ಭಾರತದಲ್ಲಿ ಕುಳಿತುಕೊಂಡು ಮಾಜಿ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದೇಶದಲ್ಲಿ ರಾಜಕೀಯ ಹೇಳಿಕೆ ನೀಡುವುದು ಸ್ನೇಹಮಯಿ ವರ್ತನೆಯಲ್ಲ ಎಂದು ಬಾಂಗ್ಲಾದೇಶದ ನೂತನ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಸಲಹೆ ಮಾಡಿದ್ದಾರೆ.
ಢಾಕಾ (ಸೆ.6): ಭಾರತದಲ್ಲಿ ಕುಳಿತುಕೊಂಡು ಮಾಜಿ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದೇಶದಲ್ಲಿ ರಾಜಕೀಯ ಹೇಳಿಕೆ ನೀಡುವುದು ಸ್ನೇಹಮಯಿ ವರ್ತನೆಯಲ್ಲ. ನಾವು ಭಾರತದ ಎದುರು ಗಡೀಪಾರು ಬೇಡಿಕೆ ಇಡುವವರೆಗೂ ಹಸೀನಾ ಅವರು ಮೌನವಾಗಿರಬೇಕು. ತನ್ಮೂಲಕ ಎರಡೂ ದೇಶಗಳಿಗೆ ಇರುಸುಮುರುಸಾಗುವುದನ್ನು ತಡೆಯಬೇಕು ಎಂದು ಬಾಂಗ್ಲಾದೇಶದ ನೂತನ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಸಲಹೆ ಮಾಡಿದ್ದಾರೆ.
ಹಸೀನಾ ಭಾರತದಲ್ಲಿದ್ದುಕೊಂಡು ಕೆಲವು ಬಾರಿ ಮಾತನಾಡುತ್ತಿದ್ದಾರೆ. ಇದು ಸಮಸ್ಯೆಗೆ ಕಾರಣವಾಗುತ್ತಿದೆ. ಆಕೆ ಮೌನದಿಂದ ಇದ್ದರೆ, ಒಳ್ಳೆಯದು. ಭಾರತದಲ್ಲಿ ಕುಳಿತು ಮಾತನಾಡುವುದು, ನಿರ್ದೇಶನಗಳನ್ನು ನೀಡುವುದನ್ನು ಯಾರೂ ಇಷ್ಟಪಡುವುದಿಲ್ಲ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬಾಂಗ್ಲಾದ ಶೇಖ್ ಹಸೀನಾ ಭಾರತ ಬಿಟ್ಟು ಹೋಗ್ತಾರಂತೆ! ಎಲ್ಲಿಗೆ ಹೋಗ್ತಾರೆ
ಆ.15ರಂದು ಬಾಂಗ್ಲಾ ತೊರೆದ ಹಸೀನಾ ಅವರು ಆ.13ರಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಕೆಲವರು ಭಯೋತ್ಪಾದಕ ದಾಳಿ ನಡೆಸಿದ್ದಾರೆ. ಅವರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದರು.
ಭಾರತ ಬಿಂಬಿಸುವಂತೆ ಹಿಂದೂಗಳ ಮೇಲೆ ದಾಳಿ ನಡೆದಿಲ್ಲ:
ಶೇಖ್ ಹಸೀನಾ ಪಲಾಯನ ನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆದ ದಾಳಿಗಳ ಬಗ್ಗೆ ಉತ್ಪ್ರೇಕ್ಷೆ ಮಾಡಲಾಗಿದೆ. ಈ ದಾಳಿಗಳು ನಡೆದಿದ್ದು ಕೋಮು ವಿಚಾರಕ್ಕೆ ಅಲ್ಲ. ರಾಜಕೀಯ ಕಾರಣಕ್ಕೆ. ಭಾರತ ಬಿಂಬಿಸುತ್ತಿರುವಂತೆ ದಾಳಿಗಳು ಆಗಿಲ್ಲ ಎಂದು ಬಾಂಗ್ಲಾ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಹೇಳಿದ್ದಾರೆ.
ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರ್ಕಾರವನ್ನು ಬೆಂಬಲಿಸಿದ್ದಾರೆ ಎಂಬ ಕಾರಣಕ್ಕೆ ಹಿಂದುಗಳ ಮೇಲೆ ಬಾಂಗ್ಲಾದಲ್ಲಿ ದಾಳಿ ನಡೆಸಲಾಗಿದೆ. ಅವಾಮಿ ಲೀಗ್ ಬೆಂಬಲಿಗರೆಂದರೆ ಹಿಂದುಗಳು ಎಂಬ ಭಾವನೆ ದೇಶದಲ್ಲಿದ್ದು, ಅದಕ್ಕಾಗಿ ಹಲ್ಲೆ ನಡೆಸಲಾಗಿದೆ. ಇದನ್ನು ಸರಿ ಎಂದು ನಾನು ಹೇಳುವುದಿಲ್ಲ. ಆದರೂ ಭಾರತ ಇದನ್ನು ದೊಡ್ಡದಾಗಿ ಬಿಂಬಿಸುತ್ತಿದೆ. ನಾವೇನು ಮಾಡಲಾಗದು ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ಶೇಖ್ ಹಸೀನಾ ಇಲ್ಲದ ಕಾರಣ ಬಾಂಗ್ಲಾದೇಶವು ಮತ್ತೊಂದು ಅಪಘಾನಿಸ್ತಾನವಾಗಿಬಿಡಲಿದೆ ಎಂಬ ಅಭಿಪ್ರಾಯ ಪ್ರಸರಣವನ್ನು ಭಾರತ ನಿಲ್ಲಿಸಬೇಕು ಎಂದು ಹೇಳಿದ್ದಾರೆ.