
ನವದೆಹಲಿ (ಜು.23): ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಅವರ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ ಒಂದು ದಿನ ಮುಂದೂಡಿದೆ. ಈ ಹಿಂದೆ ಜು.25ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದ ಇ.ಡಿ. ದಿನಾಂಕವನ್ನು ಜು.26ಕ್ಕೆ ಬದಲಾಯಿಸಿದೆ. ಆದರೆ ವಿಚಾರಣೆಯನ್ನು ಯಾವ ಕಾರಣಕ್ಕಾಗಿ ಮುಂದೂಡಲಾಯಿತು ಎಂದು ಇ.ಡಿ. ತಿಳಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸೋನಿಯಾ ಅವರನ್ನು 2 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸುಮಾರು 50 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.
ಸೋನಿಯಾ ವಿಚಾರಣೆಗೆ ಕಾಂಗ್ರೆಸ್ ಕೆಂಡ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಗುರುವಾರ ವಿಚಾರಣೆಗೆ ಒಳಪಡಿಸಿದ್ದು ಕಾಂಗ್ರೆಸ್ಸಿನ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸೋನಿಯಾ ವಿಚಾರಣೆ ಸಂದರ್ಭ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಹಲವೆಡೆ ರಾಜಭವನಕ್ಕೆ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದ್ದರೆ, ಇನ್ನೂ ಕೆಲವೆಡೆ ರೈಲು ತಡೆಯಲಾಗಿದೆ. ಪ್ರತಿಭಟನೆ ವೇಳೆ ಕಾರೊಂದಕ್ಕೆ ಬೆಂಕಿ ಹಚ್ಚಿದ ಕುರಿತೂ ವರದಿಗಳು ಬಂದಿವೆ.
ಸೋನಿಯಾ ವಿಚಾರಣೆಗೆ ಕಾಂಗ್ರೆಸಿಗರು ಕೆಂಡ: ರಾಜಭವನ ಮುತ್ತಿಗೆ ಯತ್ನ
ಈ ಮಧ್ಯೆ ದೆಹಲಿಯಲ್ಲಿ ಕಾಂಗ್ರೆಸ್ಸಿನ ಸಂಸದರು ಸ್ವಯಂ ಬಂಧನಕ್ಕೆ ಒಳಗಾಗಿ ಪ್ರತಿಭಟಿಸಿದ್ದಾರೆ. ಸಂಸದರು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರು ದೆಹಲಿಯ ಎಐಸಿಸಿ ಕೇಂದ್ರ ಕಚೇರಿ ಹೊರಭಾಗದಲ್ಲಿ ಸೋನಿಯಾಗೆ ಬೆಂಬಲ ಸೂಚಿಸಿ ಸ್ವಯಂ ಬಂಧನಕ್ಕೆ ಒಳಗಾದರು. ದಬ್ಬಾಳಿಕೆಯ ವಿರುದ್ಧ ಕಾಂಗ್ರೆಸ್ ಯಾವತ್ತಿಗೂ ಮುಂದೆ ನಿಂತು ಹೋರಾಡುತ್ತದೆ ಎಂದು ಈ ವೇಳೆ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಇದೇ ವೇಳೆ, ಸೋನಿಯಾ ಅವರನ್ನು ಬೆದರಿಸಲು ಸ್ವೇಚ್ಛಾಚಾರದ ಮೋದಿ ಸರ್ಕಾರದಿಂದ ಎಂದಿಗೂ ಆಗುವುದಿಲ್ಲ ಎಂದು ಟ್ವೀಟ್ ಕೂಡ ಮಾಡಿದರು.
National Herald Case: ಇ.ಡಿ.ಯಿಂದ 2 ತಾಸು ಸೋನಿಯಾ ವಿಚಾರಣೆ
13 ಪಕ್ಷಗಳಿಂದ ಆಕ್ರೋಶ: ಈ ನಡುವೆ, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಎದುರಾಳಿಗಳ ವಿರುದ್ಧ ನಿರಂತರವಾಗಿ ಮೋದಿ ಸರ್ಕಾರ ದ್ವೇಷದಿಂದ ದಾಳಿ ನಡೆಸುತ್ತಿದೆ. ಹಲವಾರು ರಾಜಕೀಯ ಪಕ್ಷಗಳ ಪ್ರಮುಖ ನಾಯಕರನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಿಕೊಂಡು, ಕಂಡುಕೇಳರಿಯದ ರೀತಿ ಕಿರುಕುಳ ನೀಡಲಾಗಿದೆ ಎಂದು 13 ರಾಜಕೀಯ ಪಕ್ಷಗಳು ಗುರುವಾರ ಹೇಳಿಕೆ ಬಿಡುಗಡೆ ಮಾಡಿವೆ. ಸೋನಿಯಾ ವಿಚಾರಣೆ ಆರಂಭವಾಗುವ ಮುನ್ನ ಈ ಪಕ್ಷಗಳ ನಾಯಕರು ಸಂಸತ್ತಿನಲ್ಲಿ ಸಭೆ ಸೇರಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಡಿಎಂಕೆ, ಸಿಪಿಎಂ, ಕಾಂಗ್ರೆಸ್, ಸಿಪಿಐ, ಐಯುಎಂಎಲ್, ನ್ಯಾಷನಲ್ ಕಾನ್ಫರೆನ್ಸ್, ಟಿಆರ್‌ಎಸ್, ಎಂಡಿಎಂಕೆ, ಎನ್‌ಸಿಪಿ, ವಿಸಿಕೆ, ಶಿವಸೇನೆ, ಆರ್‌ಜೆಡಿ ಹಾಗೂ ಆರ್‌ಎಸ್‌ಪಿ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ