
ಜೈಪುರ(ಜ.7): ರಾಜಸ್ತಾನ (Rajasthan)ದ ಅಲ್ವಾರ್ (Alwar) ನಲ್ಲಿರುವ ಸರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿಗಳೆರಡು ಸರಸವಾಡುವ ದೃಶ್ಯವೊಂದು ವಿಡಿಯೋದಲ್ಲಿ ಸೆರೆಯಾಗಿದ್ದು, ಹವ್ಯಾಸಿ ಫೋಟೋಗ್ರಾಪರ್ ಒಬ್ಬರು ಈ ಸುಂದರ ಕ್ಷಣವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹೇಶ್ ಶರ್ಮಾ ಎಂಬ ಟ್ವಿಟ್ಟರ್ ಖಾತೆದಾರರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿವರೆಗೆ 8 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಎರಡು ಹುಲಿಗಳು ಪರಸ್ಪರ ಒಂದರ ಮುಖವನ್ನು ಒಂದು ನೆಕ್ಕುತ್ತಿರುವುದು ವಿಡಿಯೋದಲ್ಲಿದೆ. ವೀಡಿಯೊದ ಆರಂಭದಲ್ಲಿ ಹುಲಿ ಕಾಡಿನೊಳಗೆ ಮಣ್ಣಿನ ರಸ್ತೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಶೀಘ್ರದಲ್ಲೇ, ಮತ್ತೊಂದು ದೊಡ್ಡ ಹುಲಿ ಇದರತ್ತ ಧಾವಿಸಿ ಬರುತ್ತದೆ. ಅದು ಹತ್ತಿರವಾಗುತ್ತಿದ್ದಂತೆ, ಕುಳಿತಿದ್ದ ಹುಲಿ ತಕ್ಷಣವೇ ಎದ್ದು ನಿಲ್ಲುತ್ತದೆ. ಪ್ರೀತಿಯ ಪ್ರದರ್ಶನದಲ್ಲಿ, ಎರಡೂ ಹುಲಿಗಳು ತಮ್ಮ ಮುಖಗಳನ್ನು ಪರಸ್ಪರ ಉಜ್ಜಲು ಪ್ರಾರಂಭಿಸಿದವು. ನಂತರ ಒಟ್ಟಿಗೆ ಕುಳಿತು ಎರಡೂ ಹುಲಿಗಳು ಮೂಕ ಸಂಭಾಷಣೆಯಲ್ಲಿ ತೊಡಗಿವೆ.
ಏತನ್ಮಧ್ಯೆ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರು, ಸರಿಸ್ಕಾದಲ್ಲಿ ತನ್ನ ಮರಿಗಳೊಂದಿಗೆ ಕಾಣಿಸಿಕೊಂಡಿರುವ ST 19 ಹುಲಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸರಿಸ್ಕಾದಲ್ಲಿ ಟೈಗ್ರೆಸ್ ST 19 ಮರಿಗಳೊಂದಿಗೆ ಕಾಣಿಸಿಕೊಂಡಿದೆ ಎಂದು ತಿಳಿಯುವುದಕ್ಕೆ ಖುಷಿ ಆಗುತ್ತಿದೆ. ರಾಜಸ್ಥಾನದಲ್ಲಿ ವನ್ಯಜೀವಿಗಳು ಅಭಿವೃದ್ಧಿ ಹೊಂದುವುದನ್ನು ನೋಡಲು ಸಂತೋಷವಾಗಿದೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
ಸರಿಸ್ಕಾ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಗಳ ಸಂಖ್ಯೆ 25 ಕ್ಕೆ ಏರಿಕೆಯಾಗಿದ್ದು, 11 ಹೆಣ್ಣು, ಎಂಟು ಗಂಡು ಮತ್ತು ಆರು ಮರಿಗಳಿವೆ ಎಂದು ಪಿಟಿಐ ವರದಿ ಮಾಡಿದೆ. 2004 ಮತ್ತು 2008 ರ ನಡುವೆ ಮುಖ್ಯವಾಗಿ ಬೇಟೆ ಮತ್ತು ಬೇಟೆ ಆಡುವುದರಿಂದಾಗಿ ಸರಿಸ್ಕಾ ಹುಲಿ ರಕ್ಷಿತಾರಣ್ಯವು ಎಲ್ಲಾ ಹುಲಿಗಳನ್ನು ಕಳೆದುಕೊಂಡಿತ್ತು. ನಂತರ, ರಾಜಸ್ಥಾನ ಸರ್ಕಾರವು ಸರಿಸ್ಕಾದಲ್ಲಿ ಹುಲಿಗಳನ್ನು ಪುನಃ ಪರಿಚಯಿಸುವ ಸವಾಲನ್ನು ತೆಗೆದುಕೊಂಡಿತು ಮತ್ತು ಜೂನ್ 2008 ರಲ್ಲಿ ಹಲವಾರು ರಾಷ್ಟ್ರೀಯ ಮತ್ತು ರಾಜ್ಯ ಏಜೆನ್ಸಿಗಳ ಸಹಯೋಗದೊಂದಿಗೆ ಕಾರ್ಯಪಡೆಯನ್ನು ಸ್ಥಾಪಿಸಿತು.
800 ಚದರ ಕಿಲೋಮೀಟರ್ ವ್ಯಾಪ್ತಿಯ ಅರಾವಳಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶವು ಹುಲ್ಲುಗಾವಲುಗಳು, ಒಣ ಕಾಡುಗಳು, ಸಂಪೂರ್ಣ ಬಂಡೆಗಳು ಮತ್ತು ಕಲ್ಲಿನ ಭೂಪ್ರದೇಶವನ್ನು ಹೊಂದಿದೆ. sariskanationalpark.com ಪ್ರಕಾರ 1958 ರಲ್ಲಿ, ಮೀಸಲು ವನ್ಯಜೀವಿ ಅಭಯಾರಣ್ಯ ಎಂದು ಸರಿಸ್ಕಾ ಹುಲಿ ಸಂರಕ್ಷಿತ ಅರಣ್ಯವನ್ನು ಘೋಷಿಸಲಾಯಿತು. ಇದು 1979 ರಲ್ಲಿ, 'ಪ್ರಾಜೆಕ್ಟ್ ಟೈಗರ್' ಅಡಿಯಲ್ಲಿ ಬಂತು.
ಪ್ರವಾಸಿಗರ ಎದುರೇ ಬೀದಿ ನಾಯಿ ಮೇಲೆರಗಿದ ಹುಲಿ... ಭಯಾನಕ ವಿಡಿಯೋ ವೈರಲ್
ಇತ್ತೀಚೆಗೆ 6 ಹುಲಿಗಳು ಒಟ್ಟಿಗೆ ಕಾಣಿಸಿಕೊಂಡಿರುವ ಅಪರೂಪದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇಂಟರ್‌ನೆಟ್‌ನಲ್ಲಿ (Intermet) ಈ ವಿಡಿಯೋ ಭಾರೀ ವೈರಲ್ ಆಗಿತ್ತು. ಹುಲಿಗಳು (Tigers) ನೈಸರ್ಗಿಕವಾಗಿ ಏಕಾಂಗಿಯಾಗಿ ಜೀವಿಸುವ ಪ್ರಾಣಿ. ಮರಿಗಳನ್ನು ಹೊರತುಪಡಿಸಿದರೆ ಸಾಮಾನ್ಯವಾಗಿ ಹುಲಿಗಳು ಗುಂಪಾಗಿ ಕಾಣಿಸಿಕೊಳ್ಳುವುದಿಲ್ಲ. ಅಂಥದ್ದರಲ್ಲಿ 6 ಹುಲಿಗಳು ಕಾಡಿನಲ್ಲಿ ಸಾಲಾಗಿ ನಡೆದು ಬರುತ್ತಿರುವ ವಿಡಿಯೋವನ್ನು ನಟ ರಾಜ್‌ದೀಪ್ ಹೂಡಾ (Rajdeep Hooda) ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೊವನ್ನು ಮಹಾರಾಷ್ಟ್ರದ ನಾಗ್ಪುರ (Nagpur) ಬಳಿಯ ಉಮ್ರೆದ್-ಕರ್ಹಂಡ್ಲಾ ವನ್ಯಜೀವಿ ಅಭಯಾರಣ್ಯದಲ್ಲಿ ಚಿತ್ರೀಕರಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ