
ಮಧ್ಯಪ್ರದೇಶ: ಭಾರತದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯಿಂದ ಆರಂಭಿಸಲಾದ ಯೋಜನೆ ‘ಪ್ರಾಜೆಕ್ಟ್ ಚೀತಾ’ಗೆ ಯಶಸ್ವಿಯಾಗಿ 4 ವರ್ಷಗಳನ್ನು ಪೂರೈಸಿದೆ. ಭಾರತ ಕಾಡುಗಳಲ್ಲಿ ಏಳು ದಶಕಗಳ ಹಿಂದೆ ಇದ್ದ ಚೀತಾ ಎಂಬ ಸುಂದರ ಪ್ರಾಣಿಯನ್ನು ಮರಳಿ ಭಾರತಕ್ಕೆ ತರುವ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದ್ದು, ಭಾರತಕ್ಕೆ ತರಲಾದ ಚೀತಾಗಳ ಸಂಖ್ಯೆ, ಇದೀಗ ದೇಶದಲ್ಲೇ ಜನಿಸಿದ 32 ಮರಿಗಳು ಸೇರಿದಂತೆ ಬೃಹತ್ 52 ಕ್ಕೆ ಏರಿಕೆಯಾಗಿದೆ.
ಸೆಪ್ಟೆಂಬರ್ 17, 2022 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾದಿಂದ ತರಲಾಗಿದ್ದ 8 ಕಾಡು ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದ ಆವರಣಕ್ಕೆ ಬಿಡುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದರು. ನಂತರ ದಕ್ಷಿಣ ಆಫ್ರಿಕಾ ಹಾಗೂ ಬೋಟ್ಸ್ವಾನಾದಿಂದಲೂ ಚೀತಾಗಳನ್ನು ತರಲಾಯಿತು. ಪ್ರಸ್ತುತ ದೇಶದಲ್ಲಿರುವ 52 ಚೀತಾಗಳ ಪೈಕಿ 49 ಚೀತಾಗಳು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿದ್ದರೆ, 3 ಚೀತಾಗಳು ಗಾಂಧಿ ಸಾಗರ್ ಅಭಯಾರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿವೆ.
ಕುನೋ ಉದ್ಯಾನವನದಲ್ಲಿರುವ 49 ಚೀತಾಗಳ ಪೈಕಿ 17 ಮುಕ್ತ ಕಾಡಿನಲ್ಲಿದ್ದರೆ ಇದರಲ್ಲಿ 10 ಗಂಡು ಮತ್ತು 7 ಹೆಣ್ಣು ಚೀತಾಗಳು, ಉಳಿದ 32 ಚೀತಾಗಳು ಸಾಫ್ಟ್ ರಿಲೀಸ್ ಆವರಣದಲ್ಲಿವೆ. ಮುಂದಿನ ಹಂತದಲ್ಲಿ ಇವುಗಳಿಗೆ ಸೂಕ್ತವಾದ ವಿಶಾಲ ಆವಾಸಸ್ಥಾನವನ್ನು ಕಲ್ಪಿಸುವ ಭಾಗವಾಗಿ ಗಾಂಧಿ ಸಾಗರ್ ಅಭಯಾರಣ್ಯಕ್ಕೂ ವಿಸ್ತರಿಸಲಾಗುತ್ತಿದೆ. ನಮೀಬಿಯಾ, ದಕ್ಷಿಣ ಆಫ್ರಿಕಾ ಮತ್ತು ಬೋಟ್ಸ್ವಾನಾ ದೇಶಗಳ ಸಹಯೋಗದೊಂದಿಗೆ ಆರಂಭವಾದ ಈ ಯೋಜನೆಯು ಭಾರತದಲ್ಲಿ ವನ್ಯಜೀವಿ ಸಂರಕ್ಷಣೆಯ ಹೊಸ ಶಕೆಗೆ ನಾಂದಿ ಹಾಡಿದೆ.
ಸಾವಿರಾರು ವರ್ಷಗಳ ಕಾಲ ಚೀತಾ ಭಾರತದ ಕಾಡನ್ನು ಆಳುತ್ತಿತ್ತು. ಆದರೆ ಬ್ರಿಟಿಷರಿಂದ ಸ್ವತಂತ್ರವಾಗುತ್ತಿದ್ದ 1947ರ ಸಮಯದಲ್ಲಿ ಭಾರತದಲ್ಲಿ ಕೇವಲ 3 ಜೀತಾಗಳು ಉಳಿದಿದ್ದವು. ಚತ್ತೀಸ್‌ಗಢದ ಆಗಿನ ಮಹಾರಾಜ ಅಲ್ಲಿನ ಕಾಡಲ್ಲಿದ್ದ 3 ಚೀತಾಗಳನ್ನು ಗುಂಡಿಟ್ಟು ಕೊಂದ ಬಳಿಕ ಅದೇ ಲಾಸ್ಟ್ ಮತ್ತೆ ಭಾರತದ ಕಾಡುಗಳಲ್ಲಿ ಚೀತಾ ಮರೆಯಾಗಿ ಹೋಯ್ತು. 16 ಹಾಗೂ 17ನೇ ಶತಮಾನದ ಮೊಗಲ್ ದೊರೆಗಳು ಚೀತಾಗಳನ್ನು ಸಾಕುತ್ತಿದ್ದರು. ಇನ್ನು ಅಕ್ಬರ್ ದೊರೆ ಬೇಟೆಯಾಡುವ ಮೋಜಿನಿಂದ 1000 ಚೀತಾಗಳನ್ನು ಸಾಕಿದ್ದ ಎಂಬ ಉಲ್ಲೇಖವಿದೆ. ಆದರೆ ಬಳಿಕ ಬಂದ ಬ್ರಿಟೀಷರು ಇವುಗಳನ್ನು ಹುಡುಕಿ ಹುಡುಕಿ ಕೊಂದರು. ಅಂದಿನ ರಾಜರುಗಳು ತಮ್ಮ ಸಿಂಹಾಸನಕ್ಕೆ ಇದರ ಚರ್ಮವನ್ನು ಬಳಸುತ್ತಿದ್ದರು. ಭಾರತದಲ್ಲಿ 1952ರಲ್ಲಿ ಚೀತಾ ಅಳಿದು ಹೋಗಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಯ್ತು.
ಚೀತಾದಲ್ಲಿ ಆಫ್ರೀಕಾ ಮತ್ತು ಏಷ್ಯಾ ಎಂಬ ಎರಡು ಪ್ರಭೇದಗಳಿವೆ. ಇವುಗಳಿಗೆ ಕೆಲವು ಸೂಕ್ಷ್ಮ ವ್ಯತ್ಯಾಸಗಳಿವೆ. ಈ ಭೂಮಿಯ ಮೇಲೆ 7000 ಕ್ಕೂ ಹೆಚ್ಚು ಚೀತಾಗಳು ಇರಬಹುದೆಂದು ಅಂದಾಜಿಸಲಾಗಿದೆ. ಇದು ಗಂಟೆಗೆ ಸುಮಾರು 115 ಕಿಲೋಮೀಟರ್ ವೇಗದಲ್ಲಿ ಓಡುತ್ತದೆ. ಹೀಗಾಗಿ ಭೂಮಿಯ ಮೇಲೆ ಓಡುವ ಅತ್ಯಂತ ವೇಗದ ಪ್ರಾಣಿಯಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ