೋದನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ, ಹೇಳಿಕೆ ಕುರಿತು ಪರಿಶೀಲನೆ ನಡೆಸಿದ್ದ ಬಿಜೆಪಿಯ ಶಿಸ್ತು ಸಮಿತಿ, ‘ನೂಪುರ್‌ ಅವರ ಹೇಳಿಕೆಗಳು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪಕ್ಷ ಹೊಂದಿರುವ ನಿಲುವುಗಳಿಗೆ ವಿರುದ್ಧವಾಗಿದೆ. ಇದು ಪಕ್ಷದ ಸಂವಿಧಾನದ ಸ್ಪಷ್ಟಉಲ್ಲಂಘನೆಯಾಗಿದೆ. ಹೀಗಾಗಿ ಈ ಕುರಿತು ತನಿಖೆ ನಡೆದು ವರದಿ ಬರುವವರೆಗೂ ಅವರಿಗೆ ವಹಿಸಿರುವ ಎಲ್ಲಾ ಹೊಣೆಗಳನ್ನೂ ಹಿಂದಕ್ಕೆ ಪಡೆದು, ಪಕ್ಷದಿಂದ ಅಮಾನತು ಮಾಡಲಾಗುತ್ತಿದೆ’ ಎಂದು ಪ್ರಕಟಿಸಿದೆ.

ಮತ್ತೊಂದೆಡೆ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಟ್ವೀಟ್‌ ಮಾಡಿ ಬಳಿಕ ಅದನ್ನು ಅಳಿಸಿಹಾಕಿದ್ದ ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್‌ ಕುಮಾರ್‌ ಜಿಂದಾಲ್‌ ಅವರನ್ನು ಪಕ್ಷದಿಂದಲೇ ವಜಾ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಂದಾಲ್‌, ‘ನನ್ನ ಟ್ವೀಟ್‌ಗಳು ಯಾವುದೇ ಧಾರ್ಮಿಕ ನಂಬಿಕೆಗಳನ್ನು ಗುರಿಯಾಗಿಸಿ ಮಾಡಿದ್ದಲ್ಲ. ಬದಲಾಗಿ ಹಿಂದೂ ದೇವತೆಗಳನ್ನು ಅವಮಾನಿಸುತ್ತಿರುವವರನ್ನು ಪ್ರಶ್ನಿಸಿ ಮಾಡಿದ್ದು’ ಎಂದಿದ್ದಾರೆ.

ಯಾವುದೇ ಧರ್ಮದ ಅವಹೇಳನಕ್ಕೆ ಬೆಂಬಲವಿಲ್ಲ- ಬಿಜೆಪಿ

ಈ ಶಿಸ್ತು ಕ್ರಮ ಘೋಷಣೆಗೂ ಮುನ್ನ ಹೇಳಿಕೆ ಬಿಡುಗಡೆ ಮಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್‌ಸಿಂಗ್‌, ‘ಯಾವುದೇ ಧರ್ಮ ಅಥವಾ ಪಂಗಡವನ್ನು ಕಡೆಗಣಿಸುವ, ಅವಹೇಳನ ಮಾಡುವ ಸಿದ್ಧಾಂತವನ್ನು ಬಿಜೆಪಿ ಬೆಂಬಲಿಸುವುದಿಲ್ಲ. ಜೊತೆಗೆ ಅಂಥ ವ್ಯಕ್ತಿ ಅಥವಾ ತತ್ವಗಳನ್ನು ನಾವು ಉತ್ತೇಜಿಸುವುದೂ ಇಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ಪ್ರವಾದಿ ನಿಂದನೆ: ಕತಾರ್‌, ಇರಾನ್‌, ಕುವೈತ್‌ ಅಸಮಾಧಾನ

‘ಭಾರತದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಪ್ರತಿಯೊಂದು ಧರ್ಮ ಕೂಡಾ ವಿಕಸನಗೊಂಡಿದೆ ಮತ್ತು ಪ್ರವರ್ಧಮಾನಕ್ಕೆ ಬಂದಿದೆ. ಭಾರತೀಯ ಜನತಾ ಪಕ್ಷ ಎಲ್ಲಾ ಧರ್ಮಗಳನ್ನೂ ಗೌರವಿಸುತ್ತದೆ. ಯಾವುದೇ ಧರ್ಮಕ್ಕೆ ಸಂಬಂಧಿಸಿದ ವ್ಯಕ್ತಿಯ ಅವಹೇಳನವನ್ನು ಪಕ್ಷ ಖಂಡಿಸುತ್ತದೆ’ ಎಂದಿದ್ದಾರೆ.

‘ ದೇಶದ ಸಂವಿಧಾನವು, ಆತ ಅಥವಾ ಆಕೆಗೆ ಅವರ ಧರ್ಮವನ್ನು ಪಾಲಿಸುವ ಹಕ್ಕನ್ನು ನೀಡಿದೆ. ದೇಶ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ವೇಳೆ, ದೇಶದ ಏಕತೆ, ಸಮಗ್ರತೆಗೆ, ಎಲ್ಲರನ್ನೂ ಸಮಾನವಾಗಿ ನೋಡುವ ಮತ್ತು ಪ್ರತಿಯೊಬ್ಬರೂ ಗೌರವಯುತವಾಗಿ ಬಾಳುವಂಥ ಸಮಾಜ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ’ ಎನ್ನುವ ಮೂಲಕ ಪಕ್ಷದ ವಿರುದ್ಧ ಮುಸ್ಲಿಮರು ಹೊಂದಿರುವ ಅಕ್ರೋಶವನ್ನು ತಣ್ಣಗಾಗಿಸುವ ಯತ್ನವನ್ನು ಬಿಜೆಪಿ ಮಾಡಿದ್ದಾರೆ.

ಇದನ್ನೂ ಓದಿ: ಪ್ರವಾದಿ ಮೊಹಮ್ಮದರ ವಿರುದ್ಧ ಹೇಳಿಕೆ, ಬೇಷರತ್ತಾಗಿ ನನ್ನ ಹೇಳಿಕೆ ಹಿಂಪಡೆಯುವೆ: ನೂಪುರ್

ಟೀವಿ ಚರ್ಚೆಯೊಂದರ ವೇಳೆ ಪ್ರವಾದಿ ಮೊಹಮ್ಮದರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ವಕ್ತಾರೆ ನೂಪುರ್‌ ಶರ್ಮಾ ಅವರನ್ನು ಭಾರತೀಯ ಜನತಾ ಪಕ್ಷದಿಂದ ಅಮಾನತು ಮಾಡಲಾಗಿದೆ. ಜೊತೆಗೆ ಇದೇ ರೀತಿಯ ಇನ್ನೊಂದು ಪ್ರಕರಣದಲ್ಲಿ ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್‌ ಕುಮಾರ್‌ ಜಿಂದಾಲ್‌ ಅವರನ್ನು ಪಕ್ಷದಿಂದಲೇ ವಜಾ ಮಾಡಲಾಗಿದೆ.

ಇವರಿಬ್ಬರ ಹೇಳಿಕೆಗಳು ಉತ್ತರಪ್ರದೇಶದ ಲಖನೌ ಸೇರಿದಂತೆ ಹಲವೆಡೆ ಹಿಂಸಾಚಾರಕ್ಕೂ ಕಾರಣವಾಗಿತ್ತು. ಜೊತೆಗೆ ಅರಬ್‌ ರಾಷ್ಟ್ರಗಳಲ್ಲಿ ಭಾರತ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ವಿದೇಶಗಳಲ್ಲಿ ಭಾರತದ ವಸ್ತುಗಳನ್ನು ನಿಷೇಧಿಸಬೇಕೆಂಬ ಆಗ್ರಹ ಕೇಳಿಬಂದಿದ್ದವು.\

ಇದನ್ನೂ ಓದಿ: Kanpur Violence ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ನೂಪುರ್ ಶರ್ಮಾ ಅಮಾನತು!

ಇದರ ಬೆನ್ನಲ್ಲೇ, ‘ಇಂಥ ಹೇಳಿಕೆಗಳು ಪಕ್ಷಕ್ಕೆ ಭಾರೀ ಮುಜುಗರ ತರುವ ಜೊತೆಗೆ, ಹೇಳಿಕೆ ಪಕ್ಷದ ನಂಬಿಕೆ ಮತ್ತು ಸಿದ್ಧಾಂತಕ್ಕೆ ಪೂರ್ಣ ವಿರುದ್ಧ’ ಎನ್ನುವ ಕಾರಣ ನೀಡಿ ಇಬ್ಬರ ವಿರುದ್ಧವೂ ಬಿಜೆಪಿ ಶಿಸ್ತುಕ್ರಮ ಕೈಗೊಂಡಿದೆ.

ಇದೇ ವೇಳೆ ಹೇಳಿಕೆಯಿಂದ ಅಸಮಾಧಾನಗೊಂಡಿದ್ದ ಮುಸ್ಲಿಂ ಸಮುದಾಯದ ಆಕ್ರೋಶ ತಣ್ಣಗಾಗಿಸುವ ಯತ್ನವನ್ನೂ ಮಾಡಿರುವ ಬಿಜೆಪಿ, ‘ಪಕ್ಷ ಎಲ್ಲಾ ಧರ್ಮಗಳನ್ನೂ ಗೌರವಿಸುತ್ತದೆ ಮತ್ತು ಯಾವುದೇ ಧಾರ್ಮಿಕ ನಾಯಕರ ಅವಹೇಳನವನ್ನು ಖಂಡಿಸುತ್ತದೆ’ ಎಂದು ಸ್ಪಷ್ಟಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..