ರಾಮ ಮಂದಿರ ಉದ್ಘಾಟನೆಗೆ ತಯಾರಿ ನಡೆಯುತ್ತಿದೆ. ಇದೀಗ ರಾಮ ಮಂದಿರ ಟ್ರಸ್ಟ್ ಗಣ್ಯರನ್ನು ಪ್ರಾಣಪ್ರತಿಷ್ಠೆಗೆ ಆಹ್ವಾನ ನೀಡುತ್ತಿದೆ. ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ. ಇದೀಗ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಲಾಗಿದೆ.
ನವದೆಹಲಿ(ಡಿ.21) ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದೆ. ಇತ್ತ ಪ್ರಾಣಪ್ರತಿಷ್ಠೆ ಹಾಗೂ ಉದ್ಘಾಟನೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಶ್ರೀ ರಾಮ ಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇತ್ತ ರಾಮ ಜನ್ಮಭೂಮಿ ಟ್ರಸ್ಟ್, ಪ್ರಾಣಪ್ರತಿಷ್ಠೆಗೆ ಗಣ್ಯರನ್ನು ಆಹ್ವಾನಿಸುತ್ತಿದೆ. ಖುದ್ದು ಭೇಟಿಯಾಗಿ ಆಮಂತ್ರಣ ನೀಡಲಾಗುತ್ತಿದೆ. ಈಗಾಗಲೇ ರಾಮ ಮಂದಿರ ಆಂದೋಲನದ ಪ್ರಮುಖ ಪಾತ್ರನಿರ್ವಹಿಸಿದ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ. ಇದರ ಬೆನ್ನಲ್ಲೇ ಟ್ರಸ್ಟ್ ಸದಸ್ಯರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರನ್ನು ಆಹ್ವಾನಿಸಿದ್ದಾರೆ.
ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ, ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯ ಹಾಗೂ ಅಖಿಲ್ ಭಾರತೀಯ ಸಂಪರ್ಕ್ ಪ್ರಮುಖ್ ರಾಮ ಲಾಲ್ , ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಕುಮಾರ್ ಸೇರಿದ ತಂಡ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರ ನಾಯಕರ ಭೇಟಿಯಾಗಿ ಆಹ್ವಾನಿಸಿದ್ದಾರೆ.
ಅಯೋಧ್ಯಾ ಶ್ರೀರಾಮನಿಗೆ ಬೆಳಗಲು ಭಕ್ತನಿಂದ ಸಿದ್ಧವಾಯ್ತು 108 ಅಡಿ ಉದ್ದದ ಅಗರಬತ್ತಿ
ರಾಮ ಮಂದಿರ ಆಹ್ವಾನ ನೀಡಲು ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಭೇಟಿಗೂ ಮನವಿ ಮಾಡಲಾಗಿತ್ತು. ಆದರೆ ಮನ್‌ಮೋಹನ್ ಸಿಂಗ್ ಆರೋಗ್ಯ ಸಮಸ್ಯೆಯಿಂದ ಭೇಟಿ ಮಾಡಿ ಆಹ್ವಾನ ನೀಡಲು ಸಾಧ್ಯವಾಗಿಲ್ಲ. ಇದೇ ವೇಳೆ ಮಾಜಿ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್, ಪ್ರತಿಭಾ ಪಾಟೀಲ್, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವರು ಭೇಟಿ ಮಾಡಿ ಆಹ್ವಾನ ನೀಡಲಾಗಿದೆ.
ಅಯೋಧ್ಯೆಯ ರಾಮಮಂದಿರದಲ್ಲಿ ಜ.22ರಂದು ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾಪನೆಗೆ ಸಮಯದ ಮುಹೂರ್ತ ನಿಗದಿಪಡಿಸಲಾಗಿದೆ. ಅಂದು ಮಧ್ಯಾಹ್ನ 12.20ಕ್ಕೆ ರಾಮನ ಪ್ರತಿಷ್ಠಾಪನೆ ಮಾಡಲು ನಿರ್ಣಯಿಸಲಾಗಿದೆ. 2024ರ ಜನವರಿ 22ರಂದು ಅಭಿಜಿತ್ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಈ ವೇಳೆ ಜಟಾಯು ಪ್ರತಿಮೆಯನ್ನೂ ಮೋದಿ ಅನಾವರಣ ಮಾಡಲಿದ್ದಾರೆ. ಪ್ರತಿಷ್ಠಾಪನೆಯ ಮಾರನೇ ದಿನ ಭಕ್ತರಿಗೆ ದೇವಾಲಯ ತೆರೆಯಲಾಗುತ್ತದೆ. ಈ ನಡುವೆ, ಪ್ರತಿಷ್ಠಾಪನೆ ವೇಳೆ ದೇಶಾದ್ಯಂತ ವಿವಿಧ ದೇಗುಲಗಳಲ್ಲಿ ಪೂಜೆ ಹಮ್ಮಿಕೊಳ್ಳಲಾಗುತ್ತದೆ ಎಂದು ರಾಮಮಂದಿರ ಟ್ರಸ್ಟ್ ಹೇಳಿದೆ.
ರಾಮರಥ ಸಾರಥಿಗಳಿಗೆ ಬರಬೇಡಿ ಅಂದದ್ದೇಕೆ? ದೇವೇಗೌಡರಿಗೆ ದೊರೆತ ಆಹ್ವಾನ.. ಬಿಜೆಪಿ ದಿಗ್ಗಜರಿಗೆ ಏಕಿಲ್ಲ..?