
ಪಂಜಾಬ್, ಜಮ್ಮುಕಾಶ್ಮೀರ ಹಾಗೂ ಉತ್ತರ ಪ್ರದೇಶದಲ್ಲಿ ಮಳೆಯ ರುದ್ರನರ್ತನಕ್ಕೆ ಹಳ್ಳಕೊಳ್ಳ ನದಿಗಳು ತುಂಬಿ ಹರಿಯುತ್ತಿದ್ದು, ಹಸುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಮನಕಲುಕುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನಿನ್ನೆಯಷ್ಟೇ ನಮ್ಮ ರಾಜ್ಯದ ಹೇಮಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗಿದ್ದರಿಂದ ಮೇಯಲು ಬಿಟ್ಟ ಹಸುಗಳು ನಡುಗಡ್ಡೆಯಲ್ಲಿ ಸಿಲುಕಿದ್ದವು, ಆ ಹಸುಗಳನ್ನು ಕ್ರೇನ್ ಬಳಸಿ ಏರ್ ಲಿಫ್ಟ್ ಮಾಡಲಾಗಿತ್ತು. ಆದರೆ ಈಗ ಪಂಜಾಬ್‌ನಲ್ಲಿ ಒಮ್ಮಿಂದೊಮ್ಮೆಲೆ ನದಿ ಉಕ್ಕಿ ಹರಿದಿದ್ದರಿಂದ ಹಸುಗಳು ಕೊಚ್ಚಿ ಹೋಗುತ್ತಿರುವ ದೃಶ್ಯ ನೋಡುಗರ ಕಣ್ಣಂಚ್ಚನ್ನು ತೇವಗೊಳಿಸಿದೆ.
ಉಕ್ಕಿ ಹರಿದ ನದಿಯಲ್ಲಿ ಕೊಚ್ಚಿ ಹೋದ ಎಮ್ಮೆ, ಹಸುಗಳು
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈ ಬಾರಿಯ ಮಳೆ ಹಲವು ಅವಾಂತರಗಳನ್ನೇ ಸೃಷ್ಟಿಸಿದೆ. ಕೆಲವು ಕಡೆಗಳಲ್ಲಿ ಗ್ರಾಮಕ್ಕೆ ಗ್ರಾಮವೇ ಕೊಚ್ಚಿ ಹೋಗಿದೆ ಹೀಗಿರುವಾಗ ಜಾನುವಾರುಗಳು ರಕ್ಷಣೆಯನ್ನು ಮಾಡುವುದಾದರು ಯಾರು? ಪ್ರವಾಹ ಪೀಡಿತ ಸ್ಥಳಗಳ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಹೃದಯ ಬಿರಿಯುವಂತೆ ಮಾಡುತ್ತಿವೆ. ಹಾಗೆಯೇ ಈಗ ಪಂಜಾಬ್‌ನಿಂದ ಬಂದ ವೀಡಿಯೋವೊಂದರಲ್ಲಿ ಎಮ್ಮೆಗಳು ಹಾಗೂ ಹಸುಗಳು ಉಕ್ಕಿ ಹರಿಯುತ್ತಿರುವ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದು, ದಡ ಸೇರುವುದಕ್ಕೆ ಯತ್ನಿಸುತ್ತಿರುವ ದೃಶ್ಯ ಜನರ ಕಣ್ಣಾಲಿಗಳನ್ನು ತೇವಗೊಳಿಸುತ್ತಿದೆ.
ವೀಡಿಯೋ ನೋಡಿದ ಅನೇಕರು ಮಾನವ ನಿರ್ಮಿತ ಅಪರಾಧಗಳನ್ನು ಮೂಕಪ್ರಾಣಿಗಳು ಅನುಭವಿಸಬೇಕಾಗಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲಿ ಭಾರೀ ಮಳೆಯಿಂದಾಗಿ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಪಂಜಾಬ್‌ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ವರದಿಯ ಪ್ರಕಾರ, ಪಂಜಾಬ್‌ನಲ್ಲಿ 1,000 ಕ್ಕೂ ಹೆಚ್ಚು ಹಳ್ಳಿಗಳು ಮತ್ತು 61,000 ಹೆಕ್ಟೇರ್‌ಗೂ ಹೆಚ್ಚು ಕೃಷಿಭೂಮಿ ಪ್ರವಾಹದಿಂದಾಗಿ ಹಾನಿಗೊಳಗಾಗಿದೆ. ಎನ್‌ಡಿಆರ್‌ಎಫ್, ಸೇನೆ, ಬಿಎಸ್‌ಎಫ್ ಮತ್ತು ಜಿಲ್ಲಾ ಅಧಿಕಾರಿಗಳ ಸಂಯೋಜಿತ ಪ್ರಯತ್ನದ ಮೂಲಕ ಇಲ್ಲಿಯವರೆಗೆ 11,330 ಜನರನ್ನು ಪ್ರವಾಹ ಪೀಡಿತ ಸ್ಥಳದಿಂದ ಸ್ಥಳಾಂತರಿಸಿ ರಕ್ಷಿಸಲಾಗಿದೆ.
ಆಂಗ್ಲ ಮಾಧ್ಯಮ ಟೈಮ್ಸ್ ನೌ ಇನ್ಸ್ಟಾಪೇಜ್‌ನಲ್ಲಿ ಈ ಮನಕಲುಕುವ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಪಂಜಾಬ್‌ನ ಪ್ರವಾಹದಿಂದ ಹಾನಿಗೊಳಗಾದ ಭೂಪ್ರದೇಶದಿಂದ, ಎಮ್ಮೆಗಳು ಮತ್ತು ದನಗಳು ಸುರಕ್ಷಿತ ಸ್ಥಳ ತಲುಪುವುದಕ್ಕೆ ಹೆಣಗಾಡುತ್ತಿರುವುದನ್ನು ಸೆರೆಹಿಡಿಯುವ ಒಂದು ಭಯಾನಕ ವೀಡಿಯೊ, ಈ ಪ್ರಾಣಿಗಳ ಪ್ರತಿಯೊಂದು ಚಲನೆಯು ಉಳಿವಿಗಾಗಿ ಅವುಗಳು ಮಾಡುತ್ತಿರುವ ಹೋರಾಟಕ್ಕೆ ಸಾಕ್ಷಿಯಾಗಿದೆ ಎಂದು ಬರೆದು ಪೋಸ್ಟ್ ಮಾಡಲಾಗಿದೆ.
ಈ ಮಾನವ ನಿರ್ಮಿತ ವಿಪತ್ತುಗಳಲ್ಲಿ ಪ್ರಾಣಿಗಳ ಪಾಲಿಲ್ಲ, ಆದರೂ ಅವುಗಳು ಅತ್ಯಂತ ಹೆಚ್ಚು ಸಂಕಷ್ಟ ಅನುಭವಿಸುವಂತಾಗಿದೆ. ಏಕೆಂದರೆ ಮನುಷ್ಯರಷ್ಟು ಸುಲಭವಾಗಿ ಅವುಗಳಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಇದು ನೋಡಲು ತುಂಬಾ ದುಃಖಕರವಾಗಿದೆ. ಜನರು ಇದರಿಂದ ಹೇಗೆ ಖುಷಿ ಆಗಿರಲು ಸಾಧ್ಯ, ಜನರು ಶೀಘ್ರದಲ್ಲೇ ಈ ಬಡ ಪ್ರಾಣಿಗಳಿಗೆ ಏನಾದರೂ ಸಹಾಯ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಪ್ರವಾಹದ ನೀರಿನಲ್ಲಿ ತೇಲಿ ಬಂತು ಚಿರತೆ ಶವ:
ಇಂತಹದ್ದೇ ಮತ್ತೊಂದು ಪ್ರವಾಹ ಸಂಬಂಧಿ ವೀಡಿಯೋದಲ್ಲಿ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ ಚಿರತೆಯ ಶವವೊಂದು ಪ್ರವಾಹದ ನೀರಿನಲ್ಲಿ ತೇಲಿ ಬರುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಹೃದಯವನ್ನು ತೇವಗೊಳಿಸಿದೆ. ವೀಡಿಯೋದಲ್ಲಿ ಕಲ್ಲು ಮಣ್ಣು ಮರದ ತುಂಡುಗಳನ್ನು ತನ್ನೊಂದಿಗೆ ಹೊತ್ತು ತರುತ್ತಿರುವ ಪ್ರವಾಹದ ನೀರಿನಲ್ಲಿ ಚಿರತೆಯ ಶವವೂ ತೇಲಿ ಬರುವುದನ್ನು ಕಾಣಬಹುದಾಗಿದೆ. ಈ ವೀಡಿಯೋವನ್ನು ಉತ್ತರಾಖಂಡ್ ಸಿಎಂ ವಿಶೇಷ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಡಾ. ಪಿ.ಎಂ. ಧಾಕಾಟೆ ಎಂಬುವವರು ಪೋಸ್ಟ್ ಮಾಡಿದ್ದಾರೆ. 31 ಸೆಕೆಂಡ್‌ನ ವೀಡಿಯೋದಲ್ಲಿ ಚಿರತೆಯೊಂದರ ಶವ ತೇಲಿ ಬರುವುದನ್ನು ಕಾಣಬಹುದು. ಉತ್ತರಾಖಂಡ ಮತ್ತು ಹಿಮಾಲಯದಲ್ಲಿ ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಚಿರತೆಯೊಂದು ಮುಳುಗಿ ಸಾವನ್ನಪ್ಪಿದೆ. ಪ್ರಕೃತಿಯ ಶಕ್ತಿ ಅಪಾರ ವನ್ಯಜೀವಿಗಳ ಸುರಕ್ಷತೆಯ ಬಗ್ಗೆ ಎಚ್ಚರವಿರಲಿ ಎಂದು ಅವರು ಬರೆದಿದ್ದಾರೆ. ಈ ವೀಡಿಯೋವನ್ನು 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಈ ದೃಶ್ಯ ಅನೇಕರ ಕಣ್ಣನ್ನು ತೇವಗೊಳಿಸಿದೆ.
ಇದನ್ನೂ ಓದಿ: ಪ್ರವಾಸಿಗರ ಗೇಲಿ ಮಾಡ್ತಿದ್ದ ಗಿಳಿಗಳು: ಗಿಳಿಗಳ ಕೆಟ್ಟ ಮಾತು ಕೇಳಲಾಗದೇ ಪ್ರತ್ಯೇಕಗೊಳಿಸಿದ ಝೂ ಸಿಬ್ಬಂದಿ..
ಇದನ್ನೂ ಓದಿ: ಶೋಕಕ್ಕೆ ತಿರುಗಿದ ಓಣಂ ಸಂಭ್ರಮಾಚರಣೆ: ಡಾನ್ಸ್ ಮಾಡುತ್ತಲೇ ಕುಸಿದು ಬಿದ್ದು ವಿಧಾನಸಭೆ ನೌಕರ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ