
ನವದೆಹಲಿ: ಟಾಟಾದ ಮಾತೃ ಸಂಸ್ಥೆಯಾದ 'ಟಾಟಾ ಸನ್ಸ್' ಮಂಡಳಿಯು ಎನ್ ಚಂದ್ರಶೇಖರನ್ ಅವರನ್ನು ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಮರುನೇಮಕ ಮಾಡಲು ಒಪ್ಪಿಗೆ ಸೂಚಿಸಿದೆ. ತಾವು ಮೂರನೇ ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಎನ್. ಚಂದ್ರಶೇಖರನ್ ಅವರು ಕಳೆದ ಆಗಸ್ಟ್‌ನಲ್ಲಿ ಘೋಷಿಸಿದ ಒಂದು ತಿಂಗಳಲ್ಲೇ ಈ ಬೆಳವಣಿಗೆ ನಡೆದಿರುವುದು ಬಾರೀ ಕುತೂಹಲಕ್ಕೆ ಕಾರಣವಾಗಿದೆ.
ಟಾಟಾ ಗ್ರೂಪ್‌ನಲ್ಲಿ ಐಪಿಒ ಪಟ್ಟಿ ಮಾಡುವ ವಿಷಯದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ ಗುರುವಾರ ಸುಮಾರು ಮೂರು ಗಂಟೆಗಳ ಕಾಲ ಮಂಡಳಿಯ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಚಂದ್ರಶೇಖರನ್ ಅವರನ್ನು ಮರಳಿ ನೇಮಕಾತಿ ಮಾಡುವ ಬಗ್ಗೆ ಮಂಡಳಿಯು ಒಪ್ಪಿಗೆ ಸೂಚಿಸಿತು. ಆದರೆ, ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಅವರು ಈ ನಿರ್ಧಾರದ ವೇಳೆ ಮತ ಚಲಾಯಿಸದೆ ಹೊರಗುಳಿದಿದ್ದಾರೆ ಎಂದು ವರದಿ ತಿಳಿಸಿದೆ.
ಈ ಹಿಂದೆಯೂ ಎನ್ ಚಂದ್ರಶೇಖರನ್ ಮರು ಆಯ್ಕೆಗೆ ಟಾಟಾ ಸನ್ಸ್ ಷೇರ್ ಹೋಲ್ಡರ್ಸ್ ಮುಂದಾಗಿದ್ದರು. ಆದರೆ ರತನ್ ಟಾಟಾ ನಿಧನದ ಬಳಿಕ ಟಾಟಾ ಟ್ರಸ್ಟ್ ಅದ್ಯಕ್ಷ ಸ್ಥಾನ ಅಲಂಕರಿಸಿರುವ ನೋಯೆಲ್ ಟಾಟಾ ಅವರು ಚಂದ್ರಶೇಖರ್ ಅವರಿಂದಾಗಿ ಸಾಲದ ಪ್ರಮಾಣ ಜಾಸ್ತಿ ಆಗಿದೆ ಎಂದು ಮರು ಆಯ್ಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ಅಸಮಾಧಾನ ಭುಗಿಲೇಳುತ್ತಿದ್ದಂತೆಯೇ ಎನ್ ಚಂದ್ರಶೇಖರನ್ ದಿಢೀರ್ ರಾಜೀನಾಮೆ ನೀಡಿ ಫೆಬ್ರವರಿ 2027ರ ವರೆಗೆ ಮಂದುವರಿಯುವುದಾಗಿ ತಿಳಿಸಿದ್ದರು. ಇದೀಗ ಮಂಡಳಿಯ ಸಭೆಯಲ್ಲಿ ಹಾಲಿ ಅಧ್ಯಕ್ಷರನ್ನೇ ಮುನ್ನಡೆಸುವ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.
ಸೆಪ್ಟೆಂಬರ್ 2022 ರಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಟಾಟಾ ಸನ್ಸ್ ಅನ್ನು ಮೇಲ್ಮಟ್ಟದ ಬ್ಯಾಂಕೇತರ ಹಣಕಾಸು ಸಂಸ್ಥೆ (NBFC-Upper Layer) ಎಂದು ವರ್ಗೀಕರಿಸಿ, ಮೂರು ವರ್ಷಗಳ ಒಳಗಾಗಿ ಷೇರು ಮಾರುಕಟ್ಟೆಯಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಲು ಸೂಚನೆ ನೀಡಿತ್ತು. ಇದನ್ನು ತಪ್ಪಿಸಲು ಟಾಟಾ ಸನ್ಸ್ ತನ್ನ ಸಾಲವನ್ನು ತೀರಿಸಿ ಎನ್‌ಬಿಎಫ್‌ಸಿ ನೋಂದಣಿಯನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಿತ್ತು. ಆದರೆ, ಆರ್‌ಬಿಐ ಸೆಪ್ಟೆಂಬರ್ 11, 2026 ರಂದು ಈ ಅರ್ಜಿಯನ್ನು ತಿರಸ್ಕರಿಸಿ, ತಕ್ಷಣವೇ ಐಪಿಒ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಸೂಚಿಸಿದೆ.
ಶೇ. 66 ರಷ್ಟು ಪಾಲುದಾರಿಕೆ ಹೊಂದಿರುವ ಟಾಟಾ ಟ್ರಸ್ಟ್ಸ್ ಐಪಿಒ ತರುವುದನ್ನು ವಿರೋಧಿಸುತ್ತಿದ್ದರೆ, ಶೇ. 18.4 ರಷ್ಟು ಪಾಲುದಾರಿಕೆ ಹೊಂದಿರುವ ಶಾಪೂರ್ಜಿ ಪಲ್ಲೊಂಜಿ ಗ್ರೂಪ್ ಷೇರು ಮಾರುಕಟ್ಟೆಗೆ ಪ್ರವೇಶಿಸುವುದನ್ನು ಬೆಂಬಲಿಸುತ್ತಿದೆ.
ಸಂಸ್ಥೆಯು ಶೀಘ್ರದಲ್ಲೇ ಶೇರು ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆ ಇರುವುದರಿಂದ, ನಾಯಕತ್ವದ ಸ್ಥಿರತೆಯು ಹೂಡಿಕೆದಾರರಲ್ಲಿ ಧೈರ್ಯ ತುಂಬಲಿದೆ ಎಂದು ಮಂಡಳಿಯ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಚಂದ್ರಶೇಖರನ್ ಅವರ ಪ್ರಸ್ತುತ ಅವಧಿ ಫೆಬ್ರವರಿ 2027 ಕ್ಕೆ ಮುಕ್ತಾಯಗೊಳ್ಳಲಿದ್ದು, ಮುಂದಿನ ಹಂತದ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಅವರ ಅನುಭವ ಅತ್ಯಗತ್ಯ ಎಂದು ಮಂಡಳಿ ನಿರ್ಧರಿಸಿ ಮತ್ತೆ ಅಧ್ಯಕ್ಷರನ್ನಾಗಿ ಮುಂದುವರೆಸಲು ತೀರ್ಮಾನಿಸಿದೆ.
ನಿಧನರಾಗಿರುವ ರತನ್ ಟಾಟಾ ಕಾಲದಿಂದಲೂ ಎನ್ ಚಂದ್ರಶೇಖರನ್ ಟಾಟಾ ಸನ್ಸ್ ಸಂಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರ ಅನುಭವ ಹಾಗೂ ಸಾಮರ್ಥ್ಯ ಟಾಟಾ ಸನ್ಸ್ ಕಂಪನಿಗೆ ಅಗತ್ಯ ಎಂಬುದು ಶೇರುದಾರರ ಅಭಿಪ್ರಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ