
ಹೈದರಾಬಾದ್: ಸೌದಿ ಅರೇಬಿಯಾದಲ್ಲಿ ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಭಾರತೀಯ ಉಮ್ರಾ ಯಾತ್ರಿಕರ ಬಸ್, ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಹೈದರಾಬಾದ್‌ನ ಒಂದೇ ಕುಟುಂಬದ ಹಾಗೂ ಮೂರು ತಲೆಮಾರಿನ ಒಟ್ಟು 18 ಜನ ಸಾವನ್ನಪ್ಪಿದ್ದಾರೆ. ಇಂದು ನಸುಕಿನ ಜಾವ 1.30ರ ಸುಮಾರಿಗೆ ಮೆಕ್ಕಾದಿಂದ ಮದೀನಾಗೆ ಬರುತ್ತಿದ್ದ ಭಾರತೀಯ ಉಮ್ರಾ ಯಾತ್ರಿಕರಿದ್ದ ಬಸ್‌ಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾಗಿತ್ತು ಈ ದುರಂತದಲ್ಲಿ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ಒಟ್ಟು 42 ಜನ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ್ದವರಲ್ಲಿ ಬಹುತೇಕರು ಹೈದರಾಬಾದ್ ಮೂಲದವರಾಗಿದ್ದಾರೆ. ಈ ಬಸ್‌ನಲ್ಲಿ 9 ಮಕ್ಕಳು ಸೇರಿದಂತೆ ಒಂದೇ ಕುಟುಂಬದ 18 ಜನ ಇದ್ದರು. ಈ ಕುಟುಂಬ ಶನಿವಾರ ವಾಪಸ್ ಬರಬೇಕಿತ್ತು. ಅಷ್ಟರಲ್ಲಿ ಈ ದುರಂತ ಸಂಭವಿಸಿದೆ.
ಶನಿವಾರ ಈ ಕಟುಂಬ ಹಿಂತಿರುಗಬೇಕಿತ್ತು:
ನನ್ನ ಅತ್ತಿಗೆ ಅವರ ಭಾವ, ಅವರ ಮಗ, ಮೂವರು ಹೆಣ್ಣುಮಕ್ಕಳು ಮತ್ತು ಅವರ ಮಕ್ಕಳು (ಉಮ್ರಾಕ್ಕಾಗಿ) ಸೌದಿ ಅರೇಬಿಯಾಗೆ ಹೋಗಿದ್ದರು. ಅವರು ಎಂಟು ದಿನಗಳ ಹಿಂದೆ ಇಲ್ಲಿಂದ ಹೊರಟು ಹೋಗಿದ್ದರು. ಉಮ್ರಾ ಮುಗಿದು ಮೆಕ್ಕಾದಿಂದ ಮದೀನಾಗೆ ಹಿಂತಿರುಗುತ್ತಿದ್ದರು. ಈ ಸಮಯದಲ್ಲಿ ಬೆಳಗಿನ ಜಾವ 1.30 ರ ಸುಮಾರಿಗೆ ಅಪಘಾತ ಸಂಭವಿಸಿತು ಮತ್ತು ಬಸ್ ಬೆಂಕಿಯಲ್ಲಿ ಸುಟ್ಟುಹೋಯಿತು. ಅವರು ಶನಿವಾರ ಹಿಂತಿರುಗಬೇಕಿತ್ತು ಎಂದು ಮದೀನಾದಲ್ಲಿ ಬಸ್ ಬೆಂಕಿ ದುರಂತದಲ್ಲಿ ಮೃತರಾದವರ ಸಂಬಂಧಿಕರಾದ ಮೊಹಮ್ಮದ್ ಆಸಿಫ್ ಹೇಳಿದ್ದಾರೆ.
ದುರಂತ ಸಂಭವಿಸುವುದಕ್ಕೂ ಮೊದಲು ಅವರ ಕುಟುಂಬದವರು ಸಂಬಂಧಿಕರ ಮಧ್ಯೆ ನಿರಂತರ ಸಂಪರ್ಕದಲ್ಲಿದ್ದರು. ಒಂದೇ ಕುಟುಂಬದ 18 ಜನ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಅವರಲ್ಲಿ 9 ಜನ ಮಕ್ಕಳು 9 ಜನ ದೊಡ್ಡವರು ಇದು ನಮ್ಮ ಪಾಲಿಗೆ ಅತೀ ಘೋರ ದುರಂತ ಎಂದು ಅಸೀಫ್ ಹೇಳಿದ್ದಾರೆ. ಮೃತರಾದವರಲ್ಲಿ ಕೆಲವರನ್ನು ಅಸೀಫ್ ಗುರುತಿಸಿದ್ದು, 70 ವರ್ಷದ ನಾಸಿರುದ್ದೀನ್, ಅವರ ಪತ್ನಿ 62 ವರ್ಷದ ಅಖ್ತರ್ ಬೇಗಂ 42 ವರ್ಷದ ಮಗ ಸಲಾವುದ್ದೀನ್, ಹೆಣ್ಣುಮಕ್ಕಳಾದ 44 ವರ್ಷದ ಅಮಿನಾ 38 ವರ್ಷದ ರಿಜ್ವಾನಾ ಮತ್ತು 40 ವರ್ಷದ ಶಬಾನಾ ಮತ್ತು ಅವರ ಪುಟ್ಟ ಮಕ್ಕಳು ಎಂದು ಗುರುತಿಸಿದ್ದಾರೆ.
ಇಡೀ ಕುಟುಂಬವೇ ಸರ್ವನಾಶ:
ಹೈದರಾಬಾದ್‌ನ ರಾಮನಗರದಲ್ಲಿರುವ ನಾಸೀರುದ್ದೀನ್ ಅವರ ಕುಟುಂಬದ ಮನೆಗೆ ಯಾರೋ ನೆರೆಹೊರೆಯವರು ಕೀಲಿಗಳನ್ನು ತಂದು ಬಾಗಿಲು ತೆಗೆದಿದ್ದು, ಅವರ ಸಹೋದರಿ ಇಲ್ಲಿಯವರೆಗೆ ತನ್ನ ಸಹೋದರನ ಮನೆಯಾಗಿದ್ದ ಮನೆಗೆ ಪ್ರವೇಶಿಸಿದಾಗ ಅಳು ತಡೆದುಕೊಳ್ಳಲಾಗದೇ ಬಿಕ್ಕಳಿಸಿದ್ದು, ನನ್ನ ಸಹೋದರನ ಇಡೀ ಕುಟುಂಬವೇ ನಾಶವಾಗಿದೆ ಎಂದು ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಸೌದಿ ಅರೇಬಿಯಾದಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ಬಹುತೇಕರಲ್ಲಿ ಎಲ್ಲರೂ ಹೈದರಾಬಾದ್ ಮೂಲದವರಾಗಿದೆ. ಮದೀನಾದಿಂದ 30 ಕಿಲೋ ಮೀಟರ್ ದೂರದಲ್ಲಿದ್ದಾಗ ಅವರು ಪ್ರಯಾಣಿಸುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ನಿದ್ದೆಯಲ್ಲಿದ್ದ ವೇಳೆ ಈ ದುರಂತ ನಡೆದಿದೆ. ಹೀಗಾಗಿ ಯಾರಿಗೂ ಈ ಅನಾಹುತದಿಂದ ಪಾರಾಗಲು ಸಾಧ್ಯವಾಗಿಲ್ಲ.
ಘಟನೆಗೆ ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ತೀವ್ರ ಸಂತಾಪ, ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ರಿಯಾದ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಮತ್ತು ಜೆಡ್ಡಾದ ಕಾನ್ಸುಲೇಟ್ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿವೆ. ನಮ್ಮ ಅಧಿಕಾರಿಗಳು ಸೌದಿ ಅರೇಬಿಯಾ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಪ್ರಧಾನಿ ಎಕ್ಸ್‌ನಲ್ಲಿ ಟ್ವಿಟ್ ಮಾಡಿದ್ದಾರೆ.
ಘಟನೆಯ ನಂತರ ಭಾರತೀಯ ರಾಯಭಾರ ಕಚೇರಿಯು ನಿಯಂತ್ರಣ ಕೊಠಡಿ ಮತ್ತು ಸಹಾಯವಾಣಿಯನ್ನು ಸ್ಥಾಪಿಸಿದೆ. ಸೌದಿ ಅರೇಬಿಯಾದ ಮದೀನಾ ಬಳಿ ಭಾರತೀಯ ಉಮ್ರಾ ಯಾತ್ರಿಕರು ಭಾಗವಹಿಸಿದ್ದ ದುರಂತ ಬಸ್ ಅಪಘಾತದ ಹಿನ್ನೆಲೆಯಲ್ಲಿ, ಜೆಡ್ಡಾದ ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ 24x7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಸಹಾಯವಾಣಿಯ ಸಂಪರ್ಕ ವಿವರಗಳು ಈ ಕೆಳಗಿನಂತಿವೆ: ಟೋಲ್ ಫ್ರೀ ಸಂಖ್ಯೆ 8002440003ಎಂದು ದೂತಾವಾಸವು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ: ಬೆಂಗಳೂರು ಕನ್ಸರ್ಟ್‌ನಲ್ಲಿ ಖ್ಯಾತ ಗಾಯಕ ಅಕಾನ್ ಪ್ಯಾಂಟ್ ಎಳೆದಾಡಿ ಮುಜುಗರಕ್ಕೀಡು ಮಾಡಿದ ಅಭಿಮಾನಿಗಳು
ಇದನ್ನೂ ಓದಿ: ದೆಹಲಿ ಸ್ಫೋಟದಿಂದಾಗಿ ಕಾಶ್ಮೀರದ ಸಮಸ್ಯೆಗಳು ಕೆಂಪು ಕೋಟೆ ಮುಂದೆ ಪ್ರತಿಧ್ವನಿಸಿವೆ: ಮೆಹಾಬೂಬಾ ಮುಫ್ತಿ ಹೇಳಿಕೆಗೆ ತೀವ್ರ ಆಕ್ರೋಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ