ಪುಷ್ಕರ್‌ ಸಿಂಗ್‌ ಧಾಮಿ, ಪ್ರಮೋದ್‌ ಸಾವಂತ್‌ಗೆ ಮುಖ್ಯಮಂತ್ರಿ ಪಟ್ಟ: ಮಣಿಪುರಕ್ಕೆ 2ನೇ ಸಲ ಬಿರೇನ್‌ ಸಿಂಗ್‌ ಸಿಎಂ

Published : Mar 22, 2022, 07:52 AM ISTUpdated : Mar 22, 2022, 07:58 AM IST
ಪುಷ್ಕರ್‌ ಸಿಂಗ್‌ ಧಾಮಿ, ಪ್ರಮೋದ್‌ ಸಾವಂತ್‌ಗೆ ಮುಖ್ಯಮಂತ್ರಿ ಪಟ್ಟ: ಮಣಿಪುರಕ್ಕೆ 2ನೇ ಸಲ ಬಿರೇನ್‌ ಸಿಂಗ್‌ ಸಿಎಂ

ಸಾರಾಂಶ

*ಬಿಜೆಪಿ ಶಾಸಕಾಂಗ ಸಭೆಯಲ್ಲಿ ನಿರ್ಧಾರ *ಸೋತರೂ ಸಿಎಂ ಪಟ್ಟ ಪಡೆದ ಧಾಮಿ *ಸತತ 2ನೇ ಬಾರಿ ಮಣಿಪುರ ಸಿಎಂ ಆಗಿ ಬಿರೇನ್‌ ಪ್ರಮಾಣ *ಗೋವಾಕ್ಕೆ ಮತ್ತೆ ಸಾವಂತ್‌ ಸಿಎಂ

ನವದೆಹಲಿ (ಮಾ. 22): ಇತ್ತೀಚಿಗೆ ಮುಕ್ತಾಯಗೊಂಡ ಪಂಚರಾಜ್ಯ ಚುನಾವಣೆ ವೇಳೆ ತಾನು ಗೆದ್ದಿದ್ದ 2 ರಾಜ್ಯಗಳಿಗೆ ನೂತನ ಮುಖ್ಯಮಂತ್ರಿಗಳನ್ನು ಬಿಜೆಪಿ ಆಯ್ಕೆ ಮಾಡಿದೆ. ಉತ್ತರಾಖಂಡದಲ್ಲಿ ಚುನಾವಣೆ ಸೋತಿದ್ದರೂ ಕ್ರಿಕೆಟಿಗ ಧೋನಿ ಖ್ಯಾತಿಯ ಧಮಿ ಅವಕಾಶ ನೀಡಿದ್ದರೆ, ಗೋವಾದಲ್ಲಿ ಪ್ರಮೋದ್‌ ಸಾವಂತ್‌ ಮೇಲೇ ಕೇಂದ್ರ ಮತ್ತು ರಾಜ್ಯದ ಶಾಸಕಾಂಗ ಪಕ್ಷ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಅವರನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಿದೆ. ಉತ್ತರಾಖಂಡದ ನೂತನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪುಷ್ಕರ್‌ ಸಿಂಗ್‌ ಧಾಮಿ ಅವರನ್ನೇ ಮುಖ್ಯಮಂತ್ರಿಯಾಗಿ ಮರು ಆಯ್ಕೆ ಮಾಡಲಾಗಿದೆ. ತನ್ಮೂಲಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರೂ ಪುಷ್ಕರ್‌ ಸಿಂಗ್‌ ಮತ್ತೆ ಮುಖ್ಯಮಂತ್ರಿ ಹುದ್ದೆಗೆ ಏರಿದ್ದಾರೆ.

ಉತ್ತರಾಖಂಡದಲ್ಲಿ ಸತತ 2ನೇ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. 21 ವರ್ಷಗಳ ರಾಜ್ಯದ ಇತಿಹಾಸದಲ್ಲಿ 2ನೇ ಬಾರಿ ಅಧಿಕಾರ ಪಡೆದ ಮೊದಲ ಆಡಳಿತಾರೂಢ ಪಕ್ಷ ಎಂಬ ಇತಿಹಾಸ ಸೃಷ್ಟಿಸಿದೆ. ಆದರೆ ಹಾಲಿ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಖಟಿಮಾ ಕ್ಷೇತ್ರದಿಂದ 6,500 ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. ಇದು ಬಿಜೆಪಿಗೆ ತೀವ್ರ ಮುಜುಗರ ತಂದಿತ್ತು. ಹೀಗಾಗಿ ರಾಜ್ಯದಲ್ಲಿ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ತೀವ್ರ ಕುತೂಹಲ ಸೃಷ್ಟಿಯಾಗಿತ್ತು. ಮುಖ್ಯಮಂತ್ರಿ ಧಾಮಿ, ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಮತ್ತು ತ್ರಿವೇಂದ್ರ ಸಿಂಗ್‌ ರಾವತ್‌ ನಡುವೆ ತೀವ್ರ ಪೈಪೋಟಿಯೂ ಆರಂಭವಾಗಿತ್ತು.

ಇದನ್ನೂ ಓದಿಕ್ರಿಕೆಟಿಗ ಹರ್ಭಜನ್‌ ಸೇರಿ ಐವರು ಆಪ್‌ನಿಂದ ರಾಜ್ಯಸಭೆಗೆ

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೂಚನೆ ಮೇರೆಗೆ ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪುಷ್ಕರ್‌ ಧಾಮಿ ಮುಖ್ಯಮಂತ್ರಿಯಾಗಿ ಪುನರಾಯ್ಕೆಯಾಗಿದ್ದಾರೆ. ಚುನಾವಣೆಗೂ ಕೆಲವೇ ತಿಂಗಳ ಮುನ್ನ ಸಂದಿಗ್ಧ ಕಾಲದಲ್ಲಿ ಅಧಿಕಾರಕ್ಕೇರಿದ್ದರೂ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ಪುಷ್ಕರ್‌ ಧಾಮಿ ಅವರಿಗೆ ಮತ್ತೊಂದು ಅವಕಾಶ ನೀಡಿದೆ.

ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಧಾಮಿ ಅವರನ್ನು ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿಗೆ ಹೋಲಿಸಿ, ‘ಧಾಮಿ ಒಳ್ಳೆಯ ಫಿನಿಶ್ಶರ್‌. ಬಿಜೆಪಿ ಗೆಲ್ಲಲು ಬೇಕಾದ ಓಟು ತರುವ ಶಕ್ತಿ ಹೊಂದಿದ್ದಾರೆ. ಧಾಮಿ ಮುಖ್ಯಮಂತ್ರಿಯಾಗಿ ಪಟ್ಟು ಬಿಡದೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಇವರು ಟೆಸ್ಟ್‌ ಮ್ಯಾಚ್‌ ಆಡುವ ಅಗತ್ಯವೂ ಇದೆ’ ಎಂದು ಹೇಳಿದ್ದರು.

ಧಮಿ ಹಿನ್ನೆಲೆ: ಉತ್ತರಾಖಂಡದ ಗಡಿ ಜಿಲ್ಲೆ ಪಿತೋರ್‌ಗಢದವರಾದ ಪುಷ್ಕರ್‌ ಸಿಂಗ್‌ ಧಾಮಿ ಮಾಜಿ ಯೋಧರೊಬ್ಬರ ಮಗ. 1990-1999ರ ವರೆಗೆ ಎಬಿವಿಪಿಯಲ್ಲಿ ಹಲವು ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು. 2 ಬಾರಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು. 2 ಬಾರಿ ಶಾಸಕರಾಗಿ ಯುವ ಮುಖಂಡರಾಗಿದ್ದಾಗಲೇ ಸಾಕಷ್ಟುಹೆಸರು ಗಳಿಸಿದ್ದಾರೆ. 

ಈ ನಡುವೆ 2021ರಲ್ಲಿ ತೀರ್ಥ ಸಿಂಗ್‌ ರಾವತ್‌ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಪುಷ್ಕರ್‌ ಸಿಂಗ್‌ ಧಾಮಿ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಮೂಲಕ 45 ವರ್ಷಕ್ಕೇ ಮುಖ್ಯಮಂತ್ರಿಯಾದ ಮೊದಲಿಗರೆನಿಸಿಕೊಂಡಿದ್ದರು. ಧಾಮಿ ಲಖನೌ ವಿಶ್ವವಿದ್ಯಾಲಯದಲ್ಲಿ ಎಚ್‌ಆರ್‌ ಮ್ಯಾನೇಜ್‌ಮೆಂಟ್‌ ಮತ್ತು ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಸತತ 2ನೇ ಬಾರಿ ಮಣಿಪುರ ಸಿಎಂ ಆಗಿ ಬಿರೇನ್‌ ಪ್ರಮಾಣ:  ಸತತ 2ನೇ ಬಾರಿಗೆ ಹಾಗೂ ಮಣಿಪುರದ 12ನೇ ಮುಖ್ಯಮಂತ್ರಿಯಾಗಿ ಎನ್‌.ಬಿರೇನ್‌ರೆನ್‌ ಸಿಂಗ್‌ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಲಾ ಗಣೇಶನ್‌ ಅವರು ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಯಾಗಿದ್ದ ತೋಂಗಮ್‌ ಬಿಸ್ವಜಿತ್‌ ಅವರನ್ನು ಸಚಿವರಾಗಿ ನೇಮಕ ಮಾಡಲಾಯಿತು. 

ಇದನ್ನೂ ಓದಿ: UP New CM ಯೋಗಿ ಪ್ರಮಾಣವಚನಕ್ಕೆ ಬರುವವರಿಗೆ ಪೂಜೆ,ಬಾವುಟ ಕಡ್ಡಾಯ!

ಬಿರೇನ್‌ ಸಿಂಗ್‌ ಅವರನ್ನು ಭಾನುವಾರ ನಡೆದ ಶಾಸಕಾಂಗ ಸಭೆಯಲ್ಲಿ ಅವಿರೋಧವಾಗಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು. 60 ಸ್ಥಾನಗಳ ಮಣಿಪುರ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 32 ಸ್ಥಾನಗಳಲ್ಲಿ ಜಯಗಳಿಸಿತ್ತು

ಗೋವಾಕ್ಕೆ ಮತ್ತೆ ಸಾವಂತ್‌ ಸಿಎಂ: ಗೋವಾ ಬಿಜೆಪಿ ಶಾಸಕಾಂಗ ಸಭೆಯು ಸೋಮವಾರ ಪ್ರಮೋದ್‌ ಸಾವಂತ್‌ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಪುನರಾಯ್ಕೆ ಮಾಡಿದೆ. ತನ್ಮೂಲಕ ಸಾವಂತ್‌ ಸತತ ಎರಡನೇ ಬಾರಿ ರಾಜ್ಯ ಮುಖ್ಯಮಂತ್ರಿ ಹುದ್ದೆಗೆ ಏರಲಿದ್ದಾರೆ. 

ಪಣಜಿಯಲ್ಲಿ ನಡೆದ ಸಭೆಯಲ್ಲಿ ನೂತನ ಶಾಸಕರು ಮತ್ತು ಪಕ್ಷದ ಹಿರಿಯ ನಾಯಕರು ಸಾವಂತ್‌ ಹೆಸರನ್ನು ಅಂತಿಮಗೊಳಿಸಿದರು. ಸಭೆಯಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್‌ ರಾವತ್‌, ಎಲ್‌.ಮುರುಗಂ, ವಿಧಾನಸಭಾ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್‌ ಮುಂತಾದವರು ಪಾಲ್ಗೊಂಡಿದ್ದರು. ಒಟ್ಟು 40 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ರಾಜ್ಯದಲ್ಲಿ ಸರ್ಕಾರ ರಚನೆಗೆ 21 ಸ್ಥಾನಗಳ ಅಗತ್ಯವಿದೆ.

20 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಇಬ್ಬರು ಎಂಜಿಪಿ ಶಾಸಕರು, ಮೂವರು ಸ್ವತಂತ್ರ ಶಾಸಕರ ಬೆಂಬಲ ಪಡೆದು ಸರ್ಕಾರ ರಚನೆಗೆ ಸಿದ್ಧವಾಗಿದೆ. ಈ ನಡುವೆ ಗೋವಾ ರಾಜ್ಯಪಾಲ ಪಿ.ಎಸ್‌.ಶ್ರೀಧರನ್‌ ಪಿಳೈ ಅವರು ಸರ್ಕಾರ ರಚಿಸಲು ಸಾವಂತ್‌ ಅವರನ್ನು ಆಹ್ವಾನಿಸಿದ್ದಾರೆ.

ಪ್ರಮೋದ್‌ ಸಾವಂತ್‌ ಹಿನ್ನೆಲೆ: ಆರ್‌ಎಸ್‌ಸ್‌ನೊಂದಿಗೆ ನಿಟಕ ಸಂಪರ್ಕ ಹೊಂದಿರುವ 48 ವರ್ಷದ ಸಾವಂತ್‌ ಅವರ ರಾಜಕೀಯ ವೃತ್ತಿ ಬದುಕು ಆರಂಭವಾಗಿದ್ದು 2008ರಲ್ಲಿ. ಅನಂತರ ಉತ್ತರ ಗೋವಾದ ಸಂಖಾಲಿಂ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2017ರಲ್ಲಿ ಗೋವಾ ವಿಧಾನಸಭೆಯ ಸಭಾಪತಿಯಾಗಿಯೂ ಆಯ್ಕೆಯಾಗಿದ್ದರು. ಬಳಿಕ 2019ರಲ್ಲಿ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಸಾವಂತ್‌ ಆಯುರ್ವೇದದಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು