
ಮನುಷ್ಯ ಆರೋಗ್ಯ ಎಷ್ಟು ಅಮೂಲ್ಯ ಜೀವನ ಎಷ್ಟು ಕ್ಷಣಿಕ ಎಂಬುದನ್ನು ತಿಳಿಯಬೇಕಾದರೆ ಆಸ್ಪತ್ರೆಯ ಬೆಡ್‌ನಲ್ಲಿ 4 ದಿನವಾದರೂ ಮಲಗಬೇಕು ಎಂದು ಕೆಲವರು ಹೇಳುವುದನ್ನು ನೀವು ಕೇಳಿರಬಹುದು. ಜೀವನದ ಮೌಲ್ಯ, ಉದ್ದೇಶ ಎಲ್ಲವನ್ನು ನಿಮಗೆ ಆಸ್ಪತ್ರೆ ತಿಳಿಸಿಕೊಡುತ್ತದೆ(ಅರಿಯುವವರಿಗೆ ಮಾತ್ರ). ಅದೇ ರೀತಿ ಓರ್ವ ಸ್ತ್ರೀ ರೋಗ ತಜ್ಞೆಯಾಗಿ ಜೀವನದ ಬಹುತೇಕ ಸಮಯವನ್ನು ಆಸ್ಪತ್ರೆಯಲ್ಲಿ ಕಳೆದ ದೇಶದ ಶತಾಯುಷಿ ವೈದ್ಯೆ ಡಾ ಲಕ್ಷ್ಮಿಬಾಯಿ ಅವರು ಈಗ ತಮ್ಮ ಜೀವಮಾನದ ಉಳಿಕೆಯಾದ ಸುಮಾರು 3.4 ಕೋಟಿ ರೂಪಾಯಿಗಳನ್ನು ಒಡಿಶಾದ ಭುವನೇಶ್ವರದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಾದ(AIIMS)ಏಮ್ಸ್‌ಗೆ ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಕ್ಯಾನ್ಸರ್ ಹಾಗೂ ಸ್ತ್ರೀ ಸಂಬಂಧಿ ಮಾರಕ ಕಾಯಿಲೆಗಳ ಸಂಶೋಧನೆಗಾಗಿ ಅವರು ಈ ಹಣವನ್ನು ದಾನ ಮಾಡಿದ್ದಾರೆ.
ಒಂದು ರೂ ನೀಡುವುದಕ್ಕೂ ಹಿಂದೆ ಮುಂದೆ ನೋಡುವ ಇಂದಿನ ಕಾಲದಲ್ಲಿ ಅವರು ತಾವು ಕೂಡಿಟ್ಟ ಹಣವನ್ನೆಲ್ಲಾ ಏಮ್ಸ್‌ಗೆ ದಾನ ಮಾಡಿದ್ದಾರೆ. 1945 ರಲ್ಲಿ ವೈದ್ಯಕೀಯ ಪದವಿ ಪಡೆದ ಪ್ರೊಫೆಸರ್ ಕೆ. ಲಕ್ಷ್ಮಿ ಬಾಯಿ ಅವರು ಈ ವರ್ಷದ ಮೇ ತಿಂಗಳಲ್ಲಿ ಈ ಮೊತ್ತವನ್ನು ಏಮ್ಸ್‌ಗೆ ದಾನ ಮಾಡಿದ್ದರು. ಲಕ್ಷ್ಮಿಬಾಯಿ ಅವರು ಈ ಮಹತ್ ಕಾರ್ಯಕ್ಕೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸಿದ್ಧ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿದ್ದ ಪ್ರೊಫೆಸರ್ ಲಕ್ಷ್ಮಿ ಬಾಯಿ ಅವರು 1986 ರಲ್ಲಿಯೇ ಬೆರ್ಹಾಂಪುರದ ಮಹಾರಾಜ ಕೃಷ್ಣ ಚಂದ್ರ ಗಜಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಈ ಶತಾಯುಷಿ ವೈದ್ಯೆ ಲಕ್ಷ್ಮಿಬಾಯಿ ಅವರ ಈ ಮಹಾದಾನಕ್ಕೆ ಏಮ್ಸ್‌ನ ಎಕ್ಸಿಕ್ಯೂಟಿವ್ ಡಿರೆಕ್ಟರ್ ಡಾ. ಅಶುತೊಷ್ ಬಿಸ್ವಾಸ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು. ಪ್ರೊ. ಕೆ. ಲಕ್ಷ್ಮಿ ಬಾಯಿ ಅವರ ಅಸಾಧಾರಣ ಕಾರ್ಯವು ಕೇವಲ ಆಶೀರ್ವಾದವಲ್ಲ, ಬದಲಾಗಿ ಉತ್ತಮ ಗುಣಮಟ್ಟದ ರೋಗಿಗಳ ಆರೈಕೆ, ವೈದ್ಯಕೀಯ ಶಿಕ್ಷಣ ಮತ್ತು ಮುಂದುವರಿದ ಸಂಶೋಧನೆಯಲ್ಲಿ ಏಮ್ಸ್ ಭುವನೇಶ್ವರದ ನಿರಂತರ ಪ್ರಯತ್ನಗಳಿಗೆ ಸಿಕ್ಕ ಪ್ರಬಲವಾದ ಮನ್ನಣೆಯಾಗಿದೆ ಎಂದು ಹೇಳಿದರು.
ವೈದ್ಯ ಲಕ್ಷ್ಮಿಬಾಯಿ ಅವರು ನೀಡಿದ ಈ ದೇಣಿಗೆ ಮೊತ್ತವನ್ನು ಕಾರ್ಪಸ್ ನಿಧಿಯಾಗಿ ಸ್ಥಾಪಿಸಿ, ಇದರಿಂದ ಬರುವ ಬಡ್ಡಿಯನ್ನು ಸ್ತ್ರೀರೋಗ ಮಾರಕ ಕಾಯಿಲೆಗಳ ಸಂಶೋಧನೆಗೆ, ಬಡವರು ಮತ್ತು ದೀನದಲಿತರಿಗೆ ಸಮುದಾಯ ಕ್ಯಾನ್ಸರ್ ಸೇವೆಗಳನ್ನು ಒದಗಿಸಲು ಮತ್ತು ಕ್ಯಾನ್ಸರ್ ತಡೆಗಟ್ಟುವ ಸಂಶೋಧನೆಗಳಿಗೆ ಬಳಸಲಾಗುವುದು. ಈ ನಿಧಿಯ ಅತ್ಯುತ್ತಮ ಮತ್ತು ಪಾರದರ್ಶಕ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ಕಾರ್ಯನಿರ್ವಾಹಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತಜ್ಞ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಸ್ವಂತ ಉದ್ಯೋಗಿಗೆ ಸಾಲ ಕೊಡದ ದೇಶದ ಪ್ರತಿಷ್ಠಿತ ಬ್ಯಾಂಕ್: ಚಿಕಿತ್ಸೆ ನೀಡಲಾಗದೇ ಕ್ಯಾನ್ಸರ್ ಪೀಡಿತ ತಾಯಿ ಸಾವು
ಇತ್ತೀಚೆಗೆ ಡಾ ಲಕ್ಷ್ಮಿಬಾಯಿ ಅವರು ನೂರು ವರ್ಷ ಪೂರೈಸಿದ ಹಿನ್ನೆಲೆ ಭುವನೇಶ್ವರದ ಏಮ್ಸ್‌ನ ತಂಡವು ಪ್ರೊಫೆಸರ್ ಲಕ್ಷ್ಮಿ ಬಾಯಿ ಅವರನ್ನು ಬೆರ್ಹಾಂಪುರದಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿ ಅವರ 100 ನೇ ಹುಟ್ಟುಹಬ್ಬಕ್ಕೆ ಸಂಸ್ಥೆಯ ಪರವಾಗಿ ಶುಭಾಶಯ ಹಾಗೂ ಕೃತಜ್ಞತೆಗಳನ್ನು ಸಲ್ಲಿಸಿತು. ಏಮ್ಸ್ ಭುವನೇಶ್ವರವು ಪ್ರೊಫೆಸರ್ ಲಕ್ಷ್ಮಿ ಬಾಯಿ ಅವರು ಇಟ್ಟಿರುವ ನಂಬಿಕೆಯನ್ನು ಬಹಳವಾಗಿ ಗೌರವಿಸುತ್ತದೆ.ಮತ್ತು ಸಮಾಜದ ಪ್ರಯೋಜನಕ್ಕಾಗಿ ಆರೋಗ್ಯ ರಕ್ಷಣೆ, ಕರುಣೆ ಆಧಾರಿತ ಸೇವೆ ಮತ್ತು ವೈದ್ಯಕೀಯ ಸಂಶೋಧನೆಯನ್ನು ಮುಂದುವರೆಸುವಲ್ಲಿ ಶ್ರೇಷ್ಠತೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಏಮ್ಸ್ ತಂಡ ಹೇಳಿದೆ.
ಇದನ್ನೂ ಓದಿ: 4.7 ಮಹಿಳಾ ಸ್ನೇಹಿ ರೇಟಿಂಗ್ ಹೊಂದಿದ್ದ ಕಂಪನಿ ಸಿಇಒನಿಂದಲೇ ಉದ್ಯೋಗಿಯ ಗ್ಯಾಂಗ್‌ರೇ*ಪ್ : ಪ್ರಕರಣದಲ್ಲಿ ಮಹಿಳೆಯೂ ಭಾಗಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ