
ಬಿಹಾರದ ಪಾಟ್ನಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಂತಹ ಘಟನೆ ನಡೆದಿದೆ. ಬಿಹಾರಕ್ಕೆ ರಾಹುಲ್ ಭೇಟಿ ನೀಡಿ ತೆರಳಿದ ಸ್ವಲ್ಪ ಹೊತ್ತಿನಲ್ಲಿ ಈ ಘಟನೆ ನಡೆದಿದೆ. ಬಿಹಾರದ ಕಾಂಗ್ರೆಸ್ ಕಚೇರಿ ಸದಾಕಾತ್ ಆಶ್ರಮದಲ್ಲಿ ಈ ಘಟನೆ ನಡೆದಿದ್ದು, ಕಾರ್ಯಕರ್ತರು ಪರಸ್ಪರ ಹೊಡೆದಾಡುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರದ ಬೇಗುಸರಾಯಿಗೆ ಮೆರವಣಿಗೆ ಮಾಡುತ್ತಿರುವ ರಾಹುಲ್ ಗಾಂಧಿ ಇಲ್ಲಿ ಕೆಲ ಕಾಲ ನಿಂತಿದ್ದರು. ವೀಡಿಯೋದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವ್ಯಕ್ತಿಯೊಬ್ಬರನ್ನು ಕಚೇರಿಯ ಹೊರಗೆ ಓಡಿಸಿಕೊಂಡು ಹೋಗಿ ಹೊಡೆಯುತ್ತಿರುವುದಲ್ಲದೇ ಆತನನ್ನು ಬಿಜೆಪಿ ಏಜೆಂಟ್, ಕಳ್ಳ ಎಂದೆಲ್ಲಾ ಕರೆಯುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.
ಕಾರ್ಯಕರ್ತರ ಈ ಹೈ ಡ್ರಾಮ ಸುಮಾರು 30 ನಿಮಿಷಗಳ ಕಾಲ ನಡೆದಿದೆ. ರಾಹುಲ್ ಗಾಂಧಿ ಕಾಂಗ್ರೆಸ್ ಕಚೇರಿಯಿಂದ ತೆರಳುವ ವೇಳೆ ಈ ವ್ಯಕ್ತಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸು ಬೋರ್ಡನ್ನು ಪ್ರದರ್ಶಿಸಿದ್ದಾನೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಇದನ್ನು ಪಕ್ಷದ ಕಾರ್ಯಕರ್ತರು ಗಮನಿಸಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದೆ. ಹೀಗಾಗಿ ಇಲ್ಲಿ ಕಾರ್ಯಕರ್ತ ವಕ್ಫ್ ಬೆಂಬಲಿಸುವ ಬೋರ್ಡನ್ನು ರಾಹುಲ್ ಭೇಟಿ ವೇಳೆ ಹಿಡಿದಿದ್ದು, ಕಾರ್ಯಕರ್ತರಲ್ಲಿ ಗೊಂದಲ ಮೂಡಿ ಹೊಡೆದಾಟ ನಡೆದಿದೆ.
ಆತ ಬಿಜೆಪಿ ಏಜೆಂಟ್, ಹಣಕ್ಕಾಗಿ ಇಲ್ಲಿಗೆ ಆತನನ್ನು ಕಳುಹಿಸಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಅಲ್ಲದೇ ಅವನಿಗೆ ಕಳ್ಳ, ಬಿಜೆಪಿ ಏಜೆಂಟ್ ಎಂದು ದೂರಿದ್ದಾರೆ. ಆ ವ್ಯಕ್ತಿ ತನ್ನನ್ನು ತಾನು "ರಾಮ್ ಬಾಬು ಯಾದವ್, ಭೋಜ್‌ಪುರ ಜಿಲ್ಲೆಯವನು ಎಂದು ಪರಿಚಯಿಸಿಕೊಂಡಿದ್ದಾನೆ. ನಾನು ಹುಟ್ಟಿನಿಂದಲೇ ಕಾಂಗ್ರೆಸ್ ಬೆಂಬಲಿಗ. ನಾನು ಪಂಚಾಯತ್ ಸದಸ್ಯ. ನನ್ನೊಂದಿಗೆ ಘರ್ಷಣೆ ಮಾಡುತ್ತಿದ್ದವನು ಮಾಜಿ ಶಾಸಕ, ಅವರು ವಾಸ್ತವವಾಗಿ ಬಿಜೆಪಿ ಏಜೆಂಟ್ ಎಂದು ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಾರೆ.
ಇದೇ ವೇಳೆ ಮಾಜಿ ರಾಜ್ಯಾಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಅಖಿಲೇಶ್ ಪ್ರಸಾದ್ ಸಿಂಗ್ ಕೂಡ ಈ ವಾಗ್ವಾದಲ್ಲಿ ಭಾಗಿಯಾಗಿ ಕಾಂಗ್ರೆಸ್ ಕಾರ್ಯಕರ್ತನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ. ಸಿಂಗ್ ಅವರು ತಮ್ಮ ಕಾರಿನ ಬಳಿಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ಇಬ್ಬರು ಪಕ್ಷದ ಕಾರ್ಯಕರ್ತರು ಅವರನ್ನು ತಡೆದಿದ್ದಾರೆ ಈ ವೇಳೆ ಅವರು ಇಬ್ಬರಲ್ಲಿ ಒಬ್ಬರಿಗೆ ಕಪಾಳಮೋಕ್ಷ ಮಾಡುವ ಮೂಲಕ ಜಗಳವನ್ನು ನಿಲ್ಲಿಸಿ ನಂತರ ತಮ್ಮ ಕಾರಿನಲ್ಲಿ ಹೊರಟು ಹೋದರು ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಹಲವಾರು ರಾಜಕೀಯ ಪಕ್ಷಗಳಲ್ಲಿ ಕಾಂಗ್ರೆಸ್ ಕೂಡ ಒಂದು. ಪ್ರಸ್ತಾವಿತ ಕಾನೂನನ್ನು ಸಂಸತ್ತು ಅಂಗೀಕರಿಸಿದ ನಂತರ ಶುಕ್ರವಾರ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಮಸೂದೆಯನ್ನು ಕಳೆದ ಶುಕ್ರವಾರ ರಾಜ್ಯಸಭೆಯಲ್ಲಿ 128 ಪರವಾಗಿ ಮತ್ತು 95 ವಿರುದ್ಧ ಮತಗಳೊಂದಿಗೆ ಅಂಗೀಕರಿಸಲಾಗಿತ್ತು. ಒಂದು ದಿನದ ಮೊದಲು, ಲೋಕಸಭೆಯಲ್ಲಿಯೂ 288 ಪರವಾಗಿ ಮತ್ತು 232 ವಿರುದ್ಧ ಮತಗಳೊಂದಿಗೆ ಅಂಗೀಕರಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಸೂದೆಗೆ ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ