ಕುನೋ ಅರಣ್ಯದಲ್ಲಿ ನಮೀಬಿಯಾದ ಮತ್ತೊಂದು ಚೀತಾ ಸಾವು, 10ಕ್ಕೇರಿದ ಸಂಖ್ಯೆ!

By Suvarna NewsFirst Published Jan 16, 2024, 5:57 PM IST
Highlights

ಭಾರತದಲ್ಲಿ ನಶಿಸಿ ಹೋದ ಚೀತಾಗಳನ್ನು ಅಭಿವೃದ್ಧಪಡಿಸಲು 2022ರಲ್ಲಿ ನಮೀಬಿಯಾದಿಂದ ಚೀತಾಗಳನ್ನು ಕುನೋ ಅರಣ್ಯಕ್ಕೆ ತರಲಾಗಿದೆ. ಆದರೆ ವಾತಾವರಣ ಸೇರಿದಂತೆ ಹಲವು ಕಾರಣಗಲಿಂದ ಈ ಚೀತಾಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಇದೀಗ 10ನೇ ಚೀತಾ ಕುನೋ ಅರಣ್ಯದಲ್ಲಿ ಮೃತಪಟ್ಟಿದೆ.

ಭೋಪಾಲ್(ಜ.16) ಭಾರತದಲ್ಲಿ ಚೀತಾಗಳ ಸಂಪೂರ್ಣ ನಶಿ ಹೋಗಿದೆ. ಹೀಗಾಗಿ ಪ್ರಾಜೆಕ್ಟ್ ಚೀತಾ ಯೋಜನೆಯಡಿ ಕೇಂದ್ರ ಸರ್ಕಾರ ನಮಿಬಿಯಾದಿಂದ ಚೀತಾಗಳನ್ನು ಭಾರತಕ್ಕೆ ತಂದಿದೆ. ವಾತಾವರಣ ಸೇರಿದಂತೆ ಹಲವು ಕಾರಣಗಳಿಂದ ಕೆಲ ಚೀತಾಗಳು ಮೃತಪಟ್ಟಿದೆ. ಇದರ ನಡುವೆ ಇತ್ತೀಚೆಗೆ ಆಶಾ ಚೀತಾ 3 ಮರಿಗಳಿಗೆ ಜನ್ಮನೀಡುವ ಮೂಲಕ ಭಾರತೀಯ ಸಂತಸ ಇಮ್ಮಡಿಗೊಳಿಸಿತ್ತು. ಇದರ ಬೆನ್ನಲ್ಲೇ ಮತ್ತೊಂದು ಚೀತಾ ಮೃತಪಟ್ಟಿದೆ. ಈ ಮೂಲಕ ನಮೀಬಿಯಾದಿಂದ ತಂದು ಕುನೋ ಅಭಯಾರಣ್ಯದಲ್ಲಿ ಬಿಟ್ಟ ಚೀತಾಗಳ ಪೈಕಿ 10 ಚೀತಾಗಳು ಮೃತಪಟ್ಟಿದೆ.

ನಮೀಬಿಯಾದಿಂದ ತಂದ ಚೀತಾಗಳ ಪೈಕಿ ಶೌರ್ಯ ಚೀತಾ ಕುನೋ ಅರಣ್ಯದಲ್ಲಿ ಮೃತಪಟ್ಟಿದೆ. ಚೀತಾ ನಿಧನಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಅರಣ್ಯಾಧಿಕಾರಿಗಳು ಶೌರ್ಯ ಚೀತಾ ಕಳೇಬರಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ವರದಿಯಲ್ಲಿ ಸಾವಿನ ಕಾರಣಗಳು ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ ಆಶಾ ಚೀತಾ!

ಕುನೋ ಅರಣ್ಯದಲ್ಲಿ ಶೌರ್ಯ ಚೀತಾ ಸೇರಿದಂತೆ ಇದುವರೆಗೆ 7 ನಮೀಬಿಯಾದಿಂದ ತಂದ ಚೀತಾ ಹಾಗೂ 3 ಮರಿಗಳು ಮೃತಪಟ್ಟಿದೆ. ಇಂದು(ಜ.16) ಬೆಳಗ್ಗೆ 11 ಗಂಟೆಗೆ ಶೌರ್ಯ ಚೀತಾ ತೀವ್ರ ಬಳಲಿಕೆಯಿಂದ ಅಸ್ವಸ್ಥಗೊಂಡಿದೆ. ತಕ್ಷಣವೇ ಅಧಿಕಾರಿಗಳು ಶೌರ್ಯ ಚೀತಾದ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಬಳಿಕ ಶೌರ್ಯ ಚೀತಾವನ್ನು ವಶಕ್ಕೆ ಪಡೆದು ಚಿಕಿತ್ಸೆ ನೀಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. 3.57ರ ವೇಳೆಗೆ ಶೌರ್ಯ ಚೀತಾ ಮೃತಪಟ್ಟಿದೆ.

ಇತ್ತೀಚೆಗೆ ಆಶಾ ಚೀತಾ ಮೂರು ಮರಿಗಳಿಗೆ ಜನ್ಮ ನೀಡಿದೆ. ಸದ್ಯ ಈ ಮರಿ ಹಾಗೂ ಆಶಾ ಚೀತಾ ಆರೋಗ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  2022ರ ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ನಮೀಬಿಯಾದಿಂದ ತಂದ 8 ಚಿರತೆಗಳನ್ನು ಕುನೋ ಅರಣ್ಯಕ್ಕೆ ಬಿಟ್ಟಿದ್ದರು.  ಬಳಿಕ ಫೆಬ್ರವರಿ 2023 ರಲ್ಲಿ, ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳು ಉದ್ಯಾನವನಕ್ಕೆ ಬಂದಿದ್ದವು. ಕಳೆದ ವರ್ಷ ಮಾರ್ಚ್‌ನಲ್ಲಿ ಜ್ವಾಲಾ ಎಂಬ ಹೆಣ್ಣು ಚಿರತೆ 4 ಮುದ್ದಾದ ಮರಿಗಳಿಗೆ ಜನ್ಮ ನೀಡಿತ್ತು. ಆದಾಗ್ಯೂ, 3 ಮರಿಗಳು ವಾತಾವರಣಕ್ಕೆ ಹೊಂದಿಕೊಳ್ಳಲು ಆಗದೇ ಸಾವನ್ನಪ್ಪಿದವು. 

ಕುನೋ ಪಶುವೈದ್ಯರಿಗೆ ಚೀತಾಗಳ ಆರೈಕೆ ಗೊತ್ತಿಲ್ಲ ಎಂದ ಅಫ್ರಿಕಾದ ಪಶುವೈದ್ಯರು

ಚೀತಾಗಳ ಸಾವಿನಿಂದ ತೀವ್ರ ಟೀಕೆ ಎದುರಿಸಿದ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. ಇಷ್ಟೇ ಅಲ್ಲ ಸ್ಥಳಾಂತರ ಸಲಹೆಗಳನ್ನು ತಿರಸ್ಕರಿಸಿತ್ತು. ಚೀತಾಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಸ್ಪಷ್ಟಪಡಿಸಿದ್ದರು. 
 

click me!