'ರಾಹುಲ್‌ ಗಾಂಧಿಗೆ ತಲೆಗೆ ಹೊಡೆದು ಬುದ್ದಿಹೇಳಿ..' ಸೋನಿಯಾ, ಪ್ರಿಯಾಂಕಾಗೆ ಬಿಜೆಪಿ ಮನವಿ!

By Santosh NaikFirst Published Dec 17, 2022, 10:45 AM IST
Highlights

ಚೀನಾದ ಸೇನೆ ಭಾರತದ ಸೈನಿಕರಿಗೆ ಹೊಡೆಯುತ್ತಿದೆ. ಅವರು ಯುದ್ಧಕ್ಕೆ ಸಿದ್ಧರಾಗುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ನೀಡಿರುವ ಹೇಳಿಕೆಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, ಇಂಥ ಹೇಳಿಕೆ ನೀಡುವ ರಾಹುಲ್‌ ಗಾಧಿಯ ತಲೆಗೆ ಹೊಡೆದು ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಬುದ್ಧಿ ಹೇಳಬೇಕು ಎಂದು ಮನವಿ ಮಾಡಿದೆ.
 

ನವದೆಹಲಿ (ಡಿ. 17): ಮೆಹಬೂಬಾ ಮುಫ್ತಿ ನಂತರ ಇದೀಗ ರಾಹುಲ್ ಗಾಂಧಿ ಚೀನಾ ವಿಚಾರದಲ್ಲಿ ಸರ್ಕಾರವನ್ನು ಟೀಕೆ ಮಾಡಿದ್ದಾರೆ. ಚೀನಾ ಭಾರತದ ಮೇಲೆ ಯುದ್ಧ ಮಾಡಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಭಾರತದ ಭೂಪ್ರದೇಶದಲ್ಲಿ 2 ಸಾವಿರ ಚದರ ಕಿ.ಮೀ. ಜಾಗವನ್ನು ಅತಿಕ್ರಮಿಸಿಕೊಂಡಿದೆ. ಆದರೆ ಈ ಅಪಾಯವನ್ನು ಕಡೆಗಣಿಸಿರುವ ಭಾರತ ಗಾಢ ನಿದ್ರೆಯಲ್ಲಿದೆ. ನಮ್ಮ ಸೈನಿಕರ ಮೇಲೆ ಹಲ್ಲೆ ಆಗುತ್ತಿದೆ ಎಂದು ರಾಹುಲ್‌ ಗಾಂಧಿ ಶುಕ್ರವಾರ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ರಾಹುಲ್‌ ಗಾಂಧಿ ನೀಡಿರುವ ಈ ಹೇಳಿಕೆಗೆ ಅವರ ತಲೆಗೆ ಹೊಡೆದು ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಬುದ್ದಿ ಹೇಳಬೇಕು ಎಂದು ಹೇಳಿದ್ದಾರೆ.

ಜೈಪುರದಲ್ಲಿ ಭಾರತ್‌ ಜೋಡೋ ಯಾತ್ರೆಯ ನಡುವೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚೀನಾ ನಮ್ಮ ಭೂ ಪ್ರದೇಶವನ್ನು ವಶ ಪಡಿಸಿಕೊಳ್ಳುವುದರ ಜೊತೆಗೆ ಅರುಣಾಚಲ ಪ್ರದೇಶದಲ್ಲಿ ನಮ್ಮ 20 ಸೈನಿಕರ ಮೇಲೆ ದಾಳಿ ಮಾಡಿದೆ. ಚೀನಾದಿಂದ ಉಂಟಾಗುತ್ತಿರುವ ಅಪಾಯವನ್ನು ನಾನು ಊಹಿಸಬಲ್ಲೆ. ಅಲ್ಲದೇ ಕಳೆದ 2-3 ವರ್ಷಗಳಿಂದ ನಾನು ಬಗ್ಗೆ ಸ್ಪಷ್ಟವಾಗಿದ್ದೇನೆ. ಆದರೆ ಸರ್ಕಾರ ಇದನ್ನು ನಿರ್ಲಕ್ಷಿಸುವುದರ ಜೊತೆಗೆ ಮುಚ್ಚಿಡಲು ಪ್ರಯತ್ನಿಸುತ್ತಿದೆ. ಇದು ಮುಚ್ಚಿಡುವಂಥ ಅಪಾಯವಲ್ಲ. ಲಡಾಕ್‌ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಾ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿದ್ದರೆ ಭಾರತ ಸರ್ಕಾರ ಗಾಢ ನಿದ್ರೆಯಲ್ಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕುರಿತಾಗಿ ಚಿಂತಿಸುತ್ತದೆ. ಆದರೆ ಎಲ್ಲಿ ಭೌಗೋಳಿಕ ಅಂಶಗಳು ಇರುತ್ತವೆಯೋ ಅಲ್ಲಿ ಘಟನೆ ಅವಲಂಬಿಸಿದ ಕಾರ‍್ಯಗಳು ಫಲಪ್ರದವಾಗುವುದಿಲ್ಲ. ಚೀನಾದಿಂದ ಉಂಟಾಗುತ್ತಿರುವ ಅಪಾಯದ ಕುರಿತಾಗಿ ಹಲವು ಬಾರಿ ನಾನು ಎಚ್ಚರಿಕೆ ನೀಡಿದ್ದೇನೆ. ಆದರೆ ಸರ್ಕಾರ ಕೇವಲ ಹೇಳಿಕೆ ನೀಡುವುದರಲ್ಲಿ ನಿರತವಾಗಿದೆ. ವಿದೇಶಾಂಗ ಸಚಿವರು ಟೀಕೆ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಅವರು ಟೀಕಿಸಿದರು.

ಅರುಣಾಚಲ ಪ್ರದೇಶದ ಯಾಂಗ್‌ಟ್ಸೆ ಪ್ರದೇಶದ ಮೇಲೆ ಚೀನಾ ಕಣ್ಣು ಹಾಕಿರುವುದಕ್ಕೆ ಇದೇ ಕಾರಣ..!

ನಮ್ಮ ಸೈನಿಕರಿಗೆ ಚೀನಾ ಹೊಡೆಯುತ್ತಿದೆ ಎಂದು ರಾಹುಲ್‌ ಗಾಂಧಿ ಹೇಳುತ್ತಿದ್ದಾರೆ. ಅವರ ಈ ಕೆಟ್ಟ ಮನಸ್ಥಿತಿಯ ಹೇಳಿಕೆಯಿಂದ ನನ್ನ ರಕ್ತ ಕುದಿಯುತ್ತಿದೆ. ಇಂಥ ದೇಶವಿರೋಧಿ ಹೇಳಿಕೆ ನೀಡುವ ರಾಹುಲ್‌ ಗಾಂಧಿಗೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ತಲೆಗೆ ಹೊಡೆದು ಬುದ್ದಿ ಹೇಳಬೇಕು. ಆ ಮೂಲಕವಾದರೂ ರಾಹುಲ್‌ ಗಾಂಧಿಗೆ ಈ ದೇಶದ ಬಗ್ಗೆ ಹಾಗೂ ಸೈನಿಕರ ಬಗ್ಗೆ ಪ್ರೀತಿ ಹುಟ್ಟುತ್ತದೆಯೋ ಎಂದು ನೋಡಬೇಕು ಎಂದಿದ್ದಾರೆ.

ಚೀನಾಗೆ ಠಕ್ಕರ್‌ ಕೊಡಲು ನಾಳೆಯಿಂದ 2 ದಿನ ಭಾರತೀಯ ವಾಯುಪಡೆ ಸಮರಾಭ್ಯಾಸ..!

ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಅಂದಿನಿಂದ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಎರಡು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೂಡ ನಮ್ಮ ಸೈನಿಕರನ್ನು ಥಳಿಸಿದ್ದಾರೆ ಎಂದು ಹೇಳಿದ್ದರು. ಸೈನಿಕರನ್ನು ಉತ್ತರಿಸದಂತೆ ಸರ್ಕಾರ ತಡೆಯುತ್ತಿದೆ ಎಂದು ಆರೋಪಿಸಿದ್ದರು. ಬಿಜೆಪಿ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ರಾಹುಲ್ ಗಾಂಧಿ ಅವರ ಅಜ್ಜ ಚೀನಾಕ್ಕೆ ತುಂಬಾ ಹತ್ತಿರವಾಗಿದ್ದರು. ಅದರ ಪರಿಣಾಮ ಏನಾಗಿದೆ ಎನ್ನುವುದನ್ನು ನೋಡುತ್ತಿದ್ದೇವೆ. ಅವರು ಗಾಢವಾಗಿ ನಿದ್ರೆ ಮಾಡುತ್ತಿದ್ದ ಕಾರಣಕ್ಕೆ ಭಾರತದ 37 ಸಾವಿರ ಚದರ ಕಿಲೋಮೀಟರ್‌ ಜಾಗ ಕೈತಪ್ಪಿತು. ಇದಕ್ಕೂ ಮುನ್ನ ಬಿಜೆಪಿ ನಾಯಕ ಯದುವೀರ್‌ ಸೇಥಿ, ಮೆಹಬೂಬಾ ಮಫ್ತಿ ಹೇಳಿಕೆಯನ್ನು ವಿರೋಧಿಸಿದ್ದರು. ಅವರು ಚೀನಾದ ಏಜೆಂಟ್‌ ಅಥವಾ ವಕ್ತಾರರೇ ಎಂದು ಪ್ರಶ್ನೆ ಮಾಡಿದ್ದರು.

click me!