ಅಯೋಧ್ಯೆಯ ಸಂಭ್ರಮದಲ್ಲಿರುವಾಗಲೇ ಶಾಕ್: ದುರ್ಗಾ ಮಂದಿರದಲ್ಲಿದ್ದ ರಾಮನ ವಿಗ್ರಹ ಧ್ವಂಸ

By Anusha KbFirst Published Jan 24, 2024, 1:16 PM IST
Highlights

ಉತ್ತರಪ್ರದೇಶದ ಮುಜಾಫರ್‌ ನಗರ ಜಿಲ್ಲೆಯ ದುರ್ಗಾ ಮಂದಿರವೊಂದರಲ್ಲಿ ಶ್ರೀರಾಮ ವಿಗ್ರಹವನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದು, ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ

ಇಡೀ ದೇಶವೇ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಕೋಟ್ಯಾಂತರ ಭಕ್ತರು ರಾಮಲಲ್ಲಾನ ದರ್ಶನಕ್ಕೆ ಕಾತುರರಾಗಿದ್ದು, ಅಯೋಧ್ಯೆಯತ್ತ ದಾಂಗುಡಿ ಇಡುತ್ತಿದ್ದಾರೆ. ಇಂತಹ ಶುಭ ಗಳಿಗೆ ಕಳೆದು ಕೇವಲ 2 ದಿನಗಳು ಕಳೆದಿವೆ. ಹೀಗಿರುವಾಗ ಉತ್ತರಪ್ರದೇಶದ ಮುಜಾಫರ್‌ ನಗರ ಜಿಲ್ಲೆಯ ದುರ್ಗಾ ಮಂದಿರವೊಂದರಲ್ಲಿ ಶ್ರೀರಾಮ ವಿಗ್ರಹವನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದು, ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ. 

ಇಲ್ಲಿನ ದುರ್ಗಾ ಮಂದಿರದಲ್ಲಿ ರಾಮನ ವಿಗ್ರಹವೊಂದು ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಘಟನಾ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.  ಮಂಗಳವಾರ ಮುಂಜಾನೆ ಶಹಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗ್ರಾಮಸ್ಥರಿಗೆ ಈ ಶ್ರೀರಾಮನ  ವಿರೂಪಗೊಂಡ ಪ್ರತಿಮೆ ಕಾಣಿಸಿದ್ದು, ಇದನ್ನು ನೋಡಿದ ಕೂಡಲೇ ಜನ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಪ್ರತಿಭಟನೆಯಲ್ಲಿ ಸ್ಥಳೀಯ ರಾಜಕೀಯ ನಾಯಕರು ಕೂಡ ಭಾಗಿಯಾಗಿದ್ದರು. ಘಟನೆ ತಿಳಿದು ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಜನ ಪ್ರತಿಭಟನೆ ಕೈ ಬಿಟ್ಟಿದ್ದಾರೆ. 

Latest Videos

ಆಯೋಧ್ಯೆಗೆ ಹರಿದು ಬಂದ ಭಕ್ತ ಸಾಗರ, ನಿಯಂತ್ರಣಕ್ಕಾಗಿ ಬಸ್ ರದ್ದುಗೊಳಿಸಿದ ಯುಪಿ ಸರ್ಕಾರ!

ಘಟನೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ಅಭಿಷೇಕ್ ಸಿಂಗ್ ಮಾತನಾಡಿ, ಮುಜಾಫರ್‌ನಗರ ಜಿಲ್ಲೆಯ ದಿನಕರ್‌ಪುರ ಗ್ರಾಮದಲ್ಲಿ ಇರುವ ದುರ್ಗಾದೇವಿ ದೇವಸ್ಥಾನದಲ್ಲಿ ಇದ್ದ ಭಗವಾನ್ ಶ್ರೀರಾಮನ ಮೂರ್ತಿಯನ್ನು ಕೆಲ ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ.  ಮಂಗಳವಾರ ಮುಂಜಾನೆ ಈ ವಿರೂಪಗೊಂಡ ಪ್ರತಿಮೆ ಗ್ರಾಮಸ್ಥರಿಗೆ ಕಾಣ ಸಿಕ್ಕಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗ್ರಾಮದ ಮುಖ್ಯಸ್ಥರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.   

ಘಟನೆಯ ನಂತರ ಗ್ರಾಮದಲ್ಲಿ ಬಿಗುವಿನ ವಾತಾವರಣ ಕಂಡು ಬಂದ ಹಿನ್ನೆಲೆಯಲ್ಲಿ ಗಲಾಟೆ ನಡೆಯದಂತೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಸಂಬಂಧ ನಾವು ಜಾಗರೂಕರಾಗಿದ್ದು, ಗ್ರಾಮದ ಹಿರಿಯರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಅಯೋಧ್ಯೆ ಗರ್ಭಗುಡಿ ಪ್ರವೇಶಿಸಿ ರಾಮಲಲ್ಲಾನ ದರ್ಶನ ಪಡೆದು ತೆರಳಿದ ವಾನರ

click me!