ಉರಿ ಮಾದರಿಯಲ್ಲಿ ಸೇನಾ ಶಿಬಿರದ ಮೇಲೆ ಭಯೋತ್ಪಾದಕರ ದಾಳಿ 3 ಸೈನಿಕರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ!
ಕೆಲವು ಭಯೋತ್ಪಾದಕರು ಪರ್ಗಲ್‌ನಲ್ಲಿರುವ ಸೇನಾ ಶಿಬಿರದ ಬೇಲಿ ದಾಟಲು ಪ್ರಯತ್ನ ಮಾಡಿದ್ದರು. ಈ ವೇಳೆ ಸೆಂಟ್ರಿ ಅವರನ್ನು ಹಿಮ್ಮೆಟ್ಟಿಸಲು ಪ್ರಯತ್ನಪಟ್ಟಿದ್ದ. ಗುಂಡಿನ ಚಕಮಕಿ ಕೂಡ ಈ ವೇಳೆ ನಡೆದಿತ್ತು ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮುಖೇಶ್ ಸಿಂಗ್ ಹೇಳಿದ್ದಾರೆ.
ಶ್ರೀನಗರ (ಆ.11): ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿರುವ ಸೇನಾ ಶಿಬಿರದ ಮೇಲೆ ಮುಂಜಾನೆ ನಡೆದ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಸೇನಾ ಶಿಬಿರವನ್ನು ಪ್ರವೇಶಿಸುವ ಸಲುವಾಗಿ ಉಗ್ರರು ಬೇಲಿ ದಾಟುತ್ತಿದ್ದದ್ದನ್ನು ಸೆಂಟ್ರಿ ಪತ್ತೆ ಹಚ್ಚಿದ್ದ ಈ ವೇಳೆ ಗುಂಡಿನ ಚಕಮಕಿ ಕೂಡ ನಡೆದಿತ್ತು. ಈ ಹಂತದಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಪರ್ಗಲ್‌ನಲ್ಲಿರುವ ಸೇನಾ ಶಿಬಿರದ ಬೇಲಿಯನ್ನು ದಾಟಲು ಕೆಲ ಭಯೋತ್ಪಾದಕರು ಪ್ರಯತ್ನ ಪಟ್ಟಿದ್ದರು. ಇದನ್ನು ಸ್ಥಳೀಯ ಸೆಂಟ್ರಿ ಪತ್ತೆ ಹಚ್ಚಿದ್ದ. ಬಳಿಕ ಗುಂಡಿನ ಚಕಮಕಿ ನಡೆದಿದ್ದು, ಮೂರು ಸೈನಿಕರು ಹುತಾತ್ಮರಾಗಿದ್ದರೆ, ಇಬ್ಬರು ಭಯೋತ್ಪಾದಕರನ್ನು ಕೊಂದುಹಾಕಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಹೇಳಿದ್ದಾರೆ. ಪ್ರದೇಶವನ್ನು ಸುರಕ್ಷಿತವಾಗಿರಿಸಲು ಸೇನಾ ಶಿಬಿರಕ್ಕೆ ಹೆಚ್ಚಿನ ಪಡೆಗಳನ್ನು ಕಳುಹಿಸಲಾಗಿದೆ ಎಂದು ಸಿಂಗ್ ಹೇಳಿದರು. ರಜೌರಿ ಜಿಲ್ಲೆ ಮತ್ತು ಜಮ್ಮು ಪ್ರದೇಶದ ಇತರ ಭಾಗಗಳು ಹೆಚ್ಚಾಗಿ ಭಯೋತ್ಪಾದನೆಯಿಂದ ಮುಕ್ತವಾಗಿರುತ್ತವೆ. ಆದರೆ ಕಳೆದ ಆರು ತಿಂಗಳಿನಿಂದ ಈ ಪ್ರದೇಶದಲ್ಲಿ ಭಯೋತ್ಪಾದಕ ಘಟನೆಗಳ ಸಾಕಷ್ಟು ಏರಿಕೆ ಕಂಡಿದೆ ಎಂದೂ ವರದಿಯಾಗಿದೆ. ಲಷ್ಕರ್-ಇ-ತಯ್ಬಾ ಅಥವಾ ಎಲ್‌ಇಟಿ ಭಯೋತ್ಪಾದಕ ಸಂಘಟನೆ ಇಂದಿನ ದಾಳಿಯ ಹಿಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶದ ಪುಲ್ವಾಮಾ ಜಿಲ್ಲೆಯಲ್ಲಿ 25 ಕೆಜಿ ಸುಧಾರಿತ ಸ್ಫೋಟಕ ಸಾಧನವನ್ನು ವಶಪಡಿಸಿಕೊಂಡಿದ್ದಲ್ಲದೆ, ಕಾಶ್ಮೀರಿ ಪಂಡಿತ್ ಹಾಗೂ ಕಂದಾಯ ಇಲಾಖೆಯ ಉದ್ಯೋಗಿಯಾಗಿದ್ದ ರಾಹುಲ್ ಭಟ್ ಅವರನ್ನು ಹತ್ಯೆ ಮಾಡಿದ್ದ ಉಗ್ರ ಲತೀಫ್ ರಾಥೆರ್‌ರನ್ನು ಸೈನಿಕರು ಹೊಡೆದುರುಳಿಸಿದ ಒಂದು ದಿನದ ನಂತರ ಈ ದಾಳಿ ನಡೆದಿದೆ.
ಉರಿಯಲ್ಲಿ ನಡೆದಿದ್ದ ದಾಳಿಯಲ್ಲಿ 18 ಸೈನಿಕರ ಸಾವು: ಫೆಬ್ರವರಿ 2018 ರ ನಂತರ ಜಮ್ಮು ಮತ್ತು ಕಾಶ್ಮೀರದ ಸೇನಾ ಸೌಲಭ್ಯದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು ಇದೇ ಮೊದಲು. 2018ರ ಫೆಬ್ರವರಿಯಲ್ಲಿ ಜಮ್ಮು ವಲಯದ ಸುಂಜ್ವಾನ್ ಸೇನಾ ಕ್ಯಾಂಪ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. 2016 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನಡೆದ ಇದೇ ರೀತಿಯ ಭಯೋತ್ಪಾದಕ ದಾಳಿಯಲ್ಲಿ 18 ಯೋಧರು ಹುತಾತ್ಮರಾಗಿದ್ದರು. ತಾಲಿಬ್ ಹುಸೇನ್ ಶಾ ಅವರನ್ನು ಬಂಧಿಸುವುದರೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಇತ್ತೀಚೆಗೆ ಪ್ರಮುಖ ಎಲ್ಇಟಿ ಮಾಡ್ಯೂಲ್ ಅನ್ನು ಭೇದಿಸಿದರು. ಇವರು ಜಮ್ಮು ಕಾಶ್ಮೀರದಲ್ಲಿ ಪ್ರಮುಖ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು. ತಾಲಿಬ್ ಹುಸೇನ್ ಶಾ, ಪೊಲೀಸರ ಪ್ರಕಾರ, ಈ ಪ್ರದೇಶದಲ್ಲಿ ಸರಣಿ ದಾಳಿಯಲ್ಲಿ ಭಾಗಿಯಾಗಿದ್ದ. ಆತನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಹತ್ಯೆ ಮಾಡಿದ್ದ ಲಷ್ಕರ್ ಭಯೋತ್ಪಾದಕನ ಕೊಂದು ಹಾಕಿದ ಸೇನೆ!
ಓಮರ್ ಅಬ್ದುಲ್ಲಾ ಸಂತಾಪ: "ರಜೌರಿಯಲ್ಲಿ ಉಗ್ರರ ದಾಳಿಯಲ್ಲಿ ನಮ್ಮ ಮೂವರು ಯೋಧರು ಸಾವನ್ನಪ್ಪಿದ ಬಗ್ಗೆ ಕೇಳಲು ತುಂಬಾ ವಿಷಾದವಾಗಿದೆ. ದಾಳಿಯನ್ನು ಖಂಡಿಸುವ ಸಂದರ್ಭದಲ್ಲಿ ನಾನು ಕುಟುಂಬಗಳಿಗೆ ನನ್ನ ಸಂತಾಪವನ್ನು ಕಳುಹಿಸುತ್ತೇನೆ ಮತ್ತು ದಾಳಿಯಲ್ಲಿ ಗಾಯಗೊಂಡ ಅಧಿಕಾರಿಗಳು ಮತ್ತು ಯೋಧರು ಶೀಘ್ರವಾಗಿ ಚೇತರಿಸಿಕೊಳ್ಳಲು ನನ್ನ ಪ್ರಾರ್ಥನೆಗಳನ್ನು ಕಳುಹಿಸುತ್ತೇನೆ' ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
ಕಾಶ್ಮೀರವನ್ನು ಬಿಟ್ಟು ಹೊರಡಿ, ಪಂಡಿತರ ಮನೆಗೆ ಉಗ್ರರಿಂದ ಎಚ್ಚರಿಕೆ ಪತ್ರ..!
ಉಗ್ರ ಲತೀಫ್‌ನನ್ನು ಕೊಂದಿದ್ದ ಸೇನೆ: ಮೇ ತಿಂಗಳಲ್ಲಿ ಕಾಶ್ಮೀರಿ ಪಂಡಿತ್ ಉದ್ಯೋಗಿ ರಾಹುಲ್ ಭಟ್ ಹತ್ಯೆಯಲ್ಲಿ ಭಾಗಿಯಾಗಿದ್ದ ಲತೀಫ್ ರಾಥರ್ ಸೇರಿದಂತೆ ಮೂವರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಬುಧವಾರ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹತರಾಗಿದ್ದರು. ರಾಹುಲ್ ಭಟ್ ಅಲ್ಲದೆ, ಮೇ ತಿಂಗಳಲ್ಲಿ ಕಿರುತೆರೆ ಕಲಾವಿದೆ ಅಮ್ರೀನ್ ಭಟ್ ಹತ್ಯೆಯನ್ನೂ ಲತೀಫ್ ಪಾತ್ರ ಹೊಂದಿದ್ದರು. ರಾಹುಲ್ ಭಟ್ ಅವರ ದಾಳಿಯಲ್ಲಿ ಭಾಗಿಯಾಗಿದ್ದ ಕೆಲ ಭಯೋತ್ಪಾದಕರನ್ನು ಅದೇ ಸಮಯದಲ್ಲಿ ಸೈನಿಕರು ಹೊಡೆದುರುಳಿಸಿದ್ದರು. ರಾಹುಲ್ ಭಟ್ ಅವರನ್ನು ಚದೂರದಲ್ಲಿರುವ ಅವರ ಕಚೇರಿಯೊಳಗೆ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರೆ, ಬುದ್ಗಾಮ್ ಜಿಲ್ಲೆಯ ಹುಶ್ರು ಪ್ರದೇಶದಲ್ಲಿ ಅಮರೀನ್ ಭಟ್ ಅವರ ಮನೆಯ ಹೊರಗೆ ಉಗ್ರರಿಂದ ಕೊಲ್ಲಲ್ಪಟ್ಟಿದ್ದರು.