ಕಾಡು ಪ್ರಾಣಿಗಳು ನಾಡಿನತ್ತ ದಾಂಗುಡಿ ಇಡುವುದು ಇತ್ತೀಚೆಗೆ ಸಾಮಾನ್ಯ ಎನಿಸಿದೆ. ಹಾಗೆಯೇ ಇತ್ತೀಚೆಗೆ ಕಾಡಿನಿಂದ ನಾಡಿನ ಮನೆಯೊಳಗೆ ಬಂದು ಬಂಧಿಯಾದ ಸಾರಂಗದ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಹಾರ ಅರಸಿ ನಾಡಿನತ್ತ ಬಂದ ಸಾರಂಗವೊಂದು ಮನೆಯೊಳಗೆ ಸೆರೆಯಾಗಿದೆ. ಇದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಮರಳಿ ಅದರ ಆವಾಸ ಸ್ಥಾನಕ್ಕೆ ಬಿಟ್ಟು ಬಂದಿದ್ದಾರೆ. ಮಧ್ಯಪ್ರದೇಶದ ಕಟ್ನಿಯಲ್ಲಿ ಈ ಘಟನೆ ನಡೆದಿದೆ. ಆದರೆ ಇದನ್ನು ರಕ್ಷಿಸುವ ಮೊದಲು ಜನರು ಸಾರಂಗ ನೋಡಲು ಮುಗಿಬಿದ್ದ ಘಟನೆಯೂ ನಡೆಯಿತು.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಗೌರವ್ ಶರ್ಮಾ (Gourav Sharma) ಅವರು ಈ ಸಾರಂಗದ ಫೋಟೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಸಾರಂಗ ಮನೆಯೊಂದರ ಒಳಗೆ ಬಂದು ಸಾಮಾನ್ಯ ಎಂಬಂತೆ ನಿಂತಿದೆ. ಆದರೆ ಈ ವಿಚಾರ ತಿಳಿದು ಸುತ್ತಮುತ್ತಲ ಗಲ್ಲಿಗಳ ಜನರೆಲ್ಲಾ ಸಾರಂಗವನ್ನು ನೋಡಲು ಮುಗಿಬಿದ್ದಿದ್ದಾರೆ. ಹೀಗಾಗಿ ಜನರನ್ನು ನೋಡಿ ಸಾರಂಗ ಗಲಿಬಿಲಿಗೊಂಡು ಓಡದಿರುವಂತೆ ಸೂಕ್ಷ್ಮವಾಗಿ ರಕ್ಷಣೆ ಮಾಡುವ ಸಲುವಾಗಿ ಅದನ್ನು ಬಲೆಯಿಂದ ಸುತ್ತಿ ಸೆರೆ ಹಿಡಿಯಲಾಯಿತು.
ಸಾರಂಗವೂ ಮನುಷ್ಯರೊಂದಿಗೆ ಬೆರೆಯುವ ತನ್ನ ವಿಧೇಯ ಗುಣಕ್ಕೆ ಪ್ರಸಿದ್ಧಿ ಪಡೆದಿದ್ದು, ಟ್ವಿಟ್ಟರ್ ಬಳಕೆದಾರರು ಈ ಸಾರಂಗ ಮಾನವ ನಾಗರಿಕತೆಗೆ ತುಂಬಾ ಹತ್ತಿರವಾಗುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅದು ಅದರ ಪೂರ್ವಜರು (Ancestors)ವಾಸಿಸುತ್ತಿದ್ದ ಪ್ರದೇಶವನ್ನು ಹುಡುಕಿಕೊಂಡು ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದು ಒಬ್ಬರು ಬಳಕೆದಾರರು ಬರೆದಿದ್ದಾರೆ.
ಆದರೆ ಸಾರಂಗವನ್ನು ಬಲೆಯಲ್ಲಿ ಬಂಧಿಸಿ ಮಲಗಿಸಿದ ವಿಡಿಯೋಗೆ ಅನೇಕರು ಬೇಸರ ವ್ಯಕ್ತಪಡಿಸಿದರು. ಸಾರಂಗದಂತಹ ಸಾಧು ಪ್ರಾಣಿಯ ರಕ್ಷಣೆಗೆ ಇಷ್ಟೊಂದು ನಾಟಕದ ಅಗತ್ಯವಿತ್ತೇ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕೇವಲ ಆಹಾರ ತೋರಿಸಿ ಅದನ್ನು ಟ್ರಕ್‌ನತ್ತ ಸೆಳೆಯಬಹುದಿತ್ತು. ಆದೆ ಇಲ್ಲಿ ಬಲೆಯಿಂದ ಅದನ್ನು ಬಂಧಿಗೊಳಿಸಿದ್ದಾರೆ. ನಾನು ಮದ್ರಾಸ್ ಐಐಟಿ (Madras IIT)ಕ್ಯಾಂಪಸ್‌ನಲ್ಲಿ ಸಾಕಷ್ಟು ಜಿಂಕೆಗಳನ್ನು ನೋಡಿದ್ದೆ ಅವು ಯಾವತ್ತೂ ಆಕ್ರಮಣಕಾರಿಯಾಗಿರಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅಮೆರಿಕಾದಲ್ಲಿ ಹಿಮಪಾತಕ್ಕೆ ತತ್ತರಿಸಿದ ಪ್ರಾಣಿಗಳು: ವಿಡಿಯೋ ವೈರಲ್
ಸಾರಂಗ ಹೀಗೆ ಮನುಷ್ಯರಿರುವ ಜಾಗಕ್ಕೆ ಬರುವುದು ಇದೇ ಮೊದಲಲ್ಲ. ಸಾರಂಗವೊಂದು ಕಾಡಿನ ಮಧ್ಯೆ ರಸ್ತೆ ಬದಿ ಇರುವ ಸಣ್ಣದಾದ ಅಂಗಡಿಯೊಂದಕ್ಕೆ ಬಂದು ಸುತ್ತಮುತ್ತ ಕುತೂಹಲದಿಂದ ವೀಕ್ಷಿಸುತ್ತಿರುವ ವಿಡಿಯೋವೊಂದು ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗಿತ್ತು. ಈ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ (Anandh Mahindra) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ವೈರಲ್ ವಿಡಿಯೋದಲ್ಲಿ ಸಧೃಡ ಕಾಯದ ಸಾರಂಗವೊಂದು ಕಾಡಿನ ನಡುವಿನ ರಸ್ತೆ ಸಮೀಪವಿರುವ ಅಂಗಡಿಯೊಂದರ ಬಳಿ ಬಂದು ಅಂಗಡಿಯವರು ಏನಾದರೂ ತಿನ್ನಲು ಕೊಡುವರೋ ಎಂದು ನೋಡುತ್ತಾ ನಿಂತಿದೆ. ಅಲ್ಲಿದ್ದ ವೃದ್ಧರೊಬ್ಬರು ಅದಕ್ಕೆ ಆಹಾರ ನೀಡಿದರೆ ಮತ್ತೆ ಕೆಲ ಯುವಕರು ಚಹಾದ ಕಪ್ ನೀಡಿದ್ದಾರೆ. ವೃದ್ಧ ನೀಡಿದ ಆಹಾರವನ್ನು ತಿಂದ ಸಾರಂಗ ಇವರು ನೀಡಿದ ಟೀ ಕಪ್‌ನ್ನು ಒಮ್ಮೆ ಮೂಸಿ ನೋಡಿ ಸುಮ್ಮನಾಗಿದೆ.
ರಸ್ತೆ ಬದಿಯ ಸ್ಟಾಲ್‌ಗೆ ಭೇಟಿ ನೀಡಿ ಬೃಹತ್ ಸಾರಂಗ: ಅಪರೂಪದ ದೃಶ್ಯ ಸೆರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ