
ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತ ಪಾಕಿಸ್ತಾನ ಗಡಿಯಲ್ಲಿ ಭಾರತೀಯ ಸೇನೆಯ ಯೋಧರಿಗೆ ಚಹಾ ತಿಂಡಿ ನೀಡುವ ಮೂಲಕ ಸಹಾಯ ಮಾಡಿದ 10 ವರ್ಷದ ಬಾಲಕ ಶ್ರವಣ್ ಸಿಂಗ್ ಅವರಿಗೆ ಭಾರತ ಸರ್ಕಾರದ ಪ್ರಧಾನ ಮಂತ್ರಿ ಬಾಲ ಪುರಸ್ಕಾರ 2026 ಪ್ರಶಸ್ತಿ ಲಭ್ಯವಾಗಿದೆ. ಶ್ರವಣ್ ಸಿಂಗ್ ಅವರು ಭಾರತ ಪಾಕಿಸ್ತಾನ ಗಡಿಗೆ ಸಮೀಪ ಇರುವ ಪಂಜಾಬ್‌ನ ಫಿರೋಜ್‌ಪುರ ಸಮೀಪದ ತಾರಾ ವಾಲಿ ಗ್ರಾಮದ ಮಮ್ಡೊಟ್ ಬ್ಲಾಕ್‌ನ ನಿವಾಸಿಯಾಗಿದ್ದಾರೆ.
ಅವರಿಗೆ ನಿನ್ನೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2026ರ ಪ್ರಧಾನಮಂತ್ರಿ ಬಾಲಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ಅವರ ಅತ್ಯುತ್ತಮ ಧೈರ್ಯ, ದೇಶಪ್ರೇಮ, ಯೋಧರ ಮೇಲಿನ ಕರುಣೆ ಇವೆಲ್ಲವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ವೀರ್ ಬಾಲ ದಿವಸ್ ಕಾರ್ಯಕ್ರಮದಲ್ಲಿ ಬಾಲಕ ಶ್ರವಣ್ ಸಿಂಗ್‌ಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯ್ತು.
ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕ್ ಡ್ರೋನ್‌ಗಳ ಹಿಂಡು ಗಡಿಯಾಚೆಯಿಂದ ಭಾರತೀಯ ಪ್ರದೇಶವನ್ನು ಪ್ರವೇಶಿಸುತ್ತಿದ್ದ ವೇಳೆ ಶ್ರವಣ್ ಈ ಕಾರ್ಯಾಚರಣೆಯಲ್ಲಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದ ಸೇನಾ ಯೋಧರಿಗೆ ನೀರು, ಲಸ್ಸಿ, ಹಾಲು ಮತ್ತು ಚಹಾವನ್ನು ಪೂರೈಸಿದ್ದರು. ಗಡಿಯಲ್ಲಿನ ಉದ್ವಿಘ್ನತೆಯ ನಡುವೆಯೂ ಅವರು ನಡೆಸಿದ ಈ ಸೇವಾ ಕಾರ್ಯಕ್ಕೆ ಯೋಧರು, ಸ್ಥಳೀಯ ಸಮುದಾಯದವರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದರು, ಮಾಧ್ಯಮಗಳಲ್ಲೂ ಅವರ ಕಾರ್ಯದ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು.
2026ರ ಪ್ರಧಾನಮಂತ್ರಿ ಬಾಲಪುರಸ್ಕಾರ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಶ್ರವಣ್ ಸಿಂಗ್, ಸೈನಿಕರಿಗೆ ಸಹಾಯ ಮಾಡುವುದನ್ನು ಇಷ್ಟಪಡುತ್ತೇನೆ ಮತ್ತು ಪ್ರತಿದಿನ ಅವರಿಗೆ ತಣ್ಣೀರು ಮತ್ತು ಹಾಲು ನೀಡುತ್ತಿದ್ದೆ ಎಂದು ಹೇಳಿದರು. ಅವರು ನನಗೆ ವಿಶೇಷ ಉಡುಗೊರೆ ನೀಡಿದರು, ನನ್ನೊಂದಿಗೆ ಊಟ ಹಂಚಿಕೊಂಡರು, ಮತ್ತು ಐಸ್ ಕ್ರೀಮ್ ಕೂಡ ನೀಡಿದರು. ನಾನು ದೊಡ್ಡವನಾದಾಗ ಸೈನಿಕನಾಗಲು ಮತ್ತು ರಾಷ್ಟ್ರ ಸೇವೆ ಮಾಡಲು ಬಯಸುತ್ತೇನೆ. ಸಮಾರಂಭಕ್ಕಾಗಿ ನಾನು ಹೊಸ ಬಟ್ಟೆಗಳನ್ನು ಸಹ ಖರೀದಿಸಿದ್ದೆ ಎಂದು ಅವರು ಹೇಳಿದ್ದಾರೆ.
ಶ್ರವಣ್ ಅವರ ತಂದೆ ಸೋನಾ ಸಿಂಗ್ ಅವರು, ಆಪರೇಷನ್ ಸಿಂಧೂರ್ ಸಮಯದಲ್ಲಿ ಸೈನಿಕರು ತಮ್ಮ ಹೊಲಗಳಲ್ಲಿ ಬೀಡು ಬಿಟ್ಟಿದ್ದರು ಎಂದು ಹೇಳಿದರು. ಮೊದಲ ದಿನದಿಂದಲೂ, ನನ್ನ ಮಗ ಸೈನಿಕರಿಗೆ ಸೇವೆ ಸಲ್ಲಿಸಲು ಬಯಸುತ್ತಿದ್ದ ಏಕೆಂದರೆ ಅವನು ಸೈನಿಕರಿಗೆ ಸೇವೆ ಸಲ್ಲಿಸುವುದರಲ್ಲಿ ಸಂತೋಷವನ್ನು ಕಂಡುಕೊಂಡಿದ್ದಾನೆ. ಅವನು ಅವರಿಗೆ ಉಪಾಹಾರ ಚಹಾ ತಿಂಡಿಗಳನ್ನು ನೀಡುತ್ತಲೇ ಇದ್ದನು. ಮತ್ತು ಅವರ ಜೊತೆ ಇರುವುದಕ್ಕೆ ಇಷ್ಟ ಪಡುತ್ತಿದ್ದನು. ಅವನು ಅವರಿಗೆ ಉಪಾಹಾರ ಮತ್ತು ಸಾಂತ್ವನ ನೀಡುವುದನ್ನುನೋಡಿ ನಮ್ಮ ಕುಟುಂಬಕ್ಕೆ ಹೆಮ್ಮೆಯಾಗಿದೆ. ಮುಂದೊಂದು ದಿನ ನಾನು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುತ್ತೇನೆ ಎಂದು ಅವನು ಹೇಳುತ್ತಾನೆ. ತನ್ನ ಕಿರಿಯ ಮಗನಿಗೆ ಇಂತಹ ಗೌರವ ಸಿಗುತ್ತದೆ ಎಂದು ನಾನು, ಅವನು ಎಂದಿಗೂ ಊಹಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ಪೀಡಿತರ ಆರೈಕೆಗಾಗಿ ಜೀವಮಾನದ ಉಳಿಕೆಯನ್ನೆಲ್ಲಾ ಎಮ್ಸ್‌ಗೆ ದಾನ ನೀಡಿದ ಶತಾಯುಷಿ ಸ್ತ್ರೀರೋಗ ತಜ್ಞೆ
ಶ್ರವಣ್ ಅವರ ತಾಯಿ ಸಂತೋಷ್ ರಾಣಿ ಅವರು ಕೂಡ ತಮ್ಮ ಮಗನ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡಿದ್ದಕ್ಕಾಗಿ ಸೈನ್ಯಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.ಅವನು ಮುಂದೊಂದು ದಿನ ಸೈನಿಕನಾಗಬೇಕು ಎಂದು ಕನಸು ಕಾಣುತ್ತಿದ್ದ ಯೋಧರು ಅವನ ಸ್ನೇಹಿತರಾದರು ಎಂದು ಹೇಳಿದರು. ಈ ಹಿಂದೆಯೇ ಶ್ರವಣ್ ಅವರ ಶಿಕ್ಷಣ ವೆಚ್ಚ ಭರಿಸುವುದಾಗಿ ಸೇನೆ ಹೇಳಿತ್ತು. ಸೇನೆಯ ಗೋಲ್ಡನ್ ಆರೋ ವಿಭಾಗವು ಅವರಿಗೆ ಕಿರಿಯ ನಾಗರಿಕ ಯೋಧ ಎಂಬ ಬಿರುದನ್ನು ನೀಡಿತು ಮತ್ತು ಅವರ ಶಿಕ್ಷಣವನ್ನು ಬೆಂಬಲಿಸಲು ನಿರ್ಧರಿಸಿದೆ. ಆ ಸಂದರ್ಭದಲ್ಲಿ ಪಶ್ಚಿಮ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಕುಮಾರ್ ಕಟಿಯಾರ್ ಅವರು ಶ್ರವಣ್ ಅವರನ್ನು ಸನ್ಮಾನಿಸಿ, ಜನರೊಂದಿಗೆ ಸೇನೆಯ ಬಾಂಧವ್ಯವನ್ನು ಎತ್ತಿ ತೋರಿಸಿದ್ದರು.
ಇದನ್ನೂ ಓದಿ: ಸ್ವಂತ ಉದ್ಯೋಗಿಗೆ ಸಾಲ ಕೊಡದ ದೇಶದ ಪ್ರತಿಷ್ಠಿತ ಬ್ಯಾಂಕ್: ಚಿಕಿತ್ಸೆ ನೀಡಲಾಗದೇ ಕ್ಯಾನ್ಸರ್ ಪೀಡಿತ ತಾಯಿ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ