ಚಂಡೀಗಢದ ಪಂಜಾಬ್‌ ಸಿಎಂ ನಿವಾಸದ ಬಳಿ ಬಾಂಬ್‌ ಪತ್ತೆ: ಭಾರತೀಯ ಸೇನೆಯಿಂದ ತನಿಖೆ

Published : Jan 02, 2023, 07:10 PM IST
ಚಂಡೀಗಢದ ಪಂಜಾಬ್‌ ಸಿಎಂ ನಿವಾಸದ ಬಳಿ ಬಾಂಬ್‌ ಪತ್ತೆ: ಭಾರತೀಯ ಸೇನೆಯಿಂದ ತನಿಖೆ

ಸಾರಾಂಶ

ಪಂಜಾಬ್ ಮುಖ್ಯಮಂತ್ರಿ ಬಳಸುತ್ತಿದ್ದ ಹೆಲಿಪ್ಯಾಡ್‌ ಹಾಗೂ ಅವರ ನಿವಾಸದ ಹತ್ತಿರದಲ್ಲಿರುವ ಸ್ಥಳದಲ್ಲಿ ಈ ಬಾಂಬ್‌ ಪತ್ತೆಯಾಗಿದ್ದು, ಈ ಹಿನ್ನೆಲೆ ಬಾಂಬ್ ನಿಷ್ಕ್ರಿಯ ದಳವನ್ನು ತಕ್ಷಣವೇ ರವಾನಿಸಲಾಗಿತ್ತು.

ಚಂಡೀಗಢದಲ್ಲಿರುವ (Chandigarh) ಪಂಜಾಬ್ ಮುಖ್ಯಮಂತ್ರಿ (Punjab Chief Minister) ಭಗವಂತ್ ಮಾನ್ (Bhagwant Mann) ಅವರ ನಿವಾಸದ ಬಳಿ ಸ್ಫೋಟಕ ಸಾಧನ (Explosive) ಸೋಮವಾರ ಪತ್ತೆಯಾಗಿದೆ. ಪಂಜಾಬ್ ಮುಖ್ಯಮಂತ್ರಿ ಬಳಸುತ್ತಿದ್ದ ಹೆಲಿಪ್ಯಾಡ್‌ (Helipad) ಹತ್ತಿರದಲ್ಲಿರುವ ಸ್ಥಳದಲ್ಲಿ ಈ ಬಾಂಬ್‌ (Bomb) ಪತ್ತೆಯಾಗಿದ್ದು, ಈ ಹಿನ್ನೆಲೆ ಬಾಂಬ್ ನಿಷ್ಕ್ರಿಯ ದಳವನ್ನು ತಕ್ಷಣವೇ ರವಾನಿಸಲಾಗಿತ್ತು. ಅಲ್ಲದೆ, ಪಂಜಾಬ್‌ ಸಿಎಂ ನಿವಾಸ ಸಹ ಬಾಂಬ್‌ ದೊರೆತ ಸ್ಥಳಕ್ಕೆ ಹತ್ತಿರವಿದ್ದ ಕಾರಣ, ಸ್ಥಳದಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆ ಸ್ಥಳೀಯ ಪೊಲೀಸರು ಮಾತ್ರವಲ್ಲದೆ ಭಾರತೀಯ ಸೇನೆಯ ವೆಸ್ಟರ್ನ್ ಕಮಾಂಡ್ (Indian Army Western Command) ಕೂಡ ಈ ಬಗ್ಗೆ ತನಿಖೆ ನಡೆಸಲಿದೆ.

ಜನವರಿ 2, 2023, ಸೋಮವಾರ ಸಂಜೆ 4 ರಿಂದ 4:30 ರ ಸುಮಾರಿಗೆ, ಕೊಳವೆಬಾವಿ ನಿರ್ವಾಹಕರೊಬ್ಬರು ಹೆಲಿಪ್ಯಾಡ್ ಮತ್ತು ಪಂಜಾಬ್ ಮುಖ್ಯಮಂತ್ರಿಯವರ ನಿವಾಸದ ಬಳಿಯ ಮಾವಿನ ತೋಟದಲ್ಲಿ ಜೀವಂತ ಬಾಂಬ್ ಅನ್ನು ಗಮನಿಸಿದರು ಎಂದು ತಿಳಿದುಬಂದಿದೆ. ಈ ಸ್ಥಳದಿಂದ ಪಂಜಾಬ್‌ ಸಿಎಂ ನಿವಾಸಕ್ಕೆ ಕೇವಲ 1 ಕಿ.ಮೀ. ಗಿಂತಲೂ ಕಡಮೆ ದೂರವಿದೆ. ಆದರೆ, ಭಗವಂತ ಮಾನ್‌ ಅವರು ಆ ಸಮಯದಲ್ಲಿ ನಿವಾಸದಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. 

ಇದನ್ನು ಓದಿ: ಪಂಜಾಬ್‌ನಲ್ಲಿ ಪೊಲೀಸ್ ಠಾಣೆ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ..!

ಇನ್ನು, ಈ ಘಟನೆ ಬಗ್ಗೆ ವಿವರಿಸಿದ ಚಂಡೀಗಢದ ಆಡಳಿತವು ರಕ್ಷಣಾ ಪಡೆಗಳು ಬಾಂಬ್ ಎಲ್ಲಿಂದ ಬಂದವು ಎಂದು ತನಿಖೆ ನಡೆಸುತ್ತವೆ ಮತ್ತು ಅದು ಹೇಗೆ ಅಲ್ಲಿಗೆ ಬಂದಿತು ಎಂಬುದನ್ನು ಪೊಲೀಸರು ಕಂಡುಕೊಳ್ಳುತ್ತಾರೆ ಎಂದೂ ಹೇಳಿದ್ದಾರೆ. ಇಲ್ಲಿ ಕೆಲವು ಅನಗತ್ಯ ವಸ್ತುಗಳು ಪತ್ತೆಯಾಗಿವೆ ಎಂದು ನಮಗೆ ಮಾಹಿತಿ ಸಿಕ್ಕಿತು. ನಾವು ಪರಿಶೀಲಿಸಿದಾಗ ಅದು ಜೀವಂತ ಬಾಂಬ್‌ಶೆಲ್ ಎಂದು ಕಂಡುಕೊಂಡಿದ್ದೇವೆ. ನಾವು ಅದನ್ನು ಸುರಕ್ಷಿತವಾಗಿರಿಸಿದ್ದೇವೆ ಮತ್ತು ಅದು ಈಗ ನಮ್ಮ ತನಿಖೆಯ ಭಾಗವಾಗಿದೆ. ಅದು ಇಲ್ಲಿಗೆ ಹೇಗೆ ತಲುಪಿತು ಎಂಬುದನ್ನು ನಾವು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಅಲ್ಲದೆ, ಬಾಂಬ್ ಸ್ಕ್ವಾಡ್ ಸಹಾಯದಿಂದ ನಾವು ಪ್ರದೇಶವನ್ನು ಭದ್ರಪಡಿಸಿದ್ದೇವೆ. ಈಗ, ಸೇನೆಯು ಬಂದು ಅದನ್ನು ನೋಡಿಕೊಳ್ಳುತ್ತದೆ’’ ಎಂದೂ ಚಂಡೀಗಢ ಆಡಳಿತದ ನೋಡಲ್ ಅಧಿಕಾರಿ ಕುಲದೀಪ್ ಕೊಹ್ಲಿ ಮಾಧ್ಯಮದವರಿಗೆ ತಿಳಿಸಿದರು.

ಪೊಲೀಸ್‌ ಠಾಣೆಗೆ ಗ್ರೆನೇಡ್‌ ದಾಳಿ..!
ಪಂಜಾಬ್‌ನ ತರ್ನ್ ತರಣ್‌ನಲ್ಲಿರುವ ಸರ್ಹಾಲಿ ಪೊಲೀಸ್ ಠಾಣೆಗೆ ರಾಕೆಟ್ ಚಾಲಿತ ಗ್ರೆನೇಡ್ (ಆರ್‌ಪಿಜಿ) ಹೊಡೆದ ಕೆಲವು ದಿನಗಳ ನಂತರ ಚಂಡೀಗಢದಲ್ಲಿರುವ ಸಿಎಂ ನಿವಾಸ ಹಾಗೂ ಹೆಲಿಪ್ಯಾಡ್‌ ಬಳಿ ಬಾಂಬ್‌ಶೆಲ್‌ ಪತ್ತೆಯಾಗಿದೆ. ದಾಳಿಯ ವೇಳೆ ಠಾಣೆಯ ಮುಖ್ಯ ಅಧಿಕಾರಿ (ಎಸ್‌ಎಚ್‌ಒ) ಸೇರಿದಂತೆ 8 ಮಂದಿ ಪೊಲೀಸ್ ಠಾಣೆಯಲ್ಲೇ ಇದ್ದರು. 

ಇದನ್ನೂ ಓದಿ: ಚರಂಡಿಯಲ್ಲಿ ಸಿಕ್ಕ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವಪತ್ತೆ

ಆದರೆ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿತ್ತು. ಮದ್ದುಗುಂಡುಗಳು ಶಕ್ತಿಯುತವಾಗಿದ್ದವು, ಆದರೆ ಪೊಲೀಸ್ ಠಾಣೆಯ ಗೋಡೆಗೆ ಬಡಿದ ನಂತರ ಅದು ರೀಬೌಂಡ್‌ ಆಗಿದೆ. ದಾಳಿಗೆ ಬಳಸಲಾದ ಆರ್‌ಪಿಜಿಯನ್ನು ಪಾಕಿಸ್ತಾನದಿಂದ ಕಳ್ಳಸಾಗಣೆ ಮಾಡಲಾಗಿದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದರು. ಇನ್ನು, ರಾಜ್ಯದಲ್ಲಿ ರಾಕೆಟ್ ಲಾಂಚರ್ ಮೂಲಕ ನಡೆದ ಎರಡನೇ ದಾಳಿ ಇದಾಗಿತ್ತು. 

ಗ್ಯಾಂಗ್‌ಸ್ಟರ್‌ಗಳಾದ ಲಖ್ಬೀರ್ ಸಿಂಗ್ ಲಾಂಡಾ ಮತ್ತು ಹರ್ವಿಂದರ್ ಸಿಂಗ್ ರಿಂಡಾ ಅವರ ಸೂಚನೆಯ ಮೇರೆಗೆ ಮೇ 8 ರಂದು ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರ ಕಚೇರಿಯ ಮೇಲೆ ಇದೇ ರೀತಿಯ ದಾಳಿ ನಡೆಸಲಾಗಿತ್ತು. ಈ ಮಧ್ಯೆ, ಈ ವರ್ಷ ಮಾರ್ಚ್ 9 ರಂದು, ನೂರ್ಪುರ್ ಬೇಡಿ-ನಂಗಲ್ ರಸ್ತೆಯ ರೋಪರ್‌ನಲ್ಲಿರುವ ಕಲ್ಮಾ ಮೋರ್‌ನಲ್ಲಿರುವ ಪೊಲೀಸ್ ಪೋಸ್ಟ್ ಮೇಲೆ ದಾಳಿ ನಡೆಸಲಾಗಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ, ನವಾನ್‌ಶಹರ್‌ನಲ್ಲಿರುವ ಅಪರಾಧ ತನಿಖಾ ಸಂಸ್ಥೆ (ಸಿಐಎ) ಕಚೇರಿಯ ಮುಖ್ಯ ಗೇಟ್ ಮೇಲೆ ಗ್ರೆನೇಡ್ ಎಸೆದಿತ್ತು. ಕೆಲವು ದಿನಗಳ ನಂತರ, ಪಠಾಣ್‌ಕೋಟ್‌ನ ಸೇನೆಯ ಕಂಟೋನ್ಮೆಂಟ್‌ನ ತ್ರಿವೇಣಿ ಗೇಟ್ ಬಳಿ ಮೋಟಾರ್‌ಸೈಕಲ್‌ನಲ್ಲಿ ಬಂದಿದ್ದ ವ್ಯಕ್ತಿಗಳು ಮತ್ತೊಂದು ಗ್ರೆನೇಡ್ ಅನ್ನು ಎಸೆದಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌