ಹೊಸ ವರ್ಷದ ಮೊದಲ ದಿನ ರಾತ್ರಿ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಇಬ್ಬರು ಉಗ್ರರು ಅರಣ್ಯದ ಮೂಲಕ ಸಾಗಿ ಹಿಂದೂ ಸಮುದಾಯದ 3 ಮನೆಗಳಿಗೆ ನುಗ್ಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಜೌರಿಯಲ್ಲಿ (Rajouri) ಭಾನುವಾರ ಉಗ್ರರು (Terrorists) ಗುಂಡಿನ ದಾಳಿ (Firing) ನಡೆಸಿದ್ದು, ಈ ವೇಳೆ ನಾಲ್ವರು ನಾಗರಿಕರು (Civilians) ಮೃತಪಟ್ಟಿದ್ದರು. ಈ ದಾಳಿಯಲ್ಲಿ ಇಬ್ಬರು ಉಗ್ರರು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು, ನಿರ್ದಿಷ್ಟ ಸಮುದಾಯದ ಮನೆಗಳಿಗೆ ನುಗ್ಗಿದ ಬಂದೂಕುಧಾರಿಗಳು ಅವರನ್ನು ಗುರಿಯಾಗಿಸೇ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಅಂದರೆ ಹೊಸ ವರ್ಷದ ಮೊದಲ ದಿನ ರಾತ್ರಿ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಇಬ್ಬರು ಉಗ್ರರು ಅರಣ್ಯದ ಮೂಲಕ ಸಾಗಿ ಹಿಂದೂ ಸಮುದಾಯದ (Hindu Community) 3 ಮನೆಗಳಿಗೆ ನುಗ್ಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮನೆಯ ಒಳಗಿದ್ದವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಭಯೋತ್ಪಾದಕರು ಮೊದಲು ಅವರ ಆಧಾರ್ ಕಾರ್ಡ್ ಮೂಲಕ ಗುಂಡಿನ ದಾಳಿ ನಡೆಸುವವರ ಗುರುತನ್ನು ದೃಢಪಡಿಸಿಕೊಂಡಿದ್ದರು ಎಂದೂ ಮೂಲಗಳು ತಿಳಿಸಿವೆ. ಈ ದಾಳಿಯು ಕಳೆದ ಹಲವು ವರ್ಷಗಳಲ್ಲಿ ಶಾಂತಿಯುತವಾದ ಜಮ್ಮು ಪ್ರದೇಶದಲ್ಲಿ ನಡೆದ ಮೊದಲ ದಾಳಿಯಾಗಿದೆ ಮತ್ತು ಹೊಸ ವರ್ಷದ ಮೊದಲ ದಿನದಂದೇ ಈ ದಾಳಿ ನಡೆದಿದ್ದು, ಹಲವರನ್ನು ಬೆಚ್ಚಿ ಬೀಳಿಸಿದೆ. ಇನ್ನು, ಈ ದಾಳಿಯ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, "10 ನಿಮಿಷಗಳಲ್ಲಿ ಗುಂಡಿನ ದಾಳಿ ಕೊನೆಗೊಂಡಿದೆ. ಮೊದಲು ಅವರು ಅಪ್ಪರ್ ಡ್ಯಾಂಗ್ರಿಯಲ್ಲಿನ ಮನೆಯೊಂದರ ಮೇಲೆ ದಾಳಿ ಮಾಡಿದರು ಮತ್ತು ನಂತರ ಅವರು 25 ಮೀಟರ್ ದೂರಕ್ಕೆ ತೆರಳಿ ಅಲ್ಲಿದ್ದ ಹಲವರಿಗೆ ಗುಂಡು ಹಾರಿಸಿದರು. ನಂತರ, ಅವರು ಹಳ್ಳಿಯಿಂದ ಓಡಿಹೋಗುವಾಗ 25 ಮೀಟರ್ ದೂರದಲ್ಲಿರುವ ಎರಡನೇ ಮನೆಯ ಮೇಲೂ ಗುಂಡು ಹಾರಿಸಿದ್ದಾರೆ’’ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ದಾಳಿ: 3 ನಾಗರಿಕರು ಬಲಿ, 9 ಮಂದಿಗೆ ತೀವ್ರ ಗಾಯ
ಒಟ್ಟು 10 ಜನರಿಗೆ ಗುಂಡುಗಳು ತಗುಲಿದ್ದು ಮತ್ತು ಅವರಲ್ಲಿ ಮೂವರು ರಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದೂ ಘೋಷಿಸಲಾಯಿತು. ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ನಾಗರಿಕನನ್ನು ವಿಮಾನದಲ್ಲಿ ಜಮ್ಮುವಿಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಎಮದೂ ತಿಳಿದುಬಂದಿದೆ. ಇತರೆ ಇಬ್ಬರು ಗಾಯಗೊಂಡ ವ್ಯಕ್ತಿಗಳೊಂದಿಗೆ ಅವರನ್ನು ಸಾಗಿಸಲಾಗುತ್ತಿತ್ತು.
ಈ ಗುಂಡಿನ ದಾಳಿಯಲ್ಲಿ ಮೃತಪಟ್ಟವರನ್ನು ಸತೀಶ್ ಕುಮಾರ್ (45), ದೀಪಕ್ ಕುಮಾರ್ (23), ಪ್ರೀತಮ್ ಲಾಲ್ (57) ಮತ್ತು ಶಿಶು ಪಾಲ್ (32) ಎಂದು ಗುರುತಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೂ, ಪವನ್ ಕುಮಾರ್ (38), ರೋಹಿತ್ ಪಂಡಿತ್ (27), ಸರೋಜ್ ಬಾಲಾ (35), ರಿದಮ್ ಶರ್ಮಾ (17) ಮತ್ತು ಪವನ್ ಕುಮಾರ್ (32) ಎಂಬುವರು ಗಾಯಗೊಂಡಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಉರಿ ಮಾದರಿಯಲ್ಲಿ ಸೇನಾ ಶಿಬಿರದ ಮೇಲೆ ಭಯೋತ್ಪಾದಕರ ದಾಳಿ 3 ಸೈನಿಕರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ!
ಭಾನುವಾರ ರಾತ್ರಿ 7 ಗಂಟೆ ಸುಮಾರಿಗೆ ಗುಂಡಿನ ಸದ್ದು ಕೇಳಿಬಂದಿದ್ದು, ಸ್ವಲ್ಪ ಸಮಯದ ನಂತರ ಅವುಗಳ ತೀವ್ರತೆ ಹೆಚ್ಚಾಯಿತು ಎಂದೂ ಡ್ಯಾಂಗ್ರಿಯ ಸರಪಂಚ್ ದೀರಜ್ ಕುಮಾರ್ ಹೇಳಿದ್ದಾರೆ. ನಂತರ, ಭಯೋತ್ಪಾದಕರು ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂದು ನನಗೆ ಕರೆಗಳು ಬಂದವು ಎಂದೂ ಅವರು ಹೇಳಿದ್ದಾರೆ.
ಇನ್ನು, ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್, ರಜೌರಿ ಪಟ್ಟಣದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಅಪ್ಪರ್ ಡ್ಯಾಂಗ್ರಿ ಗ್ರಾಮದಲ್ಲಿ ದಾಳಿಯ ಹಿಂದೆ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳನ್ನು ಸೆರೆಹಿಡಿಯಲು ಸೇನೆ ಮತ್ತು ಸಿಆರ್‌ಪಿಎಫ್‌ನೊಂದಿಗೆ ಪೊಲೀಸರು ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ರಜೌರಿ ಪಂಚಾಯತ್ ಅಧ್ಯಕ್ಷನ ಮನೆ ಸನಿಹ ಬಾಂಬ್ ಸ್ಫೋಟ!
ಈ ದಾಳಿಯನ್ನು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಖಂಡಿಸಿದ್ದು, ಮೃತಪಟ್ಟ ಸಂತ್ರಸ್ಥರ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ ಹಾಗೂ ಉದ್ಯೋಗ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ, ಗಂಭೀರ ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ಹಾಗೂ ಉತ್ತಮ ಚಿಕಿತ್ಸೆ ನೀಡುವುದಾಗಿಯೂ ಹೇಳಿದ್ದಾರೆ.