ಪ್ರಧಾನಿ ನಿವಾಸದ ಬಳಿ 'ಕೈ' ನಾಯಕರ ಭಾರಿ ಹೈಡ್ರಾಮಾ; ನೆಲದ ಮೇಲೆ ಮಲಗಿ ಪ್ರತಿಭಟಿಸಿದ ರಾಹುಲ್ ಗಾಂಧಿ ವಶಕ್ಕೆ!

Published : Jul 21, 2026, 07:17 PM IST
Rahul Gandhi

ಸಾರಾಂಶ

ಪ್ರಧಾನಿ ನಿವಾಸದ ಬಳಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿಪಕ್ಷ ನಾಯಕರು ದಿಢೀರ್ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ, ರಾಹುಲ್ ಗಾಂಧಿ ನೆಲದ ಮೇಲೆ ಮಲಗಿ ವಿರೋಧ ವ್ಯಕ್ತಪಡಿಸಿದರು.

ನವದೆಹಲಿ (ಜು.21): ಪ್ರಶ್ನೆಪತ್ರಿಕೆ ಸೋರಿಕೆ (Paper Leak) ಪ್ರಕರಣವನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪ್ರಧಾನಿಯವರ ರಾಜೀನಾಮೆಗೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಸಮೀಪ ಧರಣಿ ನಡೆಸುತ್ತಿದ್ದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ. ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್‌ ಯಾದವ್‌ ಹಾಗೂ ಪ್ರಿಯಾಂಕಾ ವಾದ್ರಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ವಶಕ್ಕೆ ಪಡೆಯಲು ಬಂದಾಗ ರಾಹುಲ್ ಗಾಂಧಿ ನೆಲದ ಮೇಲೆ ಮಲಗಿ ಪ್ರತಿಭಟಿಸಿದ್ದು, ಕೊನೆಗೆ ಪೊಲೀಸರು ಅವರ ಕೈ-ಕಾಲುಗಳನ್ನು ಹಿಡಿದು ಎತ್ತಿಕೊಂಡು ವಾಹನಕ್ಕೆ ಒಯ್ದಿದ್ದಾರೆ.

ಮಂಗಳವಾರ ಮಧ್ಯಾಹ್ನ ಸುಮಾರು 3.30ರ ಸುಮಾರಿಗೆ ದೆಹಲಿಯಲ್ಲಿರುವ ಪ್ರಧಾನಿ ನಿವಾಸದ ಬಳಿ ಕಾಂಗ್ರೆಸ್ ನಾಯಕರು ದಿಢೀರ್ ಧರಣಿ ಕುಳಿತರು. ಈ ಪ್ರತಿಭಟನೆಯನ್ನು ಸಂಪೂರ್ಣ ರಹಸ್ಯವಾಗಿಡಲಾಗಿತ್ತು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲಾ ಪ್ರಮುಖ ನಾಯಕರು ಖರ್ಗೆ ಅವರ ನಿವಾಸದಿಂದ ಪ್ರಧಾನಿ ನಿವಾಸದವರೆಗೆ ಕಾಲ್ನಡಿಗೆಯಲ್ಲೇ ಮೆರವಣಿಗೆ ನಡೆಸಿದರು. ಪ್ರಧಾನಿ ನಿವಾಸದಿಂದ ಕೇವಲ 100 ಮೀಟರ್ ದೂರದಲ್ಲಿದ್ದಾಗಷ್ಟೇ ಮಾಧ್ಯಮಗಳಿಗೆ ಈ ವಿಷಯ ತಿಳಿದುಬಂದಿತ್ತು.

ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಸ್ಥಳಕ್ಕೆ ಆಗಮಿಸಿ ರಾಹುಲ್ ಗಾಂಧಿ ಹಾಗೂ ಪ್ರತಿಭಟನಾನಿರತ ನಾಯಕರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಗೃಹ ಸಚಿವ ಅಮಿತ್ ಶಾ ಅವರ ಬಳಿ ಚರ್ಚಿಸಿ, ಮತ್ತೆ ರಾಹುಲ್ ಅವರೊಂದಿಗೆ ಎರಡನೇ ಹಂತದ ಮಾತುಕತೆ ನಡೆಸಿದರು.

ಈ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಜಿತೇಂದ್ರ ಸಿಂಗ್, "ಸಂಸತ್ತಿನಲ್ಲಿ 'ನೀಟ್' (NEET) ವಿಷಯದ ಕುರಿತು ಚರ್ಚೆಗೆ ರಾಹುಲ್ ಗಾಂಧಿ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿತ್ತು. ಆದರೆ ರಾಹುಲ್ ಗಾಂಧಿ ತಮ್ಮ ಮಾತಿನಿಂದ ಹಿಂದೆ ಸರಿದು, 'ಈಗ ನಮಗೆ ಎರಡು ಬೇಡಿಕೆಗಳಿವೆ, ಮೊದಲನೆಯದು ಸಂಸತ್ತಿನಲ್ಲಿ ನೀಟ್ ಚರ್ಚೆ, ಎರಡನೆಯದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ' ಎಂದು ಹೊಸ ಷರತ್ತು ವಿಧಿಸಿದ್ದಾರೆ" ಎಂದು ತಿಳಿಸಿದ್ದಾರೆ.

ಇದು ಪ್ರತಿಭಟನೆಗೆ ಸೂಕ್ತ ಸ್ಥಳವಲ್ಲ ಎಂದ ಗೃಹ ಕಾರ್ಯದರ್ಶಿ

ಪ್ರತಿಭಟನಾ ಸ್ಥಳದಲ್ಲಿದ್ದ ಗೃಹ ಕಾರ್ಯದರ್ಶಿಯವರು, ಈ ಸ್ಥಳವು ಧರಣಿ ನಡೆಸಲು ಸೂಕ್ತವಲ್ಲ ಎಂದು ರಾಹುಲ್ ಅವರಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, "ಇದು ನನ್ನ ಇಷ್ಟವೂ ಹೌದು, ನೀವು ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದು" ಎಂದು ಖಡಕ್ ಆಗಿ ಉತ್ತರಿಸಿದರು. ಈ ನಡುವೆ ಪ್ರತಿಭಟನಾ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಹಾಗೂ ಗೃಹ ಸಚಿವರ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಚರಂಜೀತ್ ಸಿಂಗ್ ಚನ್ನಿ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಲೋಕ್ ಕಲ್ಯಾಣ್ ಮಾರ್ಗದಲ್ಲಿ ಸೆಕ್ಷನ್ 163 ಜಾರಿ

ದೆಹಲಿಯ ಲೋಕ್ ಕಲ್ಯಾಣ್ ಮಾರ್ಗದಲ್ಲಿ ಪ್ರತಿಭಟನೆ ನಡೆಸಲು ಯಾವುದೇ ಪೂರ್ವ ಅನುಮತಿಯಿರಲಿಲ್ಲ. ಇದು ಪ್ರಧಾನಮಂತ್ರಿಯವರ ನಿವಾಸವಿರುವ ಅತ್ಯಂತ ಸೂಕ್ಷ್ಮ ಹಾಗೂ ವಿವಿಐಪಿ (VVIP) ಪ್ರದೇಶವಾಗಿದೆ. ಈ ಭಾಗದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ಮತ್ತು ಮೆರವಣಿಗೆ ಮಾಡುವುದನ್ನು ನಿಷೇಧಿಸುವ ಸಿಆರ್‌ಪಿಸಿ ಸೆಕ್ಷನ್ 163 (ಹಳೆಯ ಸೆಕ್ಷನ್ 144) ಜಾರಿಯಲ್ಲಿದೆ. ಪ್ರಧಾನಿ ನಿವಾಸದ ಭದ್ರತೆಗಾಗಿ ವಿಶೇಷ ರಕ್ಷಣಾ ಪಡೆ (SPG), ದೆಹಲಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ಭಾರಿ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.

ರಾಹುಲ್, ಪ್ರಿಯಾಂಕಾ ವಶಕ್ಕೆ

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ, ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ ಪೊಲೀಸರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಧರಣಿ ಕುಳಿತಿದ್ದ ಎಲ್ಲಾ ಹಿರಿಯ ನಾಯಕರನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಸಿದರು. ಅಂತಿಮವಾಗಿ ನೆಲದ ಮೇಲೆ ಮಲಗಿ ವಿರೋಧ ವ್ಯಕ್ತಪಡಿಸಿದ ರಾಹುಲ್ ಗಾಂಧಿಯವರನ್ನು ಬಲವಂತವಾಗಿ ಎತ್ತಿಕೊಂಡು ಹೋಗಿ ಪೊಲೀಸ್ ವಾಹನಕ್ಕೆ ಹತ್ತಿಸಲಾಯಿತು.

ಪ್ರತಿಭಟನಾನಿರತ ವಿಪಕ್ಷ ನಾಯಕ ರಾಹುಲ್‌ ಗಾಂಧಿ ವಶಕ್ಕೆ ಪಡೆದ ಪೊಲೀಸ್‌

ವಯನಾಡ್‌ ಸಂಸದೆ ಪ್ರಿಯಾಂಕಾ ವಾದ್ರಾ ಕೂಡ ವಶಕ್ಕೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಚಾನಕ್ಕಾಗಿ ಮನೆಯಿಂದ ಬೆಳ್ಳಿ ಕಳಶ ನಾಪತ್ತೆ, ಕೈಮುಗಿದು ಬೇಡಿದ ಕುಟುಂಬಕ್ಕೆ 48 ಗಂಟೆಯಲ್ಲಿ ಸಿಕ್ಕಿತು ವಸ್ತು
Job: ಅಗ್ನಿವೀರ್‌ ಅಭ್ಯರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್‌: ಶೇ.25 ಅಲ್ಲ, ಬರೋಬ್ಬರಿ ಶೇ. 75ರಷ್ಟು ಅಭ್ಯರ್ಥಿಗಳಿಗೆ ಖಾಯಂ ಸೇವಾ ಅವಕಾಶ?