ಪುಣೆ(ಆ.14): ಸ್ವದೇಶಿ ಕೋವಿಡ್ ಲಸಿಕೆಯಾದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಬೆರಕೆಗೆ ಭಾರತದಲ್ಲಿ ಅನುಮೋದನೆ ಸಿಕ್ಕಿರುವ ಬೆನ್ನಲ್ಲೇ, ಕೋವಿಡ್ ಲಸಿಕೆ ಬೆರಕೆಯು ಅತ್ಯಂತ ಕೆಟ್ಟಆಲೋಚನೆಯಾಗಿದೆ ಎಂದು ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಹಾಗೂ ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ಸೀರಂ ಸಂಸ್ಥೆಯ ಅಧ್ಯಕ್ಷ ಡಾ. ಸೈರಸ್ ಪೂನಾವಾಲ ಪ್ರತಿಪಾದಿಸಿದ್ದಾರೆ.
ಶುಕ್ರವಾರ ಲೋಕಮಾನ್ಯ ತಿಲಕ್ ಟ್ರಸ್ಟ್‌ನ ಲೋಕಮಾನ್ಯತಾ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ‘ಬೇರೆ ಬೇರೆ ಕಂಪನಿಯ ಕೊರೋನಾ ಲಸಿಕೆಗಳನ್ನು ಬೆರಕೆ ಮಾಡುವ ಅಗತ್ಯವಿಲ್ಲ. ಹೀಗೆ ಮಾಡುವುದರಿಂದ ಏನಾದರೂ ಅನಾಹುತಗಳು ಸಂಭವಿಸಿದರೆ, ಲಸಿಕೆ ಉತ್ಪಾದಕ ಕಂಪನಿಗಳ ಮಧ್ಯೆ ವಾಗ್ವಾದಗಳು ಏರ್ಪಡುತ್ತವೆ. ಸೀರಂ ಸಂಸ್ಥೆ ಅನ್ಯ ಲಸಿಕೆಯಿಂದಲೇ ಅನಾಹುತ ಏರ್ಪಟ್ಟಿದೆ ಎಂದು ದೂರಿದರೆ, ಅನ್ಯ ಲಸಿಕೆ ಕಂಪನಿಯು ನಮ್ಮನ್ನು ಹೊಣೆಗಾರರನ್ನಾಗಿಸಲು ಯತ್ನಿಸಲಿದೆ. ಹೀಗಾಗಿ ಬೇರೆ ಬೇರೆ ಲಸಿಕೆಗಳ ಮಿಶ್ರಣವು ತಪ್ಪು ಎಂದು ಹೇಳುತ್ತೇನೆ’ ಎಂದರು.
50 ವರ್ಷದ ಹಿಂದೆ ಉದ್ಯಮ ಸ್ಥಾಪನೆಗೆ ಅಧಿಕಾರಿಗಳ ಕೈ-ಕಾಲು ಹಿಡೀಬೇಕಿತ್ತು :
50 ವರ್ಷಗಳ ಹಿಂದೆ ಭಾರತದಲ್ಲಿ ಉದ್ಯಮಗಳ ಆರಂಭ ಭಾರೀ ದುಸ್ತರವಾಗಿತ್ತು. ಉದ್ಯಮಗಳ ಆರಂಭಕ್ಕೆ ಅನುಮತಿ ಪಡೆಯಲು ಉದ್ಯಮಪತಿಗಳು ಅಧಿಕಾರಿಗಳ ಕೈ-ಕಾಲು ಹಿಡಿಯಬೇಕಿತ್ತು. ಜೊತೆಗೆ ಅವರಿಂದ ಸಾಕಷ್ಟುಕಿರುಕುಳಗಳನ್ನು ಸಹಿಸಿಕೊಳ್ಳಬೇಕಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ಕೆಂಪು ಟೇಪು ಮತ್ತು ಲೈಸನ್ಸ್ ರಾಜ್ ಸಂಸ್ಕೃತಿ ಕಡಿಮೆಯಾಗಿದೆ ಎಂದು ಏಷ್ಯಾದ ಅತಿದೊಡ್ಡ ಸೀರಂ ಸಂಸ್ಥೆಯ ಅಧ್ಯಕ್ಷ ಡಾ. ಸೈರಸ್ ಪೂನಾವಾಲ ಹೇಳಿದ್ದಾರೆ.
ಭಾರತದಲ್ಲೂ ಲಸಿಕೆ ಬೆರಕೆ? ಕೋವಿಶೀಲ್ಡ್, ಸ್ಪುಟ್ನಿಕ್ ಲಸಿಕೆಗೆ ಒಪ್ಪಿಗೆ?
ಈ ಬಗ್ಗೆ ಶುಕ್ರವಾರ ಮಾತನಾಡಿ, ಈ ಹಿಂದೆ ಉದ್ಯಮ ಸ್ಥಾಪನೆಗೆ ಅವಕಾಶ ಪಡೆಯಲು ತಾವು ಸಹ ಅಧಿಕಾರಿಗಳು ಮತ್ತು ಔಷಧ ನಿಯಂತ್ರಣ ಅಧಿಕಾರಿಗಳ ಕಾಲು ಹಿಡಿಯುವ ಅನಿವಾರ್ಯತೆ ಎದುರಾಗಿತ್ತು. ಅಲ್ಲದೆ ಆಗ ಉದ್ದಿಮೆಗಳ ಆರಂಭಕ್ಕೆ ಅಗತ್ಯವಿರುವ ವಿದ್ಯುತ್, ನೀರು ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯ ಪಡೆದುಕೊಳ್ಳಲು ಅಧಿಕಾರಿಗಳ ಕಚೇರಿಗೆ ಅಲೆಯಬೇಕಿತ್ತು. ಆದರೆ ಈ ಪರಿಸ್ಥಿತಿ ಪೂರ್ತಿಯಾಗಿ ಬದಲಾವಣೆಯಾಗಿದೆ. ಇದೇ ಕಾರಣಕ್ಕಾಗಿ ಸೀರಂ ಸಂಸ್ಥೆ ಕೋವಿಶೀಲ್ಡ್ ಲಸಿಕೆ ಉತ್ಪಾದನೆಯನ್ನು ತ್ವರಿತವಾಗಿ ಆರಂಭಿಸಲು ಸಹಕಾರಿಯಾಯಿತು. ಜೊತೆಗೆ ಈ ಹಿಂದಿನಂತೆ ಈಗ ಮಸ್ಕಾ ಪಾಲಿಶ್ ಮಾಡುವ ಅಗತ್ಯವೂ ಇಲ್ಲ ಎಂದಿದ್ದಾರೆ.