
ಚೆನ್ನೈ (ನ.03) ಟೆಕ್ ಕಂಪನಿ ಜೋಹೋ (Zoho) ಸಂಸ್ಥಾಪಕ, ಉದ್ಯಮಿ ಶ್ರೀಧರ್ ವೆಂಬು ಸರಿಸುಮಾರು ಒಟ್ಟು ಆಸ್ತಿ 50 ಸಾವಿರ ಕೋಟಿ ರೂಪಾಯಿ. ಟೆಕ್ ಜಗತ್ತಿನಲ್ಲಿ ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಪ್ರಮುಖ ಸರ್ವೀಸ್ ನೀಡುತ್ತಿರುವ ಜೋಹೋ ಸಿಇಒ ಶ್ರೀಧರ್ ವೆಂಬು ಅತ್ಯಂತ ಸರಳವಾಗಿ ಆರ್‌ಎಸ್ಎಸ್ ಗಣವೇಷ ತೊಟ್ಟು ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ. RSS ಶತಾಬ್ದಿ ಆಚರಣೆಯ ಭಾಗವಾಗಿ ತಮಿಳುನಾಡಿನ ತೆಂಕಾಶಿ ಜಿಲ್ಲೆಯ ಶಂಕರನ್‌ಕೋವಿಲ್‌ನಲ್ಲಿ ಆಯೋಜಿಸಲಾಗಿದ್ದ 'ಪಥಸಂಚಲನದಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಯುವ ಸಮೂಹಕ್ಕೆ ಮಹತ್ವದ ಸಂದೇಶ ನೀಡಿದ್ದಾರೆ.
ಪಥಸಂಚಲನದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಧರ್ ವೆಂಬು, ಆರ್‌ಎಸ್‌ಎಸ್ ಸಂಘಟನೆಯು ಜಾತಿ ಅಥವಾ ಆಸ್ತಿ-ಅಂತಸ್ತಿನ ಆಧಾರದ ಮೇಲೆ ಜನರನ್ನು ಎಂದಿಗೂ ತಾರತಮ್ಯ ಮಾಡುವುದಿಲ್ಲ. ಸಂಘದ 'ಸೇವಾ ಭಾರತಿ' ಮೂಲಕ ಡಿಸೆಂಬರ್ 2023 ರ ತೂತುಕುಡಿ ಮತ್ತು ತಿರುನೆಲ್ವೇಲಿ ಪ್ರವಾಹದ ಸಮಯದಲ್ಲಿ ಹಿಂದೂಯೇತರರು ಹೆಚ್ಚಾಗಿರುವ ಪ್ರದೇಶಗಳಲ್ಲೂ ಸ್ವಯಂಸೇವಕರು ನಿರಂತರವಾಗಿ ಪರಿಹಾರ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಕರ್ನಾಟಕದಲ್ಲಿ ಮಾತ್ರವಲ್ಲ ತಮಿಳುನಾಡು ಸೇರಿದಂತೆ ದೇಶದ ಕೆಲ ಭಾಗದಲ್ಲಿ ಆರ್‌ಎಸ್ಎಸ್ ಪಥಸಂಚಲನ ಕೋರ್ಟ್ ಮೆಟ್ಟಿಲೇರಿತ್ತು. ತಮಿಳುನಾಡಿನ ಮದ್ರಾಸ್ ಹೈಕೋರ್ಟ್ ಅನುಮತಿಯೊಂದಿಗೆ ನಡೆದ ಈ ಪಥಸಂಚಲನದಲ್ಲಿ ಶ್ರೀಧರ್ ವೆಂಬು ಪಾಲ್ಗೊಂಡಿದ್ದರು.
ಮಾತಿನ ವೇಳೆ ಶ್ರೀಧರ್ ವೆಂಬು ತಮ್ಮ ಬಾಲ್ಯದ ದಿನಗಳನ್ನು ನೆನೆದಿದ್ದಾರೆ. ನಾನು 10ನೇ ತರಗತಿಯಲ್ಲಿದ್ದಾಗ ಆರ್‌ಎಸ್‌ಎಸ್ ಧನಸಹಾಯದ ಶಾಲೆಯಲ್ಲೇ ಓದುತ್ತಿದ್ದೆ. ಶಿಕ್ಷಣ, ಇತರ ಚಟುವಟಿಕೆಗಳಿಂದ ಉತ್ತಮವಾಗಿತ್ತು. ನನ್ನ ತಮಿಳು ಶಿಕ್ಷಕರೊಬ್ಬರ ಪ್ರಭಾವದಿಂದಾಗಿ 14ನೇ ವಯಸ್ಸಿಗೆ ಮಾರ್ಕ್ಸ್‌ವಾದಿ ಮತ್ತು ನಾಸ್ತಿಕನಾಗಿದ್ದೆ. ನಾನು ಆರ್‌ಎಸ್ಎಸ್ ಬೆಂಬಲಿತ ಶಾಲೆಯಲ್ಲಿದ್ದರೂ ಯಾರೂ ಕೂಡ ಆರ್‌ಎಸ್ಎಸ್ ಸೇರುವ ಕುರಿತು, ಶಾಖೆ ಕುರಿತು ಒಂದಕ್ಷರವನ್ನು ಹೇಳಿರಲಿಲ್ಲ. ಆ ಶಾಲೆಯಲ್ಲಿದ್ದಾಗ ಆರ್‌ಎಸ್‌ಎಸ್ ಬಗ್ಗೆ ಯಾರೂ ಬ್ರೈನ್ ವಾಶ್ ಮಾಡಿರಲಿಲ್ಲ, ಬದಲಿಗೆ ಶಿಕ್ಷಕರ ಬೋಧನೆಯೇ ನನ್ನ ಯೋಚನೆಯನ್ನು ಬದಲಿಸಿತ್ತು ಎಂದಿದ್ದಾರೆ. ಪ್ರಸ್ತುತ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ದತ್ತಾತ್ರೇಯ ಹೊಸಬಾಳೆ ಅವರೊಂದಿಗೂ ಉತ್ತಮ ಒಡನಾಟ ಹೊಂದಿರುವ ಶ್ರೀಧರ್ ವೇಂಬು ಅವರ ಪಥಸಂಚಲನದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಆತ್ಮನಿರ್ಭರ ಭಾರತ, ದೇಶಪ್ರೇಮ ಮತ್ತು ಸ್ವದೇಶಿ ತತ್ವಗಳ ಕುರಿತು ಪ್ರಸ್ತಾಪಿಸಿದ ಶ್ರೀಧರ್ ವೇಂಬು, ರಾಷ್ಟ್ರ ನಿರ್ಮಾಣ ಮತ್ತು ದೇಶದ ಪ್ರಗತಿಯಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ದೇಶದ ಯುವಜನತೆಗೆ ಕರೆ ನೀಡಿದರು. ಆರ್‌ಎಸ್‌ಎಸ್‌ನ 'ಸ್ವದೇಶಿ ಜಾಗರಣ ಮಂಚ್'ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ವೇಂಬು, ಪ್ರಾದೇಶಿಕ ಹಂತದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಬೋಧಿಸುವ ಸಾಂಸ್ಕೃತಿಕ ತರಗತಿಗಳು ಮತ್ತು ಸಾಪ್ತಾಹಿಕ ಸಂಸ್ಕೃತಿ ಕಾರ್ಯಕ್ರಮಗಳಿಗೂ ಬೆಂಬಲ ನೀಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ