ಕರ್ನಾಟಕ, 2024ರ ಚುನಾವಣೆಗೆ ಪಕ್ಷ ಅಣಿಗೊಳಿಸಿ: ಬಿಜೆಪಿ ನಾಯಕರಿಗೆ ಪ್ರಧಾನಿ ಗುರಿ

By Kannadaprabha NewsFirst Published Dec 7, 2022, 9:57 AM IST
Highlights

ಪ್ರತಿ ಬೂತ್‌ನಲ್ಲಿ ಬಿಜೆಪಿ ರಣಕಹಳೆ ಮೊಳಗಬೇಕು. ಈ ಮೂಲಕ ಬೂತ್‌ ಮಟ್ಟದಲ್ಲಿ ಪಕ್ಷ ಸದೃಢಗೊಳಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ

ನವದೆಹಲಿ: ‘ಪ್ರತಿ ಬೂತ್‌ನಲ್ಲಿ ಬಿಜೆಪಿ ರಣಕಹಳೆ ಮೊಳಗಬೇಕು. ಈ ಮೂಲಕ ಬೂತ್‌ ಮಟ್ಟದಲ್ಲಿ ಪಕ್ಷ ಸದೃಢಗೊಳಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. 2024ರ ಲೋಕಸಭೆ ಚುನಾವಣೆ ಮತ್ತು ಮುಂಬರುವ ಕರ್ನಾಟಕ ವಿಧಾನಸಭೆ ಮತ್ತು ಇತರ ಚುನಾವಣೆಗಳಿಗೆ ಸಂಬಂಧಿಸಿದಂತೆ ಇಲ್ಲಿ ನಡೆದ 2 ದಿನದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಮೋದಿ, ‘ಚುನಾವಣಾ ರಾಜ್ಯಗಳಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಒಂದು ತಿಂಗಳ ಒಳಗಾಗಿ ರಾಜ್ಯ ಘಟಕದ ಹಾಗೂ ಜಿಲ್ಲಾ ಪದಾಧಿಕಾರಿಗಳ ಸಭೆ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಮೇರಾ ಬೂತ್‌ ಸಬ್‌ಸೇ ಮಜಬೂತ್‌’ ಎಂಬ ಮಂತ್ರವನ್ನು ಪಠಿಸಿದ ಮೋದಿ, ‘ಬೂತ್‌ ಮಟ್ಟದಲ್ಲಿ ಪಕ್ಷ ಬಲಗೊಳ್ಳಬೇಕು. ಇದಕ್ಕಾಗಿ ಮತದಾರರ ಮನೆ ಬಾಗಿಲಿಗೆ ಕಾರ್ಯಕರ್ತರು ಹೋಗಿ, ಮನವರಿಕೆ ಮಾಡುವಂತೆ ನೋಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು. ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳ ಫಲಾನುಭವಿಗಳ ನೇರಾ ಸಂಪರ್ಕವಿರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ (State Govt) ಕಾರ್ಯಕ್ರಮಗಳ ಮನೆ ಮನೆಗೆ ಮುಟ್ಟಿಸಬೇಕು’ ಎಂದೂ ಸೂಚಿಸಿದರು ಎಂದು ಬಿಜೆಪಿ ಮೂಲಗಳು ಹೇಳಿವೆ.

ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರ, ಟಿಎಂಸಿ ನಾಯಕನ ಬಂಧಿಸಿದ ಪೊಲೀಸ್!

ಮುಂಬರುವ ಕರ್ನಾಟಕ ವಿಧಾನಸಭೆ ಹಾಗೂ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮನೆ ಮನೆ ಪ್ರಚಾರ ಆರಂಭಿಸಿ ಜನರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುವಂತೆ ಎಲ್ಲಾ ರಾಜ್ಯಗಳ ಬಿಜೆಪಿ ನಾಯಕರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಂಗಳವಾರ ಸೂಚನೆ ನೀಡಿದ್ದಾರೆ. ಎಲ್ಲಾ ರಾಜ್ಯಗಳ ಬಿಜೆಪಿ ಪಧಾಧಿಕಾರಿಗಳ ಜತೆಗಿನ ಸಭೆಯ 2ನೇ ಹಾಗೂ ಕೊನೆಯ ದಿನ ಸಭೆಯಲ್ಲಿ ಮಾತನಾಡಿದ ಅವರು ಈ ಸೂಚನೆ ನೀಡಿದರು ಹಾಗೂ ಇದೇ ವೇಳೆ ಮುಂದಿನ ವರ್ಷ ಕರ್ನಾಟಕ ಸೇರಿದಂತೆ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢಗಳಲ್ಲಿ ನಡೆಯುವ ಚುನಾವಣಾ ಸಿದ್ಧತೆಗಳ ಕುರಿತಾಗಿಯೂ ಅವರು ಚರ್ಚೆ ನಡೆಸಿದರು.

ಜಿ20 ಯಶಸ್ಸಿಗೆ ಸಹಕರಿಸಿ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಕೋರಿಕೆ

‘ಬಿಜೆಪಿ ನಾಯಕರ ಮನೆ ಮನೆ ಭೇಟಿ ಕೇವಲ ಪಕ್ಷದ ಸಾಧನೆಯನ್ನು ಜನರಿಗೆ ತಿಳಿಸುವುದಕ್ಕೆ ಸೀಮಿತವಾಗಬಾರದು. ಜನರ ಸಮಸ್ಯೆಗಳನ್ನು ಆಲಿಸಿ, ಅವರೊಂದಿಗೆ ಚರ್ಚೆ ನಡೆಸಬೇಕು. ಅಲ್ಲದೇ ಅವರ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಬೇಕು. ಬಿಜೆಪಿ ಕಾರ‍್ಯಕರ್ತರು ಈ ಪ್ರಚಾರದ ವೇಳೆ ಜನರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳಬೇಕು. ಕಷ್ಟದ ಸಮಯದಲ್ಲಿ ಜನರೊಂದಿಗೆ ನಿಲ್ಲಬೇಕು ಎಂಬ ಸೂಚನೆಗಳನ್ನು ನಡ್ಡಾ ನೀಡಿದ್ದಾರೆ’ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

click me!