Ram Mandir Timeline: 500 ವರ್ಷ ಅಯೋಧ್ಯೆ ಕಂಡಿದ್ದೇನು? ಬಾಬ್ರಿ ಮಸೀದಿಯಿಂದ ರಾಮಮಂದಿರದವರೆಗಿನ ಇತಿಹಾಸ..

By Santosh Naik  |  First Published Jan 16, 2024, 4:48 PM IST

Ayodhya Ram Temple Timeline: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ.ಕಳೆದ 500 ವರ್ಷಗಳಲ್ಲಿ ಬಹುಶಃ ಅಯೋಧ್ಯೆ ಕಂಡಷ್ಟು ರಕ್ತಪಾತ, ಹೋರಾಟ ಮತ್ತೆ ಯಾವುದೇ ಸ್ಥಳ ಕಂಡಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಿಂದಿನ ಸಂಪೂರ್ಣ ಇತಿಹಾಸ ಇಲ್ಲಿದೆ.
 


ಬೆಂಗಳೂರು (ಜ.16): ಜನವರಿ 16 ರಿಂದ ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಪೂಜೆ ಆರಂಭವಾಗಿದೆ. ಜನವರಿ 22 ರಂದು ರಾಮಲಲ್ಲಾ ಮೂರ್ತಿಯನ್ನು ಶ್ರೀರಾಮನ ಭವ್ಯ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಕಳೆದ 500 ವರ್ಷಗಳಲ್ಲಿ, ಅಯೋಧ್ಯೆಯು ಕೋಮು ಸಂಘರ್ಷದಿಂದ ಹಿಂದೂ-ಮುಸ್ಲಿಂ ಐಕ್ಯತೆಯ ಉದಾಹರಣೆಗಳವರೆಗೆ ಬಹಳಷ್ಟು ಕಂಡಿದೆ. ಬಾಬ್ರಿ ಮಸೀದಿಯಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದವರೆಗಿನ ಸಂಪೂರ್ಣ ಇತಿಹಾಸದ ವಿವರ ಇಲ್ಲಿದೆ..

  • ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ, 1528-29 ರಲ್ಲಿ, ಮೊಘಲ್ ಆಕ್ರಮಣಕಾರ ಬಾಬರ್‌ನ ಕಮಾಂಡರ್ ಮೀರ್ ಬಾಕಿ ದೇವಾಲಯದ ಮೇಲೆ ಬಾಬರಿ ಮಸೀದಿಯನ್ನು ನಿರ್ಮಾಣ ಮಾಡಿದ್ದ.
  • 1856-57ರಲ್ಲಿ ಅಯೋಧ್ಯೆಯಲ್ಲಿ ವಿವಾದಿತ ಜಾಗಕ್ಕೆ ಸಂಬಂಧಿಸಿದಂತೆ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮುಗಲಭೆ ನಡೆದಿತ್ತು. ಈ ಭೂಮಿಯ ಮೇಲೆ ಇಬ್ಬರೂ ತಮ್ಮದೇ ಆದ ಹಕ್ಕು ಮಂಡಿಸಿದ್ದರು.
  • ಆ ಸಮಯದಲ್ಲಿ ದೇಶದಲ್ಲಿ ಬ್ರಿಟಿಷರು ಆಳ್ವಿಕೆ ನಡೆಸಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಜನರನ್ನು ಸಮಾಧಾನಪಡಿಸಲು, ಬ್ರಿಟಿಷ್ ಸರ್ಕಾರವು ಒಂದು ಸೂತ್ರವನ್ನು ಕಂಡುಹಿಡಿದು,  ವಿವಾದಿತ ಸ್ಥಳದಲ್ಲಿ ಬೇಲಿಯನ್ನು ನಿರ್ಮಾಣ ಮಾಡಿತ್ತು.
  • ಇದಾದ ಬಳಿಕ ಬಾಬರಿ ಮಸೀದಿ ಸಂಕೀರ್ಣದ ಒಳ ಭಾಗದಲ್ಲಿ ಮುಸ್ಲಿಮರಿಗೆ ಹಾಗೂ ಹೊರ ಭಾಗದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಯಿತು.
  • 1858ರ ನವೆಂಬರ್‌ 30 ರಂದು ಅಂದಿನ ಅಯೋಧ್ಯಾ ಪೊಲೀಸ್‌ ಸ್ಟೇಷನ್‌ ಆಫೀಸರ್‌ ಆಗಿದ್ದ ಶೀತಲ್‌ ದುಬೇ, ವಿವಾದಿತ ಸ್ಥಳದ ವಿಚಾರವಾಗಿ ಮೊದಲ ಕೇಸ್‌ಅನ್ನು ದಾಖಲಿಸಿದ್ದರು
  • ಈ ಕೇಸ್‌ಅನ್ನು ಪಂಜಾಬ್‌ನ ನಿಹಾಂಗ್ ಸಿಖ್ ನಿವಾಸಿ ವಿರುದ್ಧ ದಾಖಲಿಸಲಾಗಿತ್ತು. ಮಸೀದಿ ಆವರಣದಲ್ಲಿ ಭಗವಾನ್ ರಾಮನ ಮೂರ್ತಿ ನಿರ್ಮಿಸಿ ಪೂಜೆ ಸಲ್ಲಿಸಿದ ಆರೋಪ ಅವರ ಮೇಲಿತ್ತು.
  • 1885 ರಲ್ಲಿ, ಮಹಾಂತ ರಘುಬರ್ ದಾಸ್ ಫೈಜಾಬಾದ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ಇದರಲ್ಲಿ ಮಸೀದಿಯ ಹೊರ ಭಾಗದಲ್ಲಿ ನಿರ್ಮಿಸಲಾಗಿರುವ ರಾಮ್ ಚಬುತ್ರಾ ಪ್ರದೇಶದಲ್ಲಿ ಮಂದಿರ ನಿರ್ಮಿಸಲು ಅನುಮತಿ ಕೋರಿದರು. ಆದಾಗ್ಯೂ, ಈ ಮೊಕದ್ದಮೆ ಮತ್ತು ಮೇಲ್ಮನವಿಯನ್ನು ವಜಾಗೊಳಿಸಲಾಯಿತು.
  • 1934 ರಲ್ಲಿ ಅಯೋಧ್ಯೆಯಲ್ಲಿ ಮತ್ತೊಮ್ಮೆ ಕೋಮುಗಲಭೆ ಸಂಭವಿಸಿತು. ಬಾಬರಿ ಮಸೀದಿಯ ಕೆಲವು ಭಾಗವನ್ನು ಕೆಡವಲಾಯಿತು. ಆದಾಗ್ಯೂ, ನಂತರ ಬ್ರಿಟಿಷ್ ಸರ್ಕಾರ ಅದನ್ನು ದುರಸ್ತಿ ಮಾಡಿತು.
  • 1949ರ ಡಿಸೆಂಬರ್ 22-23 ರಂದು, ಸುಮಾರು 60 ಜನರ ಗುಂಪು ರಾತ್ರಿಯ ವೇಳೆ ಮಸೀದಿಯನ್ನು ಪ್ರವೇಶಿಸಿತು ಮತ್ತು ಮುಖ್ಯ ಗುಮ್ಮಟದ ಕೆಳಗೆ ರಾಮಲಲ್ಲಾ ವಿಗ್ರಹವನ್ನು ಸ್ಥಾಪನೆ ಮಾಡಿದ್ದರು.
  • ಡಿಸೆಂಬರ್ 29 ರಂದು ಫೈಜಾಬಾದ್ ನ್ಯಾಯಾಲಯವು ಬಾಬರಿ ಮಸೀದಿಯನ್ನು ವಿವಾದಿತ ಭೂಮಿ ಎಂದು ಘೋಷಿಸಿತು ಮತ್ತು ಅದರ ಮುಖ್ಯ ಬಾಗಿಲನ್ನು ಲಾಕ್ ಮಾಡಿತು.
  • 1950ರ ಜನವರಿ 16ರಂದು, ಸ್ವತಂತ್ರ ಭಾರತದಲ್ಲಿ ಅಯೋಧ್ಯೆ ಪ್ರಕರಣದ ಮೊದಲ ಪ್ರಕರಣವನ್ನು ಹಿಂದೂ ಮಹಾಸಭಾ ವಕೀಲ ಗೋಪಾಲ್ ಸಿಂಗ್ ವಿಶಾರದ್ ಅವರು ಫೈಜಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದರು.
  • ಗೋಪಾಲ್ ಸಿಂಗ್ ವಿಶಾರದ್ ಅವರು ರಾಮಲಲ್ಲಾನನ್ನು ಪೂಜಿಸುವ ಹಕ್ಕನ್ನು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಸಿವಿಲ್ ನ್ಯಾಯಾಧೀಶರು ಪೂಜೆಗೆ ಅನುಮತಿ ನೀಡಿದರು.
  • 1959ರ ಡಿಸೆಂಬರ್ 17 ರಂದು, ನಿರ್ಮೋಹಿ ಅಖಾಡ ವಿವಾದಿತ ಪ್ರದೇಶದ ಮಾಲೀಕತ್ವವನ್ನು ಹೊಂದಿದ್ದರು. ನಿರ್ಮೋಹಿ ಅಖಾಡ ಪ್ರಕರಣ ದಾಖಲಿಸಿ ರಾಮಜನ್ಮಭೂಮಿಯ ಆಸ್ತಿ ಮತ್ತು ಮಾಲೀಕತ್ವದ ಹಕ್ಕುಗಳನ್ನು ಹಸ್ತಾಂತರಿಸುವಂತೆ ಒತ್ತಾಯಿಸಿದರು.
  • 1961ರ ಡಿಸೆಂಬರ್ 18 ರಂದು, ಸುನ್ನಿ ವಕ್ಫ್ ಬೋರ್ಡ್ ರಾಮಲಲ್ಲಾ ಮೂರ್ತಿ ಸ್ಥಾಪನೆಯ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತು. ಅಲ್ಲದೆ ಮಸೀದಿ ಮತ್ತು ಸುತ್ತಮುತ್ತಲಿನ ಭೂಮಿಯಲ್ಲಿ ತಮ್ಮ ಹಕ್ಕುಗಳನ್ನು ವ್ಯಕ್ತಪಡಿಸಿತು.
  • 1986ರ ಜನವರಿ 25 ರಂದು ವಕೀಲ ಉಮೇಶ್ ಚಂದ್ರ ಪಾಂಡೆ ಪ್ರಕರಣ ದಾಖಲಿಸಿದರು. ವಿವಾದಿತ ಸ್ಥಳದ ಬೀಗ ತೆರೆದು ರಾಮಲಲ್ಲಾ ದರ್ಶನಕ್ಕೆ ನ್ಯಾಯಾಲಯದ ಅನುಮತಿ ಕೋರಿದರು.
  • 1986ರ ಫೆಬ್ರವರಿ 1ರಂದು, ಫೈಜಾಬಾದ್ ಜಿಲ್ಲಾ ನ್ಯಾಯಾಲಯವು ವಿವಾದಿತ ಪ್ರದೇಶದ ಬೀಗವನ್ನು ತೆರೆಯಲು ಅವಕಾಶ ಮಾಡಿಕೊಟ್ಟಿತು ಮತ್ತು ಹಿಂದೂಗಳಿಗೆ ರಾಮಲಲ್ಲಾನ ದರ್ಶನಕ್ಕೆ ಅವಕಾಶ ನೀಡಿತು. ಇದರ ನಂತರ ಬಾಬ್ರಿ ಮಸೀದಿ ಕ್ರಿಯಾ ಸಮಿತಿಯನ್ನು ರಚಿಸಲಾಯಿತು.
  • 1986ರ ಫೆಬ್ರವರಿ 3ರಂದು, ಅಲಹಾಬಾದ್ ಹೈಕೋರ್ಟ್ ವಿವಾದಿತ ಪ್ರದೇಶದ ಬೀಗವನ್ನು ತೆರೆಯುವ ಆದೇಶವನ್ನು ತಡೆಹಿಡಿಯಿತು.
  • 1989ರ ಜುಲೈ 1ರಂದು, ನಿವೃತ್ತ ನ್ಯಾಯಾಧೀಶರು ಮತ್ತು ವಿಶ್ವ ಹಿಂದೂ ಪರಿಷತ್ ಮುಖಂಡ ದೇವಕಿನಂದನ್ ಅಗರ್ವಾಲ್ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದರು. ಇದರಲ್ಲಿ ವಿವಾದಿತ ಭೂಮಿ ರಾಮಲಲ್ಲಾ ವಿರಾಜಮಾನರಿಗೆ ಸೇರಿದ್ದು ತಿಳಿಸಿದ್ದರು.
  • 1989ರ ಜುಲೈ 10 ರಂದು, ವಿವಾದಿತ ಪ್ರದೇಶಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಅಲಹಾಬಾದ್ ಹೈಕೋರ್ಟ್‌ನ ವಿಶೇಷ ಪೀಠಕ್ಕೆ ವರ್ಗಾಯಿಸಲಾಯಿತು.
  • 1992ರ ಡಿಸೆಂಬರ್ 6 ರಂದು ದೇಶಾದ್ಯಂತ ಸಾವಿರಾರು ಕರಸೇವಕರು ಅಯೋಧ್ಯೆಗೆ ತೆರಳಿದ್ದರು. ಇದರ ನಂತರ, ಅಯೋಧ್ಯೆಯ ಬಾಬ್ರಿ ಮಸೀದಿಯ ವಿವಾದಿತ ರಚನೆಯನ್ನು ಕೆಡವಿ ಹಾಕಲಾಗಿತ್ತು.
  • 1993 ರಲ್ಲಿ ಕೇಂದ್ರ ಸರ್ಕಾರವು ಹೊಸ ಕಾನೂನಿನ ಅಡಿಯಲ್ಲಿ 68 ಎಕರೆ ವಿವಾದಿತ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು.
  • 2002ರ ಅಕ್ಟೋಬರ್ 23 ರಂದು, ವಿವಾದಿತ ಸ್ಥಳವನ್ನು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಹೈಕೋರ್ಟ್ ಆದೇಶ ನೀಡಿತು. ಮಸೀದಿಗಿಂತ ಮೊದಲು ಅದರೊಳಗೆ ದೇವಸ್ಥಾನವಿದೆಯೇ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
  • 2003 ರಲ್ಲಿ, ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ಪ್ರಾಥಮಿಕ ವರದಿಯು ಇಲ್ಲಿ ದೇವಸ್ಥಾನ ಅಸ್ಥಿತ್ವದಲ್ಲಿತ್ತು ಎಂದು ತಿಳಿಸಿತು.
  • 2003ರ ಮಾರ್ಚ್ 5 ರಂದು, ಭಾರತೀಯ ಪುರಾತತ್ವ ಇಲಾಖೆ ವಿವಾದಿತ ಸ್ಥಳದಲ್ಲಿ ಉತ್ಖನನವನ್ನು ಪ್ರಾರಂಭಿಸಿತು.
  • 2003 ಆಗಸ್ಟ್ 22 ರಂದು, ಭಾರತೀಯ ಪುರಾತತ್ವ ಇಲಾಖೆಯು ಮಸೀದಿಯ ಕೆಳಗಿರುವ ದೇವಾಲಯದ ಹಲವು ಪುರಾವೆಗಳು ಕಂಡುಬಂದಿವೆ ಎಂದು ದೃಢಪಡಿಸಿತು.
  • 2010ರ ಸೆಪ್ಟೆಂಬರ್ 30 ರಂದು, ಅಲಹಾಬಾದ್ ಹೈಕೋರ್ಟ್ ವಿವಾದಿತ ಪ್ರದೇಶವನ್ನು ಅನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ನಡುವೆ ಸಮಾನವಾಗಿ ಮೂರು ಭಾಗಗಳಾಗಿ ವಿಂಗಡಿಸಿತು.
  • 2011ರ ಮೇ 9 ರಂದು, ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪನ್ನು ತಡೆಹಿಡಿಯಿತು.

    ನಂತರ, ಈ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಸ್ವತಃ ಸುಪ್ರೀಂ ಕೋರ್ಟ್ ಪ್ರಾರಂಭಿಸಿತು.
  • 2019ರ ಜನವರಿ 8 ರಂದು, ಅಯೋಧ್ಯೆ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ 5 ಸದಸ್ಯರ ಪೀಠವನ್ನು ರಚಿಸಿತು.
  • 2019ರ ಮಾರ್ಚ್ 8 ರಂದು, ಅಯೋಧ್ಯೆ ಪ್ರಕರಣಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ಸಮಿತಿಯನ್ನು ರಚಿಸಿತು.
  • ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಫ್‌ಎಂಐ ಕಲೀಫುಲ್ಲಾ ಅವರಲ್ಲದೆ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀ ರಾಮ್ ಪಂಚು ಕೂಡ ಇದರಲ್ಲಿ ಉಪಸ್ಥಿತರಿದ್ದರು. ಆದರೆ, ಸಂಧಾನ ಸಮಿತಿ ಜತೆಗಿನ ಮಾತುಕತೆಯೂ ಫಲಕಾರಿಯಾಗಲಿಲ್ಲ.
  • 2019ರ ನವೆಂಬರ್ 9 ರಂದು, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಐತಿಹಾಸಿಕ ತೀರ್ಪು ನೀಡುತ್ತಾ, ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಟ್ರಸ್ಟ್ ಅನ್ನು ರಚಿಸುವಂತೆ ಸರ್ಕಾರಕ್ಕೆ ಆದೇಶಿಸಿತು.

    ಇದರೊಂದಿಗೆ ಅಯೋಧ್ಯೆಯ ಹೊರಗೆ 5 ಎಕರೆ ಭೂಮಿಯನ್ನು ಮುಸ್ಲಿಮರಿಗೆ ನೀಡಲಾಗುವುದು ಎಂದು ತನ್ನ ಕಟ್ಟಕಡೆಯ ತೀರ್ಪಿನಲ್ಲಿ ತಿಳಿಸಿತು
  • 2020ರ ಆಗಸ್ಟ್ 5 ರಂದು, ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ದೇವಾಲಯದ ನಿರ್ಮಾಣಕ್ಕಾಗಿ ಭೂಮಿ ಪೂಜೆಯನ್ನು ಮಾಡಲಾಯಿತು. ಅಂದಿನಿಂದ, ಅಯೋಧ್ಯೆಯಲ್ಲಿ ರಾಮಲಲ್ಲಾನ ಭವ್ಯ ಮಂದಿರವನ್ನು ನಿರ್ಮಿಸಲಾಗುತ್ತಿದ್ದು, ಜನವರಿ 22 ರಂದು ಇದರಲ್ಲಿ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ.
click me!