ಇಂಡಿಯಾ ಮೈತ್ರಿ ಕೂಟದಲ್ಲಿ ಸೀಟು ಹಂಚಿಕೆ ಬಿರುಕು ಕೇಳಿಬರುತ್ತಲೇ ಇದೆ. ಆದರೆ ಇದೀಗ ಅಧಿಕೃತಗೊಂಡಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಯಾವುದೇ ಮೈತ್ರಿಯೊಂದಿಗೆ ಕಣಕ್ಕಿಳಿಯುತ್ತಿಲ್ಲ. ಏಕಾಂಗಿಯಾಗಿ ಹೋರಾಡಲಿದೆ ಎಂದು ಮಮತಾ ಬ್ಯಾನರ್ಜಿ ಅಧಿಕೃತ ಘೋಷಣೆ ಮಾಡಿದ್ದಾರೆ.
ಕೋಲ್ಕತಾ(ಜ.24) ಲೋಕಸಭೆಗೆ ಕೆಲ ತಿಂಗಳು ಬಾಕಿ ಇರುವಾಗ ಕಾಂಗ್ರೆಸ್ ಸೇರಿ 27ಕ್ಕೂ ಹೆಚ್ಚು ಪಕ್ಷಗಳು ಮಾಡಿಕೊಂಡಿರುವ ಮೈತ್ರಿಯಲ್ಲಿ ಬಿರುಕು ಅಧಿಕೃತಗೊಂಡಿದೆ. ಕಾಂಗ್ರೆಸ್ ಸೀಟು ಹಂಚಿಕೆ ಸಭೆಯಲ್ಲಿ ಅಸಮಾಧಾನಗಳು ವ್ಯಕ್ತವಾಗುತ್ತಿದ್ದರೂ ಸಾವರಿಸಿಕೊಂಡು ಬಿಜೆಪಿ ಸೋಲಿಸಲು ಪಣತೊಟ್ಟಿದ್ದ ಮೈತ್ರಿ ಒಕ್ಕೂಟ ಲೋಕಸಭೆಗೂ ಮುನ್ನ ಮುರಿದು ಬಿದ್ದಿದೆ. ಪಶ್ಚಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಯಾವುದೇ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಟಿಎಂಸಿ ಏಕಾಂಗಿ ಹೋರಾಟ ಮಾಡಲಿದೆ ಎಂದು ಟಿಎಂಸಿ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಯಾವುದೇ ಮೈತ್ರಿ ಇಲ್ಲ. ಇಂಡಿಯಾ ಮೈತ್ರಿ ಒಕ್ಕೂಟ ಇತರ ರಾಜ್ಯಗಳಲ್ಲಿ ಆಯಾ ಪಕ್ಷಗಳ ನೇತೃತ್ವದಲ್ಲಿ ನಡೆಯಲಿದೆ. ಆದರ ಪಶ್ಚಿಮ ಬಂಗಾಳದಲ್ಲಿ ಯಾವುದೇ ಮೈತ್ರಿ ಇಲ್ಲ. ಇಂಡಿಯಾ ಒಕ್ಕೂಟದ ಯಾವುದೇ ನಿಯಮಗಳು, ಮಾರ್ಗಸೂಚಿಗಳು ಪಶ್ಚಿಮ ಬಂಗಾಳಕ್ಕೆ ಅನ್ವಯವಾಗುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್‌ಗೆ ಮತ್ತೊಂದು ಶಾಕ್ ನೀಡಿದ್ದಾರೆ. ಇಂಡಿಯಾ ಮೈತ್ರಿ ಒಕ್ಕೂಟದ ಕುರಿತು ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ನಿರ್ಧರಿಸಲಾಗುತ್ತದೆ ಎಂದಿದ್ದಾರೆ. ಈ ಮೂಲಕ ಮೈತ್ರಿ ಪರವಾಗಿ ಫಲಿತಾಂಶ ಬಂದರೆ, ಅಥವಾ ಮೈತ್ರಿ ಒಕ್ಕೂಟಕ್ಕೆ ಸರ್ಕಾರ ರಚನೆಗೆ ತಮ್ಮ ಅವಶ್ಯಕತೆ ಇದ್ದರೆ, ಮೈತ್ರಿ ಭಾಗವಾಗುವ ಹೊಸ ಸೂತ್ರ ಘೋಷಿಸಿದ್ದಾರೆ.
ಮಮತಾ, ಕಾಂಗ್ರೆಸ್ ನಡುವೆ ವಾಕ್ಸಮರ : 240 ಸೀಟಿಗೆ ದೀದಿ ಬೇಡಿಕೆ , ಇಂಡಿಯಾ ಒಕ್ಕೂಟದಲ್ಲಿ ಒಡಕು?
ಮಮತಾ ಬ್ಯಾನರ್ಜಿ ಘೋಷಣೆ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪ್ರತಿ ಭಾರಿ ಏಕಾಂಗಿಯಾಗಿ ಹೋರಾಡಿ ಬಿಜೆಪಿಯನ್ನು ಸೋಲಿಸಿದೆ. ಈ ಬಾರಿಯೂ ಬಿಜೆಪಿಯನ್ನು ಸೋಲಿಸಿ ಅಭೂತಪೂರ್ವ ಗೆಲುವು ದಾಖಲಿಸುತ್ತೇವೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ಮೈತ್ರಿ ಅವಶ್ಯಕತೆ ಇಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇಂಡಿಯಾ ಮೈತ್ರಿಯಲ್ಲಿನ ಬಿರುಕು ಕಳೆದ ಕೆಲ ದಿನಗಳಿಂದ ತೀವ್ರ ಸ್ವರೂಪಕ್ಕೆ ತಿರುಗಿದೆ ಅನ್ನೋದು ಈಗ ಬಹಿರಂಗವಾಗಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಪಶ್ಚಿಮ ಬಂಗಾಳ ಮೂಲಕ ಹಾದು ಹೋಗುತ್ತಿದೆ. ಆದರೆ ಈ ಕುರಿತು ಕಾಂಗ್ರೆಸ್ ಅಥವಾ ರಾಹುಲ್ ಗಾಂದಿ ನಮಗೆ ಮಾಹಿತಿ ನೀಡಿಲ್ಲ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.
ಡಿಯಾ ಮೈತ್ರಿಕೂಟಕ್ಕೆ ಸೀಟಿನ ಬಿಕ್ಕಟ್ಟು: ಸೀಟು ಹಂಚಿಕೆಗೂ ಮುನ್ನವೇ ಶಿವಸೇನೆ, ಟಿಎಂಸಿ ಅಪಸ್ವರ; ಜೆಡಿಯುನಲ್ಲಿ ಒಡಕು
2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಸ್ಥಾನಗಳ ಪೈಕಿ ಟಿಎಂಸಿ 22 ಸ್ಥಾನ ಗೆದ್ದುಕೊಂಡರೆ ಬಿಜೆಪಿ 18 ಸ್ಥಾನ ಗೆದ್ದುಕೊಂಡಿತ್ತು. ಆದರೆ ಕಮ್ಯಾನಿಸ್ಟ್ ಪಾರ್ಟಿ ಹಾಗೂ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ.