
ನಾಶಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಡ್ ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಮುನಿಸಿಪಾಲಿಟಿ ವಿಫಲವಾಗಿದೆ ಎಂದು ಆರೋಪಿಸಿ ಶಿವಸೇನೆ ಯುವಸೇನಾ ಕಾರ್ಯಕರ್ತರು ವಿಶಿಷ್ಟ ಪ್ರತಿಭಟನೆ ನಡೆಸಿದ್ದಾರೆ. ಯುವಸೇನಾ ಜಿಲ್ಲಾ ಮುಖ್ಯಸ್ಥ ವಿಕ್ರಮ್ ರಾಂಧವೆ ಹಾಗೂ ಅವರ ಬೆಂಬಲಿಗರು ನಿಫಡ್ ನಗರ ಪಂಚಾಯತ್‌ನ ಮುಖ್ಯ ಅಧಿಕಾರಿ ಧೀರಜ್ ಭಮ್ರೆ ಅವರ ಕಚೇರಿಯೊಳಗೆ ನುಗ್ಗಿ, ಅವರ ಮೇಜಿನ ಮೇಲೆಯೇ 4-5 ಬೀದಿ ನಾಯಿಗಳನ್ನು ಗೋಣಿಯಿಂದ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿನೂತನ ಪ್ರತಿಭಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ, ಯುವಸೇನಾ ಮುಖ್ಯಸ್ಥ ವಿಕ್ರಮ್ ರಾಂಧವೆ ಅವರು ಚೀಲದಲ್ಲಿದ್ದ ಸಣ್ಣ ನಾಯಿಗಳನ್ನು ಹೊರತೆಗೆದು ಧೀರಜ್ ಭಮ್ರೆ ಅವರ ಟೇಬಲ್ ಮೇಲೆ ಬಿಡುವುದು ಕಾಣಿಣಿಸಿದೆ. ಈ ಹಠಾತ್ ನಡೆಯಿಂದ ಅಧಿಕಾರಿ ಬೆಚ್ಚಿಬಿದ್ದು, ಕುರ್ಚಿಯಿಂದ ದೂರ ಸರಿಯುತ್ತಾರೆ. ಇಷ್ಟಕ್ಕೇ ನಿಲ್ಲದ ಪ್ರತಿಭಟನಾಕಾರರು ₹20 ಮುಖಬೆಲೆಯ ನೋಟುಗಳಿಂದ ಮಾಡಿದ ಹಾರವನ್ನು ಅಧಿಕಾರಿಗೆ ತೊಡಿಸಲು ಯತ್ನಿಸಿದ್ದು, ಇದನ್ನು ಇತರ ಸಿಬ್ಬಂದಿಗಳು ತಡೆದರು.
ನಿಫಡ್ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ದ್ವಿಚಕ್ರ ವಾಹನ ಸವಾರರ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಕಳೆದ ಆರು ತಿಂಗಳಿಂದ ಇದನ್ನು ಶಮನಗೊಳಿಸಲು ಮನವಿ ಪತ್ರಗಳನ್ನು ನೀಡಿದರೂ ಆಡಳಿತವು ನಾಯಿಗಳನ್ನು ಹಿಡಿಯುವುದಾಗಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವುದಾಗಲಿ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತಿದೆ ಎಂದು ರಾಂಧವೆ ಆರೋಪಿಸಿದ್ದಾರೆ. ಜನರಿಗೆ ಭರವಸೆಗಳಲ್ಲ, ಪರಿಹಾರ ಬೇಕು ಎಂದು ಹೇಳಿದ ಅವರು, ಮುಂದಿನ ಎಂಟು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯ ನಂತರ ಮಾತನಾಡಿದ ಮುಖ್ಯ ಅಧಿಕಾರಿ ಧೀರಜ್ ಭಮ್ರೆ, ಬೀದಿ ನಾಯಿಗಳ ಸಂತಾನಹರಣ ಪ್ರಕ್ರಿಯೆ ಈಗಾಗಲೇ ಚಾಲನೆಯಲ್ಲಿದ್ದು, ಶೀಘ್ರದಲ್ಲೇ ಸಮಸ್ಯೆಗೆ ಸಂಪೂರ್ಣ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಂತು ಸದ್ಯಕ್ಕೆ ಈ ಪ್ರತಿಭಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸರಿಯಾದ ಪಾಠ ಕಲಿಸಿದ್ದೀರಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ