‘ಮುಖ್ಯಮಂತ್ರಿ ಎಂದರೆ ಹಳೆಯ ಕಾಲದ ರಾಜನಂತಲ್ಲ. ಅವರು ಇಂದು ಇತರರ ಸಲಹೆ ಕೇಳಿ ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು’ ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ನವದೆಹಲಿ (ಸೆ.6): ‘ಮುಖ್ಯಮಂತ್ರಿ ಎಂದರೆ ಹಳೆಯ ಕಾಲದ ರಾಜನಂತಲ್ಲ. ಅವರು ಇಂದು ಇತರರ ಸಲಹೆ ಕೇಳಿ ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು’ ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ಉತ್ತರಾಖಂಡದಲ್ಲಿ ರಾಹುಲ್ ಎಂಬ ಅರಣ್ಯಾಧಿಕಾರಿಯನ್ನು ರಾಜಾಜಿ ಹುಲಿ ರಕ್ಷಿತಾರಣ್ಯದ ಮುಖ್ಯಸ್ಥರನ್ನಾಗಿ ಧಾಮಿ ನೇಮಿಸಿದ್ದರು. ‘ರಾಹುಲ್ ಅವರ ವಿರುದ್ಧ ಕಾರ್ಬೆಟ್ ಹುಲಿ ರಕ್ಷಿತಾರಣ್ಯದಲ್ಲಿನ ಮರ ಕಡಿತ ಪ್ರಕರಣದಲ್ಲಿ ಇಲಾಖಾ ತನಿಖೆ ನಡೆಯುತ್ತಿದ್ದು, ಅವರನ್ನು ನೇಮಿಸಬಾರದು’ ಎಂಬ ರಾಜ್ಯದ ಅರಣ್ಯ ಅರಣ್ಯ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಆಕ್ಷೇಪವನ್ನು ಧಾಮಿ ಕಡೆಗಣಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಆಗಿತ್ತು.
undefined
ಇದರ ವಿಚಾರಣೆ ನಡೆಸಿದ ನ್ಯಾ। ಪಿ.ಕೆ. ಮಿಶ್ರಾ ಹಾಗೂ ನ್ಯಾ। ಕೆ.ಎಸ್. ವಿಶ್ವನಾಥನ್ ಅವರ ಪೀಠ, ‘ಇಲಾಖಾ ತನಿಖೆಯ ಆರೋಪ ಹೊತ್ತ ರಾಹುಲ್ ಮೇಲೆ ನಿಮಗೇಕೆ (ಸಿಎಂ ಧಾಮಿ) ಅಷ್ಟು ಪ್ರೀತಿ? ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳು ಆಕ್ಷೇಪ ಎತ್ತಿದರೂ ರಾಹುಲ್ ಅವರನ್ನೇ ನೇಮಿಸಿದ್ದಕ್ಕೇಕೆ? ರಾಹುಲ್ ನಿರ್ದೋಷಿ ಎಂದು ತನಿಖೆಯಲ್ಲಿ ಸಾಬೀತಾಗುವವರೆಗೆ ಅನ್ಯರನ್ನು ಏಕೆ ಆ ಹುದ್ದೆಗೆ ನೇಮಿಸಲಿಲ್ಲ?’ ಎಂದು ಪ್ರಶ್ನಿಸಿತು.
‘ಒಂದು ರಾಜ್ಯದ ಮುಖ್ಯಸ್ಥನಾದವನು ಹಳೆಯ ಕಾಲದ ರಾಜನಂತೆ ‘ನನ್ನ ಮಾತೇ ಅಂತಿಮ’ ಎಂಬಂತೆ ನಡೆದುಕೊಳ್ಳುವಂತಿಲ್ಲ. ಕೇವಲ ಮುಖ್ಯಮಂತ್ರಿ ಪದವಿಯಲ್ಲಿದ್ದೇನೆ ಎಂಬ ಮಾತ್ರಕ್ಕೆ ಮನಬಂದಂತೆ ನಡೆದುಕೊಳ್ಳಬಹುದೆ? ಹೀಗೆಯೇ ನಡೆದುಕೊಂಡು ಇತರರ ಆಕ್ಷೇಪ ನಿರ್ಲಕ್ಷಿಸಿದ್ದಾರೆ. ಇದು ಊಳಿಗಮಾನ್ಯ ಪದ್ಧತಿಯ ಯುಗವಲ್ಲ’ ಎಂದು ಚಾಟಿ ಬೀಸಿತು.
ರಾಹುಲ್ ಎತ್ತಂಗಡಿ:
ಈ ನಡುವೆ ಸುಪ್ರೀಂ ಕೋರ್ಟ್ ತಪರಾಕಿ ಹಾಕುತ್ತಿದ್ದಂತೆಯೇ ರಾಜಾಜಿ ಹುಲಿ ರಕ್ಷಿತಾರಣ್ಯ ನಿದೇಶಕ ಹುದ್ದೆಯಿಂದ ರಾಹುಲ್‌ರನ್ನು ಮುಖ್ಯವಲ್ಲದ ಬೇರೆ ಹುದ್ದೆಗೆ ಎತ್ತಂಗಡಿ ಮಾಡಲಾಗಿದೆ.