ಪಾಕಿಸ್ತಾನ ವಿದೇಶಾಂಗ ಸಚಿವ ಬಿಲ್ವಾಲ್ ಭುಟ್ಟೋ ಆಡಿದ ಮಾತು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಗುಜರಾತ್‌ನ ಕಟುಕ ಇದೀಗ ಭಾರತದ ಪ್ರಧಾನಿಯಾಗಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿ ಭುಟ್ಟೋ ಹೇಳಿದ್ದರು. ಈ ಹೇಳಿಕೆಗೆ ಭಾರತ ಸರಿಯಾಗಿ ತಿರುಗೇಟು ನೀಡಿದ್ದರೆ, ವಿಶ್ವ ನಾಯಕರು ಪಾಕಿಸ್ತಾನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ(ಡಿ.16) ಪ್ರತಿ ಬಾರಿ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರ ಹಿಡಿದು ಹಗ್ಗಜಗ್ಗಾಟ ಮಾಡುವ ಪಾಕಿಸ್ತಾನಕ್ಕೆ ಈ ಬಾರಿ ಕಾಶ್ಮೀರ ವಿಚಾರ ಕೆದಕುತ್ತಿದ್ದಂತೆ ಭಾರತ ತಕ್ಕೆ ತಿರುಗೇಟು ನೀಡಿದೆ. ಇದರ ಪರಿಣಾಮ ಪಾಕಿಸ್ತಾನ ಇದೀಗ ಅಸಂಬದ್ದ ಹೇಳಿಕೆ ನೀಡುತ್ತಿದೆ. ಇದೀಗ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲ್ವಾಲ್ ಭುಟ್ಟೋ ನೀಡಿದ ಹೇಳಿಕೆಗೆ ಭಾರತ ಸೇರಿ ಹಲವು ವಿಶ್ವನಾಯಕರು ತಿರುಗೇಟು ನೀಡಿದ್ದಾರೆ. ಲಾಡೆನ್ ಸತ್ತ, ಆದರೆ ಗುಜರಾತ್‌ನ ಕಟುಕು ಈಗಲೂ ಬದುಕಿದ್ದಾರೆ. ಆತ ಈಗ ಭಾರತದ ಪ್ರಧಾನಿಯಾಗಿದ್ದಾನೆ ಎಂದು ಬಿಲ್ವಾಲ್ ಭುಟ್ಟೋ ವಿಶ್ವಸಂಸ್ಥೆಯಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ಅಷ್ಟೇ ಖಾರವಾಗಿ ಭಾರತ ತಿರುಗೇಟು ನೀಡಿದೆ. ಪಾಕಿಸ್ತಾನದ ಭಯೋತ್ಪಾದನೆಯನ್ನು ಭಾರತ ಬಟಾ ಬಯಲು ಮಾಡಿದೆ. ಇತ್ತ ಭಾರತದಲ್ಲಿ ಪಾಕಿಸ್ತಾನದ ಯಾವುದೇ ಆಟ ನಡೆಯುತ್ತಿಲ್ಲ. ಇದರಿಂದ ಕುಪಿತಗೊಂಡಿರುವ ಪಾಕಿಸ್ತಾನ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿದೆ ಎಂದು ಭಾರತ ತಿರುಗೇಟು ನೀಡಿದೆ.
ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಕೆದಕಿದ್ದಕ್ಕೆ ಭಾರತ ನೀಡಿದ ತಿರುಗೇಟಿನಿಂದ ಕಂಗಾಲಾಗಿರುವ ಪಾಕಿಸ್ತಾನದ ವಿದೇಶಾಂಗ ಮಂತ್ರಿ ಬಿಲಾವಲ್ ಭುಟ್ಟೋ ಇದೀಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅತ್ಯಂತ ಕೀಳು ಹೇಳಿಕೆ ನೀಡಿದ್ದಾರೆ. ‘ಭಾರತಕ್ಕೆ ಒಂದು ವಿಷಯ ಹೇಳುತ್ತೇನೆ. ಒಸಾಮಾ ಬಿನ್ ಲಾಡೆನ್ ಸತ್ತ. ಆದರೆ ಗುಜರಾತಿನ ಕಟುಕ ಇನ್ನೂ ಬದುಕಿದ್ದಾನೆ. ಆತ ಭಾರತದ ಪ್ರಧಾನಮಂತ್ರಿ’ ಎಂದು ಹೇಳಿದ್ದಾರೆ.
'ಹಾವನ್ನು ಸಾಕಿದ್ದೀರಿ, ಅದು ನಿಮ್ಮನ್ನೂ ಕೂಡ ಕಚ್ಚಬಹುದು..' ಪಾಕಿಸ್ತಾನಕ್ಕೆ ಮಾತಿನಲ್ಲೇ ತಿವಿದ ಜೈಶಂಕರ್!
ಈ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. 2008ರ ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಬಣ್ಣವನ್ನು ಭಾರತ ಜಗತ್ತಿನೆದುರು ಬಯಲು ಮಾಡಿದೆ. ಹೀಗಾಗಿ ಆತ ಈ ರೀತಿ ಕೋಪ ತೋರ್ಪಡಿಸಿಕೊಂಡಿದ್ದಾರೆ. ಭಯೋತ್ಪಾದನೆ ವಿಷಯದಲ್ಲಿ ಆದ ಅಗಾಧ ಹತಾಶೆಯನ್ನು ಇದು ತೋರಿಸುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಮತ್ತೊಂದೆಡೆ, 1971ರಲ್ಲಿ ಇದೇ ದಿನ ಭಾರತ ಎದುರು ಪಾಕಿಸ್ತಾನ ಯುದ್ಧ ಸೋತಿತ್ತು. ಆ ನೋವಿನಿಂದ ಬಿಲಾವಲ್ ಈ ರೀತಿ ಹೇಳಿರಬಹುದು. ನೈತಿಕವಾಗಿ, ಬೌದ್ಧಿಕವಾಗಿ ಹಾಗೂ ಆರ್ಥಿಕವಾಗಿ ದಿವಾಳಿಯಾದ, ಭಯೋತ್ಪಾದನೆಗೆ ಬೆಂಬಲ ನೀಡುವ ಮೂಲಕ ವಿಶ್ವಾಸಾರ್ಹತೆ ಕಳೆದುಕೊಂಡಿರುವ ದೇಶವನ್ನು ಬಿಲಾವಲ್ ಪ್ರತಿನಿಧಿಸುತ್ತಿದ್ದಾರೆ ಎಂದು ಬಿಜೆಪಿ ಚಾಟಿ ಬೀಸಿದೆ. ಈ ನಡುವೆ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿ ಹೊರಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿಯನ್ನು ಕಟುಕ ಎಂದ ಭುಟ್ಟೋ
ವಿಶ್ವಸಂಸ್ಥೆಯಲ್ಲಿ ನಡೆದ ಚರ್ಚೆಯ ವೇಳೆ ಬಿಲಾವಲ್ ಭುಟ್ಟೋ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ, ಜನಮತಗಣನೆ ಕುರಿತ ವಿಶ್ವಸಂಸ್ಥೆಯ ನಿರ್ಣಯವನ್ನು ಭಾರತ ಜಾರಿಗೆ ತರುತ್ತಿಲ್ಲ ಎಂದು ದೂರಿದ್ದರು. ಇದಕ್ಕೆ ಅಲ್ಲೇ ತಿರುಗೇಟು ನೀಡಿದ್ದ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡಿದವರು ಉಪದೇಶ ನೀಡಬೇಕಿಲ್ಲ ಎಂದು ಚಾಟಿ ಬೀಸಿದ್ದರು.
ಭಾರತ ವಿರೋಧಿ ವೆಬ್ ಸೀರಿಸ್, ಪಾಕಿಸ್ತಾನ ಮೂಲದ ಒಟಿಟಿ ನಿಷೇಧಿಸಿದ ಕೇಂದ್ರ ಸರ್ಕಾರ!
ಈ ಬಗ್ಗೆ ಬಿಲಾವಲ್ ಭುಟ್ಟೋ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ ಗರಂ ಆದ ಅವರು, ಲಾಡೆನ್ ಬಗ್ಗೆ ಪ್ರಸ್ತಾಪಿಸಿ ಮೋದಿ ಅವರನ್ನು ಗುಜರಾತ್‌ನ ಕಟುಕ ಎಂದು ಟೀಕಿಸಿದರು. ‘ಪ್ರಧಾನಿಯಾಗುವವರೆಗೂ ಮೋದಿ ಅವರನ್ನು ಅಮೆರಿಕಕ್ಕೆ ಸೇರಿಸಿರಲಿಲ್ಲ. ಅವರು ಆರೆಸ್ಸೆಸ್ ಪ್ರಧಾನಿ. ವಿದೇಶಾಂಗ ಸಚಿವರು ಆರೆಸ್ಸೆಸ್. ಆರೆಸ್ಸೆಸ್ ಅಂದರೆ ಏನು ಗೊತ್ತಾ? ಹಿಟ್ಲರ್‌ನಿಂದ ಪ್ರೇರಣೆ ಪಡೆಯುವುದಾಗಿದೆ’ ಎಂದು ವಾಗ್ದಾಳಿ ನಡೆಸಿದರು.