Corona 3rd Wave: ಕೋವಿಡ್‌ ಪ್ರಸರಣದ ಆರ್‌ ವ್ಯಾಲ್ಯೂ ಇಳಿಕೆ: 3ನೇ ಅಲೆ ತಗ್ಗಿದ ಸೂಚನೆಯೆ?

By Kannadaprabha News  |  First Published Jan 17, 2022, 4:45 AM IST

*   ದೇಶದಲ್ಲಿ ಜ.6ಕ್ಕೆ 4 ಇದ್ದ ಆರ್‌ ವ್ಯಾಲ್ಯೂ ಈಗ 2.2ಕ್ಕೆ ಇಳಿಕೆ
*   ಕೋವಿಡ್‌ 3ನೇ ಅಲೆ ಜನವರಿ ಮಧ್ಯಭಾಗದಲ್ಲಿ ತನ್ನ ತುತ್ತತುದಿಗೆ 
*   2.2ಕ್ಕೆ ಇಳಿದಿರುವುದು ಸೋಂಕು ಇಳಿಮುಖವಾಗುತ್ತಿರುವುದರ ಸೂಚಕ
 


ನವದೆಹಲಿ(ಜ.17):  ಕೋವಿಡ್‌ 3ನೇ ಅಲೆ(Covid 3rd Wave) ಸಾಕಷ್ಟು ಆತಂಕ ಹುಟ್ಟುಹಾಕಿರುವ ಹೊತ್ತಿನಲ್ಲೇ ದೇಶದಲ್ಲಿ(India) ಸೋಂಕು ಪ್ರಸರಣದ ಮಾಹಿತಿ ನೀಡುವ ‘ಆರ್‌ ವ್ಯಾಲ್ಯೂ’ (R Value) ಕಡಿಮೆಯಾಗಿರುವ ಸಿಹಿ ಸುದ್ದಿ ಹೊರಬಿದ್ದಿದೆ. ಇದು ದೇಶದಲ್ಲಿ ಕೋವಿಡ್‌ 3ನೇ ಅಲೆ ಜನವರಿ ಮಧ್ಯಭಾಗದಲ್ಲಿ ತನ್ನ ತುತ್ತತುದಿಗೆ ತಲುಪಿ, ಬಳಿಕ ಇಳಿಕೆಯ ಹಾದಿಯಲ್ಲಿ ಸಾಗಬಹುದು ಎಂಬ ಕೆಲ ವಿಜ್ಞಾನಿಗಳ ವಾದವನ್ನು ಪುಷ್ಟೀಕರಿಸುವಂತಿದೆ.

ಆರ್‌ ವ್ಯಾಲ್ಯೂ ಅಂದರೆ ಒಬ್ಬ ಸೋಂಕಿತ ವ್ಯಕ್ತಿ ಇತರೆ ಎಷ್ಟು ಜನರಿಗೆ ಸೋಂಕು ತಗುಲಿಸುತ್ತಿದ್ದಾನೆ ಎಂಬುದನ್ನು ಅಳೆಯುವ ಸೂಚ್ಯಂಕ. ಐಐಟಿ ಮದ್ರಾಸ್‌ನ ತಜ್ಞರ ತಂಡದ ವಿಶ್ಲೇಷಣೆ ಅನ್ವಯ, ದೇಶದ ಹಲವು ಮಹಾನಗರಗಳಲ್ಲಿ ಜ.7-13ರ ಅವಧಿಯಲ್ಲಿ ಆರ್‌ ವ್ಯಾಲ್ಯೂ 2.2ಕ್ಕೆ ಇಳಿಕೆ ಕಂಡಿದೆ. ಆರ್‌ ವ್ಯಾಲ್ಯೂ 2021ರ ಡಿ.25-31ರ ಅವಧಿಯಲ್ಲಿ 2.9, ಜ.1-6ರ ಅವಧಿಯಲ್ಲಿ 4ರಷ್ಟಿತ್ತು. ನಂತರದ ವಾರದಲ್ಲಿ ಅದು 2.2ಕ್ಕೆ ಇಳಿದಿರುವುದು ಸೋಂಕು ಇಳಿಮುಖವಾಗುತ್ತಿರುವುದರ ಸೂಚಕ ಎನ್ನಲಾಗಿದೆ.

Latest Videos

ಕಚೇರಿಗೆ ಬರುವ ಉದ್ಯೋಗಿಗಳಿಗೆ ವಾರಕ್ಕೊಮ್ಮೆ ಕೋವಿಡ್ 19 ಟೆಸ್ಟ್‌ ಕಡ್ಡಾಯ: ಗೂಗಲ್

ವಿಶ್ಲೇಷಣೆ ಅನ್ವಯ ಜ.7-13ರ ಅವಧಿಯಲ್ಲಿ ಆರ್‌ ವ್ಯಾಲ್ಯೂ ಮುಂಬೈನಲ್ಲಿ 1.3, ದೆಹಲಿಯಲ್ಲಿ 2.5, ಚೆನ್ನೈನಲ್ಲಿ 2.4, ಕೋಲ್ಕತಾದಲ್ಲಿ 1.6 ಇತ್ತು.

231 ದಿನ ಬಳಿಕ ರಾಜ್ಯದಲ್ಲಿ 34047 ಕೋವಿಡ್‌ ಕೇಸ್‌

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು (Covid Cases) ವೇಗದಲ್ಲಿ ಹರಡುತ್ತಿದ್ದು ಶುಕ್ರವಾರ 34,047 ಹೊಸ ಪ್ರಕರಣಗಳು ದಾಖಲಾಗಿದೆ. ಇದು ಕಳೆದ 231 ದಿನಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಲಕ್ಷದ ಸಮೀಪಕ್ಕೆ ಬಂದಿದೆ. ರಾಜ್ಯದ ಪಾಸಿಟಿವಿಟಿ ದರ ಶೇ.19.29ಕ್ಕೆ ಏರಿದೆ. 13 ಮಂದಿ ಮೃತರಾಗಿದ್ದಾರೆ. 5,902 ಮಂದಿ ಚೇತರಿಸಿಕೊಂಡಿದ್ದಾರೆ.

ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 2356 ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಈ ಪೈಕಿ 49 ಮಂದಿ ಐಸಿಯು ವೆಂಟಿಲೇಟರ್‌ ಹಾಸಿಗೆಯಲ್ಲಿದ್ದಾರೆ. 145 ಮಂದಿ ಐಸಿಯು, 829 ಮಂದಿ ಎಚ್‌ಡಿಯು, 1,333 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಚೇತರಿಸಿಕೊಳ್ಳುತ್ತಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಸ ಸೋಂಕಿತರು ಪತ್ತೆ ಆಗುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1.97 ಲಕ್ಷಕ್ಕೆ ಏರಿದೆ.

ಇದೇ ವೇಳೆ ಬೆಂಗಳೂರಿನಲ್ಲಿ ಶನಿವಾರ 22,284 ಮಂದಿಯಲ್ಲಿ ಸೋಂಕು ಪತ್ತೆ ಆಗಿದ್ದರೆ ಭಾನುವಾರ 21,071 ಮಂದಿಯಲ್ಲಿ ಸೋಂಕು ವರದಿಯಾಗಿದೆ. ಬೆಂಗಳೂರು ನಗರದಲ್ಲಿ ಹೊಸ ಪ್ರಕರಣಗಳಲ್ಲಿ ಕುಸಿತ ಕಂಡು ಬಂದಿದ್ದರೂ ರಾಜ್ಯದ ಅನ್ಯ ಭಾಗಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ವರದಿಯಾಗಿದೆ.

Corona ಸೋಂಕಿತರ ನಿಗಾಕ್ಕೆ 10 ಸಾವಿರ ವೈದ್ಯ ವಿದ್ಯಾರ್ಥಿಗಳು: ಡಾ.ಸುಧಾಕರ್‌

ಮೈಸೂರು 1,892, ತುಮಕೂರು 1,373, ಹಾಸನ 1,171 ಪ್ರಕರಣ ದಾಖಲಾಗಿದೆ. ಯಾದಗಿರಿ 33, ಕೊಪ್ಪಳ 80, ಹಾವೇರಿ 55 ಜಿಲ್ಲೆಯನ್ನು ಹೊರತು ಪಡಿಸಿ ಉಳಿದೆಲ್ಲ ಕಡೆ ಮೂರಂಕಿಯಲ್ಲಿ ಪ್ರಕರಣ ಪತ್ತೆಯಾಗಿದೆ. ಬೆಂಗಳೂರು ನಗರದಲ್ಲಿ 5, ದಕ್ಷಿಣ ಕನ್ನಡ 2, ಚಿಕ್ಕಬಳ್ಳಾಪುರ, ಹಾಸನ, ಕಲಬುರಗಿ, ಮಂಡ್ಯ, ಮೈಸೂರು ಮತ್ತು ರಾಮನಗರದಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 32.20 ಲಕ್ಷ ಮಂದಿಯಲ್ಲಿ ಸೋಂಕು ಕಂಡು ಬಂದಿದ್ದು 29.83 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 38,431 ಮಂದಿ ಮರಣವನ್ನಪ್ಪಿದ್ದಾರೆ.

ತುಮಕೂರಲ್ಲಿ ಮೊದಲ ಬಾರಿ 1000+: 

ಮೂರನೇ ಅಲೆಯಲ್ಲಿ ಬೆಂಗಳೂರು ಹೊರತುಪಡಿಸಿದರೆ ಸಾವಿರಕ್ಕಿಂತ ಹೆಚ್ಚು ಪ್ರಕರಣ ಮೊದಲ ಬಾರಿಗೆ ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿದೆ. ತುಮಕೂರು (1,326), ಹಾಸನ (968), ದಕ್ಷಿಣ ಕನ್ನಡ (792), ಮೈಸೂರು (729), ಮಂಡ್ಯ (718), ಧಾರವಾಡ (648), ಉಡುಪಿ (607) ಜಿಲ್ಲೆಯಲ್ಲಿ ಹೆಚ್ಚು ಪ್ರಕರಣ ವರದಿಯಾಗಿದೆ. ಯಾದಗಿರಿ 13, ಹಾವೇರಿ 17, ವಿಜಯಪುರ 76, ಚಾಮರಾಜನಗರ 93 ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ನೂರಕ್ಕಿಂತ ಹೆಚ್ಚು ಹೊಸ ಪ್ರಕರಣ ವರದಿಯಾಗಿದೆ.
 

click me!