ಮಾನವ ಕಳ್ಳಸಾಗಣೆ ಪ್ರಕರಣವೊಂದರನ್ನು ಬೇಧಿಸಿರುವ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ನೇವಿಯ ಲೆಫ್ಟಿನೆಂಟ್ ಕಮಾಂಡರ್‌ವೋರ್ವನನ್ನು ಬಂಧಿಸಿದ್ದಾರೆ.
ಮುಂಬೈ: ಮಾನವ ಕಳ್ಳಸಾಗಣೆ ಪ್ರಕರಣವೊಂದರನ್ನು ಬೇಧಿಸಿರುವ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ನೇವಿಯ ಲೆಫ್ಟಿನೆಂಟ್ ಕಮಾಂಡರ್‌ವೋರ್ವನನ್ನು ಬಂಧಿಸಿದ್ದಾರೆ. 28 ವರ್ಷದ ವಿಪಿನ್ ಕುಮಾರ್ ಡೊಗರ್ ಬಂಧಿತ ನೇವಿ ಅಧಿಕಾರಿ. ಹರ್ಯಾಣದ ಸೋನಿಪತ್ ಮೂಲದ ಈತ ಮುಂಬೈನ ಕೊಲಬಾದ ಪಶ್ಚಿಮ ನೇವಿ ಮುಖ್ಯಕಚೇರಿಯಲ್ಲಿ ನೇವಿಯ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ.
ದಾಖಲೆಗಳನ್ನು ಪೋರ್ಜರಿ ಮಾಡಿ ಟೂರಿಸ್ಟ್ ವೀಸಾದ ಮೇಲೆ ಭಾರತೀಯರನ್ನು ಸೌತ್ ಕೊರಿಯಾಗೆ ಕಳುಹಿಸಿದ ಆರೋಪ ಈತನ ಮೇಲಿದೆ. ಐಎನ್‌ಎಸ್ ಕೇರಳದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಅಧ್ಯಯನ ನಡೆಸಿದ ಈತ ಆರು ವರ್ಷಗಳ ಹಿಂದಷ್ಟೇ ನೌಕಾಸೇನೆಯನ್ನು ಸೇರಿದ್ದ. ಈತನ ಸ್ನೇಹಿತರೊಬ್ಬರು ಭಾರತೀಯರು ಕೊರಿಯಾಗೆ ಹೋಗುವುದಕ್ಕೆ ಭಾರಿ ಬೇಡಿಕೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದು, ಅದರಂತೆ ಈ ನೌಕಾ ಅಧಿಕಾರಿ ಡೋಗರ್ ಹಾಗೂ ಆತನ ಸ್ನೇಹಿತ ಇಬ್ಬರೂ ಸೇರಿ ಇದನ್ನೇ ಎರಡು ವರ್ಷಗಳ ಹಿಂದೆ ವ್ಯವಹಾರವಾಗಿಸಿಕೊಂಡಿದ್ದಾರೆ.
ಹೆಣ್ಣೆಂಬ ಮೋಹಪಾಶ: ದೇಶದ್ರೋಹಿ ಪಟ್ಟದ ಜೊತೆ ಜೈಲುವಾಸ: ಯುವ ವಿಜ್ಞಾನಿಯ ದುರಂತ ಕತೆ
ಮೂಲಗಳ ಪ್ರಕಾರ, ಇವರ ಗುಂಪು ವಿದೇಶದಲ್ಲಿ ಕೆಲಸ ಮಾಡಲು ಹಾತೊರೆಯುತ್ತಿರುವವರನ್ನು ಪತ್ತೆ ಮಾಡುತ್ತಿತ್ತು. ಉತ್ತರ ಭಾರತೀಯರೇ ಇವರ ಟಾರ್ಗೆಟ್ ಆಗಿದ್ದರು. ಐದಾರು ಜನರ ಗುಂಪಿನೊಂದಿಗೆ ಈ ಮಾನವ ಕಳ್ಳಸಾಗಣೆ ತಂಡ ಕೆಲಸ ಮಾಡುತ್ತಿತ್ತು. ಒಬ್ಬ ವಿದೇಶಕ್ಕೆ ಹೋಗಲು ಬಯಸುವ ವ್ಯಕ್ತಿಯನ್ನು ಪತ್ತೆ ಮಾಡಿದರೆ, ಇನ್ನೊಬ್ಬ ಬ್ಯಾಂಕ್ ಸ್ಟೇಟ್‌ಮೆಂಟ್, ವೈದ್ಯಕೀಯ ಪ್ರಮಾಣಪತ್ರ ಮುಂತಾದವುಗಳ ನಕಲಿ ದಾಖಲೆ ಸೃಷ್ಟಿ ಮಾಡುತ್ತಿತ್ತು. ಬಳಿಕ ಈ ಗುಂಪು ಕೊರಿಯಾದ ರಾಯಭಾರ ಕಚೇರಿಯಿಂದ ಇವರಿಗೆ ವೀಸಾಕ್ಕಾಗಿ ಅನುಮೋದಿಸುವ ನಿರ್ಣಾಯಕ ಕಾರ್ಯವನ್ನು ವಿಪಿನ್ ಡೋಗರ್ ಅವರಿಗೆ ವಹಿಸಿತ್ತು.
ಡೊಗರ್ ತಮ್ಮ ನೌಕಾ ಸೇನೆಯ ಸಮವಸ್ತ್ರ ಧರಿಸಿ ಮುಂಬೈನ ವರ್ಲಿಯಲ್ಲಿರುವ ಕೊರಿಯನ್ ರಾಯಭಾರ ಕಚೇರಿಗೆ ಆಗಾಗ ಭೇಟಿ ನೀಡಿ ತಮ್ಮ ಕ್ಲೈಂಟ್‌ಗಳ ವೀಸಾಗೆ ಒಪ್ಪಿಗೆ ಸಿಕ್ಕಿದೆಯೇ ಎಂಬುದನ್ನು ಚೆಕ್ ಮಾಡಿಸುತ್ತಿದ್ದ. ವೀಸಾ ಬಂದ ಬಳಿಕ ಇವರು ನಕಲಿ ಡಾಕ್ಯುಮೆಂಟ್ ಮೂಲಕ ಭಾರತೀಯರನ್ನು ಕೊರಿಯಾಗೆ ಕಳುಹಿಸುತ್ತಿದ್ದರು. ಅಲ್ಲದೇ ಅಲ್ಲಿ ಹೋದ ಮೇಲೆ ದಕ್ಷಿಣ ಕೊರಿಯಾದ ಪೌರತ್ವಕ್ಕಾಗಿ ತಮ್ಮ ದಾಖಲೆಗಳ ಇಡೀ ಸೆಟನ್ನು ಸಂಪೂರ್ಣವಾಗಿ ಸುಟ್ಟು ಬಿಡುವಂತೆ ಇಲ್ಲಿಂದ ಪ್ರವಾಸಿಗ ವೀಸಾದಲ್ಲಿ ತೆರಳುವರಿಗೆ ಸೂಚಿಸುತ್ತಿದ್ದರು. ಈ ಇಡೀ ಪ್ರಕ್ರಿಯೆಗೆ ಗ್ರಾಹಕರಿಂದ 10 ಲಕ್ಷ ರೂಪಾಯಿಯನ್ನು ವಸೂಲಿ ಮಾಡಲಾಗುತ್ತಿತ್ತು.
ಪಾಕಿಸ್ತಾನ ಪರ ಬೇಹುಗಾರಿಕೆ: DRDO ಯುವ ವಿಜ್ಞಾನಿ ಅವರ್ಡಿ, ಬ್ರಹ್ಮೋಸ್ ಮಾಜಿ ಎಂಜಿನಿಯರ್‌ಗೆ ಜೈಲು
ಅದೇ ರೀತಿ ಈ ಬಾರಿಯೂ ವಿಪಿನ್ ಡೊಗರ್ ತನ್ನ ಜಮ್ಮು ಕಾಶ್ಮೀರ ಮೂಲದ ಗ್ರಾಹಕನ ವೀಸಾ ಸ್ಥಿತಿ ಏನಾಗಿದೆ ಎಂದು ತಿಳಿಯುವುದಕ್ಕಾಗಿ ವಾರ್ಲಿಯಲ್ಲಿರುವ ಕೊರಿಯನ್ ರಾಯಭಾರ ಕಚೇರಿಗೆ ತೆರಳಿದ್ದರು. ಆದರೆ ದಾಖಲೆ ಸರಿ ಇರದ ಕಾರಣಕ್ಕೆ ಆ ಗ್ರಾಹಕನಿಗೆ ವೀಸಾ ನಿರಾಕರಿಸಲಾಗಿತ್ತು. ಆದರೆ ಮಾಡುತ್ತಿರೋದೇ ಮಣ್ಣು ತಿನ್ನೊ ಕೆಲಸ ಎಂದು ಸುಮ್ಮನಿದಿದ್ದರೆ ಈ ವಿಚಾರ ಬೆಳಕಿಗೆ ಬರುತ್ತಿರಲಿಲ್ಲವೇನೋ, ಆದರೆ ಆತನ ಗ್ರಹಚಾರ ಕೆಟ್ಟಿತ್ತೊ ಏನೋ, ವಿಪಿನ್ ಡೊಗರ್ ಸಮವಸ್ತ್ರದಲ್ಲಿಯೇ ಕೊರಿಯಾ ರಾಯಭಾರ ಅಧಿಕಾರಿ ಜೊತೆ ಕಿತ್ತಾಟಕ್ಕಿಳಿದಿದ್ದ. ಇದು ಅನುಮಾನಕ್ಕೆ ಕಾರಣವಾಗಿತ್ತು.
ಆರೋಪಿ ಡೊಗರ್ ಕೊರಿಯಾದ ರಾಯಭಾರ ಕಚೇರಿಯಿಂದ ವೀಸಾ ಅನುಮೋದನೆಗಳನ್ನು ಪಡೆಯಲು ತನ್ನ ನೌಕಾ ಹುದ್ದೆಯನ್ನು ಬಳಸಿಕೊಂಡಿದ್ದಾನೆ ಎಂದು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ದೂರಿದ್ದಾರೆ. ಸೋನಿಪತ್ ಹಾಗೂ ಹರ್ಯಾಣ ಮೂಲದ ಸ್ನೇಹಿತರನ್ನು ಸೇರಿಸಿಕೊಂಡು ಎರಡು ವರ್ಷದ ಹಿಂದೆ ಈತ ಈ ದಂಧೆಗೆ ಇಳಿದಿದ್ದ, ಇದುವರೆಗೆ ಅವರು ಒಟ್ಟು 8 ರಿಂದ ಹತ್ತು ಜನರನ್ನು ಹೀಗೆ ದಕ್ಷಿಣ ಕೊರಿಯಾಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ಕೊರಿಯಾ ಸರ್ಕಾರ ಅಗತ್ಯವಿರುವವರಿಗೆ ಸುಲಭವಾಗಿ ಅಲ್ಲಿನ ಪೌರತ್ವವನ್ನು ನೀಡುತ್ತಿರುವುದು ಕೂಡ ಜನ ಹೀಗೆ ದಕ್ಷಿಣ ಕೊರಿಯಾಗೆ ಹೋಗುವುದಕ್ಕೆ ಹಾತೊರೆಯಲು ಕಾರಣವಾಗಿದೆ ಎಂದು ಕೆಲ ಮೂಲಗಳು ವರದಿ ಮಾಡಿವೆ.
ಇನ್ನು ಈ ನೇವಿಯ ಈ ಕಿರಿಯ ಅಧಿಕಾರಿಯ ತಂದೆ ನಿವೃತ್ತ ನೇವಿ ಅಧಿಕಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419, 420, 465, 467, 471, 120B ಹಾಗೂ ಸೆಕ್ಷನ್ 12ರ ಪಾಸ್‌ಪೋರ್ಟ್ ಕಾಯ್ದೆಯಡಿಯೂ ಈ ನೇವಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಜುಲೈ 5ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಒಟ್ಟಿನಲ್ಲಿ ಈತನ ದುರಾಸೆಯೇ ಈಗ ಈತನನ್ನು ಕಂಬಿ ಹಿಂದೆ ಕೂರುವಂತೆ ಮಾಡಿದೆ. ತಿಂಗಳಿಗೆ ಲಕ್ಷದಲ್ಲಿ ಸಂಬಳ, ಅಪ್ಪನ್ನೂ ನೇವಿ ನಿವೃತ್ತ ಅಧಿಕಾರಿ, ಗೌರವಾನ್ವಿತ ಕುಟುಂಬದ ಜೊತೆ ಗೌರವದ ಹುದ್ದೆ ಇದ್ದರೂ, ಬಿಡದ ದುರಾಸೆಯಿಂದಾಗಿ ದೇಶಕ್ಕೆ ಕೊಡುಗೆ ನೀಡಬೇಕಾದ ಯುವ ನೇವಿ ಅಧಿಕಾರಿಯೋರ್ವ ಕಂಬಿ ಹಿಂದೆ ಕೂರುವಂತಾಗಿದ್ದು ಮಾತ್ರ ವಿಪರ್ಯಾಸ.